ಮೈಸೂರು, ಜು.22(ವೈಡಿಎಸ್)- `ಜನರು ತಿಳಿ ದಿರುವಂತೆ ಕೋವಿಡ್-19 ದೊಡ್ಡ ಕಾಯಿಲೆ ಏನಲ್ಲ. ಶೀತ, ನೆಗಡಿಯಾದಾಗ ಸೀನಿದರೆ ಬೇರೆಯವರಿಗೂ ಹರಡುವಂತೆ ಕೋವಿಡ್-19 ಸೋಂಕೂ ಹರಡುತ್ತದೆ. ಇದಕ್ಕೆ ಯಾರೂ ಭಯಪಡಬೇಕಿಲ್ಲ. ಬದಲಾಗಿ ಧೈರ್ಯದಿಂದ ಇರಬೇಕು. ಮಾಸ್ಕ್ ಧರಿಸುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾಡಬೇಕು ಅಷ್ಟೆ…ಇದು ಕೆಪಿಟಿಸಿಎಲ್ ಉದ್ಯೋಗಿ ಬಿ.ಎಂ.ಮಧು ಅವರ ಅನುಭವದ ಮಾತುಗಳು.
`ನನಗೆ ಕೋವಿಡ್ ಹೇಗೆ ಬಂತು ಎಂಬುದನ್ನು ಇದುವರೆಗೂ ಕಂಡುಕೊಳ್ಳಲಾಗಿಲ್ಲ. ನಾನು ಕೋವಿಡ್ ಪರೀಕ್ಷೆ ಮಾಡಿಸುವ ವಾರದ ಮುನ್ನ ಜ್ವರ ಬಂದಿತ್ತು. ನಂತರ ಆರೋಗ್ಯವಾಗಿಯೇ ಇದ್ದೆ. ಆದರೂ ಒಮ್ಮೆ ಪರೀಕ್ಷೆ ಮಾಡಿಸೋಣ ಎಂದು ಆಸ್ಪತ್ರೆಗೆ ಹೋದೆ. ಪರೀಕ್ಷೆಗೊಳಪಟ್ಟಾಗ ಪಾಸಿಟಿವ್ ವರದಿ ಬಂದಿತು. ಬಳಿಕ ಡಿಹೆಚ್‍ಓ ಅವರಿಂದ ಕರೆಬಂದಿತು. ಜು.1 ರಂದು ವೈದ್ಯರು ಆಂಬ್ಯುಲೆನ್ಸ್‍ನಲ್ಲಿ ಮನೆಗೆ ಬಂದು ಮುಂಜಾಗ್ರತಾ ಕ್ರಮಗಳೊಂದಿಗೆ ಆಸ್ಪತ್ರೆಗೆ ಕರೆ ದೊಯ್ದರು. ರಕ್ತ ಪರೀಕ್ಷೆ ಮತ್ತು ಇಸಿಜಿ ಮಾಡಿಸಿದರು’.
`ಕೋವಿಡ್ ಸೋಂಕು ದೃಢಪಟ್ಟಾಗ ಭಯವೇನೂ ಆಗಲಿಲ್ಲ. ಆದರೆ, ಜನರು ನನ್ನನ್ನು ನೋಡುವ ದೃಷ್ಟಿಕೋನದಿಂದ ಭಯವಾಯಿತು. ಗುಣಮುಖರಾಗಿ ವಾಪಸ್ ಬನ್ನಿ ಎಂದು ನೆರೆಹೊರೆಯವರು ಹಾರೈಸ ಬೇಕು, ಸಾಂತ್ವನ ಹೇಳ ಬೇಕು. ಅದುಬಿಟ್ಟು ಕೋವಿಡ್ ಬಂದಿದೆ ಎಂದು ಬೇರೆ ಯದೇ ರೀತಿ ಮಾತನಾಡಿದರೆ ಕಷ್ಟ. ಇದರಿಂದ ಕೆಲ ವರು ಖಿನ್ನತೆಗೆ ಒಳಗಾಗುವ ಸಂಭವ ಹೆಚ್ಚಿರುತ್ತದೆ’.
ಜನರು ತಿಳಿದಿರುವಂತೆ ಕೋವಿಡ್ ಮಹಾಮಾರಿ ಯಲ್ಲ. ಅದು ಯಾವಾಗ ಬರುತ್ತೆ, ಹೋಗುತ್ತೆ ಎಂಬುದೂ ಗೊತ್ತಾಗುವುದಿಲ್ಲ. ಹೆಚ್ಚಾಗಿ ಬಿಸಿನೀರು ಕುಡಿದರೆ ಶೀತ, ನೆಗಡಿ ತಗ್ಗುವಂತೆ ಕೋವಿಡ್ ಸಹ ಕಡಿಮೆಯಾಗುತ್ತದೆ’.
ಆರಾಮವಾಗಿ ಇದ್ದೇನೆ: `6 ದಿನಗಳ ಕಾಲ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದು ವೈದ್ಯರ ಸಲಹೆಯಂತೆ 14 ದಿನ ಮನೆಯಲ್ಲೇ ಕ್ವಾರಂಟೈನ್‍ನಲ್ಲಿದ್ದೆ. ಜು.20ಕ್ಕೆ ಅದು ಮುಕ್ತಾಯ ವಾಯಿತು. ಮಂಗಳವಾರದಿಂದ ಕೆಲಸಕ್ಕೆ ಹೋಗು ತ್ತಿದ್ದೇನೆ. ಕಚೇರಿಯ ಎಲ್ಲ ಸಿಬ್ಬಂದಿ ನನ್ನೊಂದಿಗೆ ಚೆನ್ನಾಗಿ ಮಾತನಾಡಿದರು. ಆರಾಮವಾಗಿ ಇದ್ದೇನೆ’.
ಹೆದರಬೇಕಿಲ್ಲ: `ಆಸ್ಪತ್ರೆಯಲ್ಲಿ ಊಟದ ವ್ಯವಸ್ಥೆ ಚೆನ್ನಾಗಿತ್ತು. ಸಮಯಕ್ಕೆ ಸರಿಯಾಗಿ ಬಿಸಿಯೂಟ ನೀಡುತ್ತಿದ್ದರು. ವೈದ್ಯರು ಮತ್ತು ಸಿಬ್ಬಂದಿ ಚೆನ್ನಾಗಿ ನೋಡಿಕೊಂಡರು. ಯಾರೊಬ್ಬರೂ ರೋಗಿಗಳಂತೆ ಇರಲಿಲ್ಲ. ಬದಲಾಗಿ ಕ್ರೀಡಾಪಟುಗಳಂತೆ ಲವ ಲವಿಕೆಯಿಂದ ಇರುತ್ತಿದ್ದರು. ಹಾಗಾಗಿ ಕೋವಿಡ್‍ಗೆ ಹೆದರಬೇಕಿಲ್ಲ. ಒಂದು ವೇಳೆ ಬಂದರೆ ಹಾಲಿಗೆ ಅರಿಶಿಣ, ಶುಂಠಿ, ಮೆಣಸು ಹಾಕಿ ಕಷಾಯ ಮಾಡಿ ದಿನದಲ್ಲಿ ಎರಡು ಬಾರಿ ಕುಡಿದರೆ ಗುಣಮುಖ ರಾಗುತ್ತೇವೆ. ಧೈರ್ಯದಿಂದ ಎದುರಿಸಬೇಕು’.