ಮೈಸೂರು ಅರಮನೆಯ ಕೋಟೆ ಗೋಡೆ ಕುಸಿತ
ಮೈಸೂರು

ಮೈಸೂರು ಅರಮನೆಯ ಕೋಟೆ ಗೋಡೆ ಕುಸಿತ

October 19, 2022

ಮೈಸೂರು, ಅ.18(ಎಂಟಿವೈ)- ಐತಿಹಾಸಿಕ ಹಾಗೂ ಪ್ರವಾಸಿ ತಾಣವೂ ಆಗಿರುವ ಮೈಸೂರು ಅರಮನೆಯ ಕೋಟೆ ಗೋಡೆ ಕುಸಿದಿದೆ. ಕೋಟೆ ಮಾರಮ್ಮ ದೇವಾಲಯದ ಸಮೀಪ ಸ್ವಲ್ಪ ಭಾಗ ಕುಸಿದಿದ್ದು, ಕೂಡಲೇ ದುರಸ್ತಿ ಕಾರ್ಯ ಆರಂಭಿಸಲಾಗಿದೆ.

ಶತಮಾನಕ್ಕೂ ಹೆಚ್ಚು ಕಾಲದ ಇತಿಹಾಸವುಳ್ಳ ಅರಮನೆಯ ಕೋಟೆ ಅಲ್ಲಲ್ಲಿ ಶಿಥಿಲಗೊಂಡಿದ್ದು, ದುರಸ್ತಿಗೆ ಅರಮನೆ ಮಂಡಳಿ ಈಗಾಗಲೇ ಕ್ರಮ ಕೈಗೊಂಡಿದೆ. ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಟೆ ಗೋಡೆಯ ಕೆಲ ಭಾಗ ಇನ್ನೂ ಶಿಥಿಲಗೊಂಡಿದೆ. ಈಗ ರಕ್ಷಣಾ ಗೋಡೆ ಕುಸಿ ಯಲು ಮೂರು ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ. ಸತತ ಮಳೆ, ದಸರಾ ವೇಳೆ ಸಿಡಿಸಿದ ಸಿಡಿಮದ್ದು ಇಲ್ಲವೇ ದುರ್ಬಲಗೊಂಡ ಭಾಗ ಕುಸಿದಿದೆ ಎಂದು ಅಭಿಪ್ರಾಯ ಪಡಲಾಗಿದ್ದು, ಶಿಥಿಲಗೊಂಡಿರುವ ಇತರೆ ಭಾಗವನ್ನು ಗುರುತಿಸಿ, ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.

200 ಮೀಟರ್ ಕುಸಿತ: ಗನ್‍ಹೌಸ್ ಮುಂಭಾಗ ಕೋಟೆ ಮಾರಮ್ಮ ದೇವಾಲಯದ ಬಳಿ ಸುಮಾರು 20 ಮೀಟರ್ ಕೋಟೆ ಗೋಡೆ ಕುಸಿದಿದೆ. 30 ಅಡಿ ಎತ್ತರದ ಈ ಕೋಟೆ ಗೋಡೆ ಕುಸಿದಿದ್ದು, ಅರಮನೆಯ ಒಳಭಾಗದಿಂದ ಕೋಟೆ ಗೋಡೆ ಬಳಿ ಸಮತಟ್ಟು ಮಾಡಿದ್ದ ಮಣ್ಣು ಸಹ ಅವಶೇಷಗಳೊಂದಿಗೆ ಕುಸಿದಿದೆ.

ಫಿರಂಗಿ ಸಿಡಿಮದ್ದಿನಿಂದ ಸಡಿಲವಾಗಿತ್ತೆ!: ನಾಡಹಬ್ಬ ದಸರಾ ವೇಳೆ ವರಹಾ ದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ನಾಲ್ಕು ಬಾರಿ ಸಿಡಿಮದ್ದು ಸಿಡಿಸಲಾಗಿತ್ತು. ಅರಮನೆ ಮಂಡಳಿ ಕೋರಿಕೆಯ ಮೇರೆಗೆ ಎರಡು ಬಾರಿ ಸಿಡಿಮದ್ದು ತಾಲೀಮನ್ನು ದಸರಾ ವಸ್ತುಪ್ರದರ್ಶನದ ಪಾರ್ಕಿಂಗ್ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಮೊದಲ ತಾಲೀಮನ್ನು ವರಹಾ ದ್ವಾರದ ಪಾರ್ಕಿಂಗ್ ಸ್ಥಳದಲ್ಲಿ, ಅರಮನೆ ಆವರಣದಲ್ಲಿ ನಡೆಸಿದ ಜಂಬೂಸವಾರಿ ತಾಲೀಮಿನ ವೇಳೆ ಒಂದು ಬಾರಿ 7 ಸಿಡಿಮದ್ದು, ಕೊನೆ ತಾಲೀಮಿನಲ್ಲಿ 21 ಬಾರಿ ಹಾಗೂ ಜಂಬೂಸವಾರಿ ದಿನವೂ 21 ಬಾರಿ ಕುಶಾಲ ತೋಪು ಹಾರಿಸಲಾಗಿತ್ತು. ಈ ವೇಳೆ ಉಂಟಾದ ಕಂಪನದಿಂದ ಕೋಟೆ ಗೋಡೆ ಶಿಥಿಲಗೊಂಡಿತ್ತು ಎನ್ನಲಾಗಿದೆ. ಹಾಗಾಗಿ ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ನೀರು ತುಂಬಿಕೊಂಡು, ದುರ್ಬಲತೆಯಿಂದ ಕೋಟೆ ಗೋಡೆ ಕುಸಿದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತುರ್ತು ಕ್ರಮ: ಮುಂಜಾನೆಯೇ ಗೋಡೆ ಕುಸಿದಿರುವ ಮಾಹಿತಿ ತಿಳಿದ ಅರಮನೆ ಮಂಡಳಿ, ಕೂಡಲೇ ಕ್ರಮ ಕೈಗೊಂಡು ಕುಸಿದ ಭಾಗದಲ್ಲಿ ಟಾರ್ಪಾಲ್ ಕಟ್ಟಿ, ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಅಲ್ಲದೆ, ಗೋಡೆ ದುರಸ್ತಿ ಕಾಮಗಾರಿ ಆರಂಭಿಸಲಾಗಿದೆ.

ತಿಂಗಳ ಹಿಂದೆಯೇ ಟೆಂಡರ್: ಅರಮನೆಯ ರಕ್ಷಣಾ ಗೋಡೆಯ ಕೆಲವು ಭಾಗ ಶಿಥಿಲಗೊಂಡಿದ್ದು, ಅದರ ದುರಸ್ತಿಗೆ ಅರಮನೆ ಮಂಡಳಿ ಇ-ಟೆಂಡರ್ ಕರೆದಿತ್ತು. ಶಿಥಿಲಗೊಂಡ ಮೂರು ಸ್ಥಳದಲ್ಲಿ 50 ಮೀಟರ್ ಗೋಡೆ ದುರಸ್ತಿಗೆ ಗುರುತಿಸಲಾಗಿತ್ತು. ಅದಕ್ಕಾಗಿ 39.60 ಲಕ್ಷ ರೂ.ಗಳ ಟೆಂಡರ್ ಕರೆಯಲಾಗಿತ್ತು. ಗುತ್ತಿಗೆದಾರ ರಾಮಚಂದ್ರ ಎಂಬುವರು ಟೆಂಡರ್ ಪಡೆದಿದ್ದು, ಭದ್ರತಾ ಠೇವಣಿ ಕೂಡ ಸಲ್ಲಿಸಿದ್ದಾರೆ. ದಸರಾ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಿರಲಿಲ್ಲ. ಆದರೆ, ಮಳೆಯಿಂದಾಗಿ ಇದೀಗ ಗೋಡೆ ಕುಸಿತದ ಹಿನ್ನೆಲೆಯಲ್ಲಿ ಕೂಡಲೇ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ.

Translate »