ಜನತೆಗೆ ಮನದಟ್ಟು ಮಾಡಿಕೊಡಲು ರಾಜ್ಯಾದ್ಯಂತÀ ನ.1ರಿಂದ `ಪಂಚರತ್ನ ರಥಯಾತ್ರೆ’
ಮೈಸೂರು

ಜನತೆಗೆ ಮನದಟ್ಟು ಮಾಡಿಕೊಡಲು ರಾಜ್ಯಾದ್ಯಂತÀ ನ.1ರಿಂದ `ಪಂಚರತ್ನ ರಥಯಾತ್ರೆ’

October 20, 2022

ಮೈಸೂರು, ಅ.19(ಆರ್‍ಕೆಬಿ)- ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಹಿರಿಯ ನಾಯಕ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್‍ನ ಐದು ವಿಶಿಷ್ಟ ಜನಸ್ನೇಹಿ ಕಾರ್ಯ ಕ್ರಮಗಳನ್ನು ಒಳಗೊಂಡ `ಪಂಚರತ್ನ ರಥ ಯಾತ್ರೆ’ಗೆ ನ.1ರ ಕನ್ನಡ ರಾಜ್ಯೋತ್ಸವ ದಿನದಂದು ಕೋಲಾರ ಜಿಲ್ಲೆಯ ಮುಳಬಾಗಿಲುವಿನಲ್ಲಿ ಚಾಲನೆ ದೊರೆ ಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಹೊರವಲಯದ ಹೂಟಗಳ್ಳಿ ಬಳಿಯ ಖಾಸಗಿ ರೆಸಾರ್ಟ್‍ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಜೆಡಿಎಸ್‍ನ ಸಂಭವನೀಯ ಅಭ್ಯರ್ಥಿಗಳು ಮತ್ತು ಪ್ರಮುಖರ ಸಮಾ ಲೋಚನಾ ಕಾರ್ಯಾಗಾರಕ್ಕೂ ಮುನ್ನ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಉಚಿತ ಶಿಕ್ಷಣ, ಉಚಿತ ಆರೋಗ್ಯ, ರೈತರಿಗೆ ವಿಶೇಷ ಕಾರ್ಯಕ್ರಮಗಳು, ಪ್ರತಿ ಕುಟುಂಬಕ್ಕೆ ಉದ್ಯೋಗ, ಪ್ರತಿ ಕುಟುಂಬಕ್ಕೆ ಮನೆ ನೀಡುವುದು ಪಕ್ಷ ರೂಪಿಸಿರುವ `ಪಂಚರತ್ನ’ಗಳಾಗಿವೆ. ಈ ಯೋಜನೆಗಳನ್ನು ನಾಡಿನ ಜನರ ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಪಂಚರತ್ನ ರಥಯಾತ್ರೆಯ ರೀತಿಯಲ್ಲಿ ಯಾವುದೇ ಪಕ್ಷ, ಸರ್ಕಾರ ಮಾಡಿಲ್ಲ. ಅಂಥದ್ದೊಂದು ಕಾರ್ಯಕ್ರಮವನ್ನು ಜನರಿಗಾಗಿ ಜೆಡಿಎಸ್ ರೂಪಿಸಿದೆ ಎಂದರು.

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಆಶಯದಂತೆ ಈ ಪಂಚರತ್ನ ರಥಯಾತ್ರೆ ಕೋಲಾರ ಜಿಲ್ಲೆಯ ಮುಳಬಾಗಿಲುವಿನಲ್ಲಿ ನ.1ರಂದು ಶ್ರೀ ಗಣೇಶ ಮತ್ತು ಶ್ರೀ ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆಯಲಿದೆ. 1994ರಲ್ಲಿ ಮುಳಬಾಗಿಲುವಿನಿಂದಲೇ ಹೆಚ್.ಡಿ.ದೇವೇಗೌಡರು ಪ್ರಚಾರ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಹಾಗಾಗಿ ಮುಂಬರುವ ವಿಧಾನಸಭೆ ಚುನಾವಣೆಗೂ ಮುಳಬಾಗಿಲುನಿಂದಲೇ ಚುನಾವಣಾ ಪ್ರಚಾರ ಆರಂಭಿಸುತ್ತೇವೆ. ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ನಡೆಸುತ್ತೇವೆ. ಮಿಷನ್ 123 ಜೆಡಿಎಸ್ ಗುರಿಯಾಗಿದೆ. ಆದರೆ ಕೆಲವರು ಜೆಡಿಎಸ್‍ಗೆ 15ದೋ , 20ತ್ತೋ, 30ತ್ತೋ ಸೀಟುಗಳು ಬರಬಹುದು ಎಂದು ಕುಹಕವಾಡುತ್ತಿದ್ದಾರೆ. ಅವರೆಲ್ಲರಿಗೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದೇವೆ. ಅದಕ್ಕೆ ಮುನ್ನುಡಿಯಾಗಿ ಚಾಮುಂಡೇಶ್ವರಿಯ ಸನ್ನಿಧಾನವಾಗಿರುವ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪಕ್ಷದ ಕಾರ್ಯಾಗಾರ ನಡೆಸುತ್ತಿದ್ದೇವೆ. ಜೆಡಿಎಸ್‍ನ 126 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದೇವೆ. ರಾಜ್ಯದಲ್ಲಿ ಜೆಡಿಎಸ್‍ಗೆ ಉತ್ತಮ ವಾತಾವರಣವಿದೆ ಎಂದರು. ಆರು ತಿಂಗಳ ಕಾಲ ರಾಜ್ಯಾದ್ಯಂತ ರಥ ಸಂಚರಿಸಲಿದೆ. ಈ ರಥಯಾತ್ರೆಯು ರಾಜ್ಯದ 120 ತಾಲೂಕುಗಳನ್ನು ಒಳಗೊಳ್ಳುತ್ತದೆ. ಯಾತ್ರೆಯ ಸಮಯದಲ್ಲಿ ಹಳ್ಳಿಗಳಲ್ಲಿ ವಾಸ್ತವ್ಯ ಮಾಡುತ್ತೇವೆ. ಕರ್ನಾಟಕದ ಜನರ ಕಲ್ಯಾಣಕ್ಕಾಗಿ ಪ್ರಾದೇಶಿಕ ಪಕ್ಷದ ಅಗತ್ಯವನ್ನು ಎತ್ತಿ ಹಿಡಿಯಲು ನಾಲ್ಕು ಹಂತಗಳಲ್ಲಿ ಯಾತ್ರೆ ನಿರಂತರವಾಗಿ ನಡೆಯಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ನಾಲ್ಕು ಹಂತಗಳಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಮುಂದಿನ ಫೆಬ್ರವರಿಯವರೆಗೆ ನಡೆಯಲಿದೆ. 35 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ರಥಯಾತ್ರೆ ಸಾಗಲಿದೆ. 6 ಟ್ಯಾಬ್ಲೋ ವಾಹನಗಳು ರಥಯಾತ್ರೆ ಜೊತೆಯಲ್ಲಿ ರುತ್ತವೆ. ಒಂದು ವಾಹನದಲ್ಲಿ ಬಹಿರಂಗ ಸಭೆ ನಡೆಸಲು ವೇದಿಕೆ ಇರುತ್ತದೆ. ಬಹಳಷ್ಟು ಜನರು ಜೆಡಿಎಸ್‍ನವರು 15-20 ಸ್ಥಾನ ಗೆಲ್ಲುತ್ತಾರೆ ಎನ್ನುತ್ತಾರೆ. ಆದರೆ 2023ಕ್ಕೆ ಸ್ವತಂತ್ರವಾಗಿ ಪ್ರಾದೇಶಿಕ ಸರ್ಕಾರ ರಚನೆಯಾಗಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು ಇನ್ನಿತರರು ಉಪಸ್ಥಿತರಿದ್ದರು.

Translate »