ಬಿಜೆಪಿ ಕಾರ್ಯಕರ್ತರ ಆಧರಿತ ಪಕ್ಷ
ಮೈಸೂರು

ಬಿಜೆಪಿ ಕಾರ್ಯಕರ್ತರ ಆಧರಿತ ಪಕ್ಷ

October 21, 2020

ಮೈಸೂರು, ಅ.20-ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಪ್ರಥಮ ಕಾರ್ಯಕಾರಿಣಿ ರಾಮಕೃಷ್ಣನಗರದ ಖಾಸಗಿ ಹೋಟೆಲ್‍ನಲ್ಲಿ ನಡೆಯಿತು. ಮಾಜಿ ಸಚಿವ ಸಿ.ಹೆಚ್. ವಿಜಯ ಶಂಕರ್ ಉದ್ಘಾಟನೆ ನೆರವೇರಿಸಿ, ಭಾರತೀಯ ಜನತಾ ಪಾರ್ಟಿಯು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಶರ್ಮಾರವರ ತ್ಯಾಗ-ಬಲಿದಾನದಿಂದ ಪ್ರಾರಂಭವಾಗಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರ, ಈಗಿನ ನರೇಂದ್ರ ಮೋದಿಯವರ ಸರ್ಕಾರದವರೆಗೂ ನಡೆದು ಬಂದ ಹಾದಿಯನ್ನು ಸ್ಮರಿಸಿದರು. ಬಿಜೆಪಿ, ಕಾರ್ಯಕರ್ತರ ಆಧಾರಿತ ಪಕ್ಷವಾಗಿ ಗುರುತಿಸಿಕೊಂಡಿದೆ. ಜಾತಿ ಹಾಗೂ ಕುಟುಂಬ ಕೇಂದ್ರಿತ ಪಕ್ಷಗಳಿಗಿಂತ ವಿಭಿನ್ನ ಮತ್ತು ಕೇವಲ ಬಿಜೆಪಿಯಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತ ತನ್ನ ಸಂಕಲ್ಪದಿಂದ ಅಸಾಮಾನ್ಯವಾಗಿ ಬೆಳೆಯಬಹುದು ಎಂದರು.

ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ ಕಾರ್ಯಕರ್ತರ ಉಪಸ್ಥಿತಿಯ ಮಾಹಿತಿ ಪಡೆದರು. ಕಾರ್ಯಕಾರಿಣಿಯ ನಡವಳಿಕೆಗಳ ಬಗ್ಗೆ ತಿಳಿಸಿ ವಿವಿಧ ಮೋರ್ಚಾಗಳ ವರದಿ ಅವಲೋಕನ ನಡೆಸಿ, ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.

ವಿಭಾಗ ಪ್ರಭಾರಿ ಮೈ.ವಿ. ರವಿಶಂಕರ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಕಾರ್ಯಕರ್ತರ ಜೊತೆ ಸಂವಾದ ನಡೆಸಿದರು. ಜಿಲ್ಲಾ ಪ್ರಭಾರಿ ಹಿರೇಂದ್ರ ಷಾ ಎಲ್ಲಾ ಮೋರ್ಚಾ ಗಳ ವರದಿ ಪಡೆದರು. ವಿಭಾಗ ಸಹ ಸಂಘಟನಾ ಪ್ರಧಾನ ಕಾರ್ಯ ದರ್ಶಿ ಸಬ್ಬನಹಳ್ಳಿ ಕೃಷ್ಣ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಜನಸ್ಪಂದನಾ ಕಛೇರಿಯ ಕೆ.ಪಿ. ಮಧುಸೂದನ್, ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿ ಸಲು ಅರ್ಜಿ ಸಲ್ಲಿಸುವ ವಿಧಾನಗಳನ್ನು ವಿವರಿಸಿದರು.

ಸಮಾರೋಪ ಅವಧಿಯಲ್ಲಿ ಮೈಸೂರಿನ ಸಂಸದ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಪ್ರತಾಪ್ ಸಿಂಹ ಮಾತನಾಡಿ ಚಾಮುಂ ಡೇಶ್ವರಿ ಕ್ಷೇತ್ರದ ನಗರ ಮಂಡಲವು ಅತ್ಯಂತ ಚಟುವಟಿಕೆಯಿಂದಿದ್ದು, ಕೋವಿಡ್ ಲಾಕ್ ಡೌನ್ ವೇಳೆ ಅನೇಕ ಜನರಿಗೆ ಸಹಾಯ ಹಸ್ತ ಚಾಚಿ, ಕೆಲಸ ಮಾಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಅಮೃತ್ ಯೋಜನೆಯಲ್ಲಿ ಹಳ್ಳಿಗಳಿಗೆ ನೀರು ನೀಡಿರುವ ಕಾರ್ಯಕ್ರಮ, ರಸ್ತೆ ಅಭಿವೃದ್ಧಿ, ಮೈಸೂರು ಭಾಗಕ್ಕೆ ರಸ್ತೆ- ರೈಲುಗಳ ಅಭಿವೃದ್ಧಿ ಮೂಲಕ ಹೆಚ್ಚು ಕೆಲಸಗಳಾಗಿರುವುದರ ಬಗ್ಗೆ ಜನರಿಗೆ ತಿಳಿಸಿ, ಮುಂಬರುವ ಪಂಚಾಯಿತಿ ಚುನಾ ವಣೆಯನ್ನು ಎದುರಿಸಲು ಸೂಚನೆ ನೀಡಿದರು.

ಚಾಮುಂಡೇಶ್ವರಿ ನಗರ ಮಂಡಲದ ಬಿ.ಎಂ.ರಘು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ರಾಜಮಣಿ ಸ್ವಾಗತ ಕೋರಿದರು, ಈರೇಗೌಡ ವಂದಿಸಿದರು. ಉಪಾಧ್ಯಕ್ಷ ರಾಕೇಶ್ ಭಟ್ ಕಾರ್ಯಕ್ರಮ ನಿರೂಪಣೆ ಮಾಡಿದರು, ಪಾಲಿಕೆ ಸದಸ್ಯೆ ಲಕ್ಷ್ಮಿ ಕಿರಣ್, ಮಂಡಲದ ಉಸ್ತುವಾರಿ ಟಿ.ಎನ್.ಶಾಂತ, ಉಪಾ ಧ್ಯಕ್ಷರಾದ ಗಿರೀಶ್ ದಟ್ಟಗಳ್ಳಿ, ವಿಜಯಾ ಮಂಜುನಾಥ್, ಅಮೃತಾ, ಪ್ರತಾಪ್ ದಟ್ಟಗಳ್ಳಿ, ಕಾರ್ಯಾಲಯ ಕಾರ್ಯದರ್ಶಿ ಶಶಿಕಾಂತ್, ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭಾಶ್ರೀ, ಮುಖಂಡರಾದ ಗೀತ ಮಹೇಶ್, ಸ್ಟೀಫನ್ ಸುಜಿತ್, ಭಾಗ್ಯಲತ, ಹೇಮಂತ್, ರಾಚಪ್ಪಾಜಿ ಸೇರಿದಂತೆ 100 ಜನ ಅಪೇಕ್ಷಿತರು ಭಾಗವಹಿಸಿದ್ದರು. ನಗರ ಪ್ರಧಾನ ಕಾರ್ಯದರ್ಶಿಗಳಾದ ವಾಣೀಶ್ ಕುಮಾರ್, ಗಿರಿಧರ್ ಹಾಗೂ ಸೋಮಸುಂದರ್ ಒಟ್ಟಾರೆ ಅವಲೋಕನ ನಡೆಸಿದರು.

 

 

Translate »