ಬೈಕುಗಳ ನಡುವೆ ಡಿಕ್ಕಿ: ಸವಾರ ಸಾವು
ಮೈಸೂರು

ಬೈಕುಗಳ ನಡುವೆ ಡಿಕ್ಕಿ: ಸವಾರ ಸಾವು

July 23, 2020

ಮೈಸೂರು, ಜು.22(ಆರ್‍ಕೆ)-ನಿನ್ನೆ ರಾತ್ರಿ ಬೈಕುಗಳ ನಡುವೆ ಡಿಕ್ಕಿ ಸಂಭವಿಸಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ಇಂದು ಸಾವನ್ನಪ್ಪಿದ್ದು, ಗಾಯಗೊಂಡಿರುವ ಮತ್ತಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನ ಸರಸ್ವತಿಪುರಂನ ಬೇಕ್ ಪಾಯಿಂಟ್ ಸರ್ಕಲ್‍ನಲ್ಲಿ ಮಂಗಳವಾರ ರಾತ್ರಿ ಈ ಅಪಘಾತ ಸಂಭವಿಸಿತ್ತು.

ಮೈಸೂರಿನ ಕೆ.ಜಿ.ಕೊಪ್ಪಲು ನಿವಾಸಿ ರಾಹುಲ್(26) ಸಾವನ್ನಪ್ಪಿದ ಯುವಕ. ಘಟನೆಯಲ್ಲಿ ಇಮ್ರಾನ್ ಮತ್ತು ಆಕಾಶ ಎಂಬುವರು ಗಾಯಗೊಂಡಿದ್ದರು. ಸಾಹುಕಾರ್ ಚೆನ್ನಯ್ಯ ರಸ್ತೆಯಿಂದ ವಿಶ್ವಮಾನವ ಜೋಡಿ ರಸ್ತೆ ಕಡೆಗೆ ಬಜಾಜ್ ಪಲ್ಸರ್ (ಕೆಎ 09, ಹೆಚ್‍ಎಕ್ಸ್ 2114) ಬೈಕಿನಲ್ಲಿ ರಾಹುಲ್ ಹೋಗುತ್ತಿದ್ದಾಗ ವಿಜಯ ಬ್ಯಾಂಕ್ ಸರ್ಕಲ್‍ನಿಂದ ಕುಕ್ಕರಹಳ್ಳಿ ರಸ್ತೆ ಕಡೆಗೆ ವೇಗವಾಗಿ ಬರುತ್ತಿದ್ದ ಕೆಟಿಎಂ ಬೈಕ್ ರಾತ್ರಿ ಸುಮಾರು 9.45 ಗಂಟೆ ವೇಳೆಗೆ ಬೇಕ್ ಪಾಯಿಂಟ್ ಜಂಕ್ಷನ್‍ನಲ್ಲಿ ಅಪ್ಪಳಿಸಿದೆ.

ಆ ರಭಸಕ್ಕೆ ಪಲ್ಸರ್ ಬೈಕ್ ಸವಾರ ರಾಹುಲ್ ಸುಮಾರು 20 ಮೀಟರ್ ದೂರ ಹಾರಿ ಬೈಕ್‍ನೊಂದಿಗೆ ಬಿದ್ದಿದ್ದು, ವಿಶ್ವ ಮಾನವ ಜೋಡಿ ರಸ್ತೆಯ ವಿಭಜಕ ಆತನ ತಲೆಗೆ ಅಪ್ಪಳಿಸಿ ತೀವ್ರ ಗಾಯಗಳಾಗಿತ್ತು. ತಕ್ಷಣ ಯುವಕನನ್ನು ಬೃಂದಾವನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ರಾಹುಲ್ ಕೆಲವೇ ಗಂಟೆಯಲ್ಲಿ ಕೊನೆಯುಸಿರೆಳೆದ.

ಘಟನೆಯಿಂದ ಕೆಟಿಎಂ ಬೈಕ್ ಸವಾರರಾದ ಇಮ್ರಾನ್ ಮತ್ತು ಆಕಾಶ ಅವರಿಗೂ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕೆ.ಆರ್.ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಹೆಚ್.ಎನ್. ವಿನಯ್ ಹಾಗೂ ಸಿಬ್ಬಂದಿ ಮಹಜರು ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾತ್ರಿ ಕಫ್ರ್ಯೂ ಜಾರಿ ಇದ್ದರೂ ಲೆಕ್ಕಿಸದೆ ಅತೀ ವೇಗ ಚಾಲನೆ ಮಾಡಿರುವುದೇ ಅಪಘಾತಕ್ಕೆ ಕಾರಣ ಎಂದು ಕೆ.ಆರ್.ಸಂಚಾರ ಠಾಣೆ ಇನ್ಸ್‍ಪೆಕ್ಟರ್ ವಿನಯ್ ತಿಳಿಸಿದ್ದಾರೆ.

Translate »