`ಪಾಲಿಕೆ ನಡೆ ಜನರ ಕಡೆ’ ಅಭಿಯಾನಕ್ಕೆ ಅಂಕಣಕಾರ ಎಂಕೆ ಬೆಂಬಲ, ತೆರಿಗೆ ಪಾವತಿ
ಮೈಸೂರು

`ಪಾಲಿಕೆ ನಡೆ ಜನರ ಕಡೆ’ ಅಭಿಯಾನಕ್ಕೆ ಅಂಕಣಕಾರ ಎಂಕೆ ಬೆಂಬಲ, ತೆರಿಗೆ ಪಾವತಿ

October 21, 2020

ಮೈಸೂರು, ಅ.20(ಎಸ್‍ಪಿಎನ್)- `ಪಾಲಿಕೆ ನಡೆ-ಜನರ ಕಡೆ’ ಆಸ್ತಿ ತೆರಿಗೆ ವಸೂಲಿ ಅಭಿಯಾನಕ್ಕೆ ಹೆಬ್ಬಾಳ ನಿವಾಸಿ ಅಂಕಣಕಾರ, ಸಾಹಿತಿ ಪ್ರೊ.ಎಂ.ಕೃಷ್ಣೇ ಗೌಡ ಬೆಂಬಲ ಸೂಚಿಸಿದ್ದಾರೆ. ತಮ್ಮ ಆಸ್ತಿ ತೆರಿಗೆ ಬಾಬ್ತಿನ 75 ಸಾವಿರ ರೂ.ಗಳ ಚೆಕ್ ಅನ್ನು ಸಹಾಯಕ ಕಂದಾಯ ಅಧಿಕಾರಿ ಬಿ.ವಿ.ವೆಂಕಟೇಶ್ ಅವರಿಗೆ ಹಸ್ತಾಂತರಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5ರ ವ್ಯಾಪ್ತಿಯ ಹೆಬ್ಬಾಳ 2ನೇ ಹಂತದ ನಿವಾಸಿಯಾಗಿರುವ ಹಿರಿಯ ಸಾಹಿತಿ ಪ್ರೊ.ಎಂ.ಕೃಷ್ಣೇಗೌಡರು ಆಸ್ತಿ ತೆರಿಗೆ ಪಾವತಿಸಿ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದ್ದಾರೆ ಎಂದು ವೆಂಕಟೇಶ್ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ವಲಯ ಕಚೇರಿ 5ರ ವ್ಯಾಪ್ತಿಯಲ್ಲಿ ನಮ್ಮ ವಲಯ ಕಚೇರಿ ವ್ಯಾಪ್ತಿಯಲ್ಲಿ ವಾರ್ಷಿಕ 8.62 ಕೋಟಿ ರೂ. ಆಸ್ತಿ ತೆರಿಗೆ ವಸೂಲಾಗಬೇಕಿದೆ. ಇದರಲ್ಲಿ 5.50 ಕೋಟಿ ರೂ. ಮಾತ್ರ ಆಸ್ತಿ ತೆರಿಗೆ ಇಲ್ಲಿಯವರೆಗೆ ವಸೂಲಾಗಿದೆ. ಉಳಿದ 3.12 ಕೋಟಿ ರೂ. ಆಸ್ತಿ ತೆರಿಗೆ ವಸೂಲಾಗಬೇಕಿದೆ ಎಂದು ವೆಂಕಟೇಶ್ ಮಾಹಿತಿ ನೀಡಿದರು.

ವಲಯ ಕಚೇರಿ-5ರ ವ್ಯಾಪ್ತಿಗೆ ಬರುವ ವಾರ್ಡ್ ನಂ.1ರಲ್ಲಿ 4,250 ಆಸ್ತಿಗಳಿದ್ದು, ವಾರ್ಡ್ ನಂ.2ರಲ್ಲಿ 1350, ವಾರ್ಡ್ ನಂ.3ರಲ್ಲಿ 758, ವಾರ್ಡ್ ನಂ.4ರಲ್ಲಿ 732, ವಾರ್ಡ್ ನಂ.5ರಲ್ಲಿ 1462, ವಾರ್ಡ್ ನಂ.7ರಲ್ಲಿ 830, ವಾರ್ಡ್ ನಂ.20ರಲ್ಲಿ 4746 ಸೇರಿದಂತೆ ಒಟ್ಟು 14,128 ಆಸ್ತಿಗಳನ್ನು ಗುರುತಿಸಲಾಗಿದೆ. ಕ್ರಮವಾಗಿ ವಾರ್ಡ್ ನಂ.1ರಲ್ಲಿ 91, ವಾರ್ಡ್ ನಂ.2ರಲ್ಲಿ 816, ವಾರ್ಡ್ ನಂ.3ರಲ್ಲಿ 1,254, ವಾರ್ಡ್ ನಂ.4ರಲ್ಲಿ 1,145, ವಾರ್ಡ್ ನಂ.5ರಲ್ಲಿ 480, ವಾರ್ಡ್ ನಂ.7ರಲ್ಲಿ 857, ವಾರ್ಡ್ ನಂ.20ರಲ್ಲಿ 73 ಸೇರಿದಂತೆ ಒಟ್ಟು 4,719 ರೆವಿನ್ಯೂ ಆಸ್ತಿಗಳಿವೆ. ಇವುಗಳಲ್ಲಿ 1,875 ಆಸ್ತಿಗಳ ಮಾಲೀಕರಿಂದ ಆಸ್ತಿ ತೆರಿಗೆ ವಸೂಲಾಗಿದೆ. ಉಳಿದ ಆಸ್ತಿ ಮಾಲೀಕರು ಕೂಡಲೇ ತೆರಿಗೆ ಪಾವತಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿರುವ ಅಧಿಕಾರಿ, ರೆವಿನ್ಯೂ ಆಸ್ತಿಗಳ ಮಾಲೀ ಕರು ಈಗ ತೆರಿಗೆ ಪಾವತಿಸಿದರೆ, ಮುಂದಿನ ಅಕ್ರಮ-ಸಕ್ರಮ ಯೋಜನೆಯಡಿ ಆಸ್ತಿಯನ್ನು ಸಕ್ರಮಗೊಳಿಸಲು ಅನುಕೂಲವಾಗಲಿದೆ ಎಂದು ಗಮನ ಸೆಳೆಯಲೆತ್ನಿಸಿದ್ದಾರೆ.

ಪಾಲಿಕೆ ಆಯುಕ್ತರ ಆದೇಶದಂತೆ ಅ.10ರಿಂದ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ `ಪಾಲಿಕೆ ನಡೆ, ಜನರ ಕಡೆ’ಗೆ ಆಸ್ತಿ ತೆರಿಗೆ ವಸೂಲಾತಿ ಅಭಿಯಾನ ಹಮ್ಮಿಕೊಂಡಿದ್ದು, ಸ್ಥಳದಲ್ಲೇ ಆಸ್ತಿಗಳ ಮಾಲೀಕರಿಂದ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತಿದೆ. ಈ ತಿಂಗಳ ಅಂತ್ಯ ದವರೆಗೆ ಈ ಅಭಿಯಾನ ಇರುತ್ತದೆ ಎಂದರು. ವಲಯ ಕಚೇರಿಯ 5ರ ವ್ಯಾಪ್ತಿಯಲ್ಲಿ 12 ಕಲ್ಯಾಣ ಮಂಟಪಗಳಿದ್ದು, ಇವುಗಳ ಆಸ್ತಿ ತೆರಿಗೆ ಬಾಕಿಯಿದೆ. ಹಾಗಾಗಿ ಛತ್ರಗಳ ಮಾಲೀಕರು ಆಸ್ತಿ ತೆರಿಗೆ ಪಾವತಿಸುವಂತೆ ವಲಯ ಆಯುಕ್ತ ವೀರೇಶ್ ನಿರ್ದೇಶನ ದಂತೆ, ಸಹಾಯಕ ಕಂದಾಯಾಧಿಕಾರಿ ಬಿ.ವಿ.ವೆಂಕಟೇಶ್ ಜನರಲ್ಲಿ ಮನವಿ ಮಾಡಿದ್ದಾರೆ.

Translate »