ಮುಡಾ ಲೀಸ್ ಅವಧಿ ವಿಸ್ತರಿಸಿದರೆ ಕಳೆಗಟ್ಟಲಿದೆ ಬಾಲಭವನ ಮಕ್ಕಳ ಮನರಂಜನಾ ತಾಣ
ಮೈಸೂರು

ಮುಡಾ ಲೀಸ್ ಅವಧಿ ವಿಸ್ತರಿಸಿದರೆ ಕಳೆಗಟ್ಟಲಿದೆ ಬಾಲಭವನ ಮಕ್ಕಳ ಮನರಂಜನಾ ತಾಣ

October 21, 2020

ಮೈಸೂರು,ಅ.20- ಪಾಳು ಕೊಂಪೆ ಯಾಗಿ ಬಿದ್ದಿರುವ ಮೈಸೂರಿನ ಬನ್ನಿಮಂಟಪ ಜವಾಹರ ಬಾಲಭವನಕ್ಕೆ ಕಾಯಕಲ್ಪ ನೀಡಲು ಬಾಲಭವನ ಸೊಸೈಟಿ ಮುಂದಾ ಗಿದೆ. ಒಟ್ಟಾರೆ 11 ಕೋಟಿ ರೂ. ಅಂದಾ ಜಿನ ಕ್ರಿಯಾಯೋಜನೆ ಸಿದ್ಧವಾಗಿದೆ.

ಬಾಲಭವನಕ್ಕೆ ನೀಡಲಾಗಿದ್ದ 30 ವರ್ಷ ಗಳ ಲೀಸ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೇ ಅದನ್ನು ವಿಸ್ತರಿಸುವ ಬಗ್ಗೆ ಸಾಕಷ್ಟು ಒತ್ತಡಗಳಿದ್ದರೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅದಕ್ಕೆ ಮನ್ನಣೆ ನೀಡಿರಲಿಲ್ಲ. ಇದೀಗ ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮಾ ಬಸವರಾಜು ಅವರ ಪ್ರಯತ್ನದ ಫಲವಾಗಿ ಅದಕ್ಕೆ ಕಾಯಕಲ್ಪ ಸಿಗುವ ಆಶಯಗಳು ಚಿಗುರೊಡೆದಿದೆ.

ಮುಡಾದಿಂದ ಲೀಸ್ ಅವಧಿ ವಿಸ್ತರಿ ಸುವ ಸಂಬಂಧ ಬಾಲಭವನ ಸೊಸೈಟಿ ಅಧ್ಯಕ್ಷರು ಮುಡಾ ನೂತನ ಅಧ್ಯಕ್ಷರ ಗಮನ ಸೆಳೆದಿದ್ದು, ಬನ್ನಿಮಂಟಪದ ಬಾಲಭವನ ಪ್ರದೇಶಕ್ಕೆ ಅವರನ್ನು ಭೇಟಿ ನೀಡುವಂತೆ ಮಾಡಿದ್ದರು. ಇದರ ಪರಿಣಾಮ ಬಾಲ ಭವನ ಪ್ರದೇಶವನ್ನು ಒಂದು ಸುತ್ತು ಹಾಕಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಇದರ ಮಾಹಿತಿ ಪಡೆದು, ಇದನ್ನು ಯಾವ ರೀತಿ ಅಭಿವೃದ್ಧಿಪಡಿಸಬಹುದು ಎಂಬ ಬಗ್ಗೆ ಕ್ರಿಯಾಯೋಜನೆ ಸಿದ್ದಪಡಿಸಿಕೊಟ್ಟರೆ ಈ ಸಂಬಂಧ ತಾವು ಮುಡಾ ಸಭೆಯಲ್ಲಿ ಮಂಡಿಸಿ, ಲೀಸ್ ಅವಧಿ ವಿಸ್ತರಣೆ ಹಾಗೂ ಅಭಿವೃದ್ಧಿ ಕೈಗೊಳ್ಳಲು ಸಾಧ್ಯ ವಾಗಬಹುದು ಎಂಬ ಸಲಹೆಯನ್ನು ಬಾಲಭವನ ಅಧ್ಯಕ್ಷರಿಗೆ ನೀಡಿದ್ದರು.

ಒಟ್ಟಾರೆ 10 ಎಕರೆ ಪ್ರದೇೀಶದಲ್ಲಿ ಬಾಲ ಭವನ ಪುನರುಜ್ಜೀವನಗೊಳಿಸುವ ಕುರಿತ ಒಟ್ಟು 11 ಕೋಟಿ ರೂ. ಅಂದಾಜಿನ ಪ್ರಸ್ತಾವನೆಯನ್ನು ಬಾಲಭವನ ಸೊಸೈಟಿ ಸಿದ್ದಪಡಿಸಿ ಮುಡಾ ಅಧ್ಯಕ್ಷರಿಗೆ ಸಲ್ಲಿಸಿದೆ.

ಕ್ರಿಯಾಯೋಜನೆಯಲ್ಲಿ 1.20 ಕೋಟಿ ರೂ. ಅಂದಾಜಿನ ಪುಟಾಣಿ ರೈಲು, ಟ್ರ್ಯಾಕ್, ಇಂಜಿನ್, ಬೋಗಿ ಇತ್ಯಾದಿ, ಶಿಥಿಲವಾಗಿರುವ ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ, ಡಾರ್ಮೇಟ್ರಿ ನಿರ್ಮಾಣ- 2.80 ಕೋಟಿ ರೂ., ಒಳಾಂಗಣ ಆಡಿಟೋರಿಯಂ- 1.80 ಕೋಟಿ, ಬೋಟಿಂಗ್ ನಿರ್ಮಾಣ-90 ಲಕ್ಷ ರೂ., ಬರ್ತ್‍ಡೆ ಹಾಲ್- 70 ಲಕ್ಷ ರೂ., ಸುಸಜ್ಜಿತ ಶೌಚ ಗೃಹಗಳ ನಿರ್ಮಾಣ- 13.50 ಲಕ್ಷ ರೂ., ಕುಳಿತುಕೊಳ್ಳುವ ಸ್ಥಳ ನಿರ್ಮಾಣ-14 ಲಕ್ಷ ರೂ., ಲ್ಯಾಂಡ್ ಸ್ಕೇಪಿಂಗ್ -10.50 ಲಕ್ಷ ರೂ., ಕಾಂಪೌಂಡ್ ಗೋಡೆ ಎತ್ತರಿಸುವಿಕೆ-80 ಲಕ್ಷ ರೂ., ಕೃತಕ ಅರಣ್ಯ ನಿರ್ಮಾಣ- 66 ಲಕ್ಷ ರೂ., ಬೈಕ್ ರ್ಯಾಲಿ ಪ್ರದೇಶ- 22 ಲಕ್ಷ ರೂ., ಆಟಿಕಾ ಪ್ರದೇಶ ನಿರ್ಮಾಣ-38 ಲಕ್ಷ ರೂ. ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರ್ಪಡೆ ಮಾಡಲಾಗಿದೆ.

ಮೈಸೂರಿನ ಬನ್ನಿಮಂಟಪ ಪ್ರದೇಶ ದಲ್ಲಿ 1979ರಲ್ಲಿ ಸ್ಥಾಪನೆಯಾಗಿರುವ ಬಾಲ ಭವನ, ಸಾವಿರಾರು ಮಕ್ಕಳಿಗೆ ತಮ್ಮಲ್ಲಿ ರುವ ಕಲೆ, ಸಂಸ್ಕøತಿಯನ್ನು ಹೊರ ಹೊಮ್ಮಿ ಸುವ ಕೇಂದ್ರ. ಮಕ್ಕಳಿಗೆ ಸೃಜನಾತ್ಮಕ ಚಟುವಟಿಕೆಗಳ ತರಬೇತಿ ನೀಡಿ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ಬೆಳೆಯಲು ಅವಕಾಶವಾಗಿತ್ತು. ಮಕ್ಕಳಿಗಾಗಿ ಆಟಿಕೆಗಳು, ಸ್ಕೇಟಿಂಗ್ ರಿಂಕ್, ವಾಚನಾಲಯ, ಚಲನಚಿತ್ರ ಮಂದಿರ, ಪುಟಾಣಿ ರೈಲಿನ ಸಂಚಾರ ಉಲ್ಲಾಸ ದಾಯಕವಾದ ವಾತಾವರಣ ಜೊತೆಗೆ ಮನೋರಂಜನೆಯ ತಾಣವಾಗಿತ್ತು.

ಆದರೆ ಕಳೆದ 10ವರ್ಷಗಳಿಂದ ಬಾಲ ಭವನ ಪಾಳು ಬಿದ್ದಿದೆ. ಮುಡಾದ ಲೀಸ್ ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ಮತ್ತೇ ಮುಡಾ ಲೀಸ್ ವಿಸ್ತರಣೆ ಮಾಡಿಕೊಡು ವಲ್ಲಿ ಆಸಕ್ತಿ ತೋರಲಿಲ್ಲ. ಹೀಗಾಗಿ ಬಾಲ ಭವನದ ಟಾಯ್ ರೈಲು ನಿಂತಿದೆ. ಬೋಗಿ ಗಳು ಗೂಡು ಸೇರಿವೆ. ಇಡೀ ಪ್ರದೇಶ ಗಿಡಗಂಟೆಗಳಿಂದ ತುಂಬಿ ಹಾವು, ಚೇಳು ಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಇದರ ಲೀಸ್ ಅವಧಿ ವಿಸ್ತರಿಸಿ, ಮತ್ತೇ ಬಾಲ ಭವನಕ್ಕೆ ಕಳೆ ಕಟ್ಟುವಂತೆ ಮಾಡಲು ಯಾರೂ ಮುಂದಾಗಿರಲಿಲ್ಲ.

ಮೈಸೂರು ಅರಮನೆ, ಮೈಸೂರು ದಸರಾ, ಚಾಮುಂಡಿಬೆಟ್ಟ, ಮೃಗಾಲಯ, ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ, ಸೇಂಟ್ ಫಿಲೋ ಮಿನಾ ಚರ್ಚ್ ಸೇರಿದಂತೆ ಮೈಸೂರಿನ ಸುತ್ತ ಮುತ್ತಲಿನ ಬೃಂದಾವನ ಗಾರ್ಡನ್, ಶ್ರೀರಂಗ ಪಟ್ಟಣ, ನಂಜನಗೂಡು, ತಲಕಾಡು, ಸೋಮ ನಾಥಪುರ ಇನ್ನಿತರ ಪ್ರವಾಸಿ ತಾಣಗಳನ್ನು ನೋಡಲು ಬರುವ ಪ್ರವಾಸಿಗರಿಗೆ ಬಾಲ ಭವನವೂ ಒಂದು ಆಕರ್ಷಣೀಯ ತಾಣ ವನ್ನಾಗಿ ಅಭಿವೃದ್ದಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬಾಲಭವನ ಸೊಸೈಟಿಯ ನೂತನ ಅಧ್ಯಕ್ಷರು ಮುಡಾದೊಂದಿಗೆ ಸಂಪರ್ಕ ಹೊಂದಿ ಪ್ರಯತ್ನಶೀಲರಾಗಿದ್ದಾರೆ. ಬಾಲ ಭವನವನ್ನು ಅತ್ಯಾಕರ್ಷಕ ರೀತಿಯಲ್ಲಿ ಪುನರುಜ್ಜೀವನಗೊಳಿಸಿ ಸಾರ್ವಜನಿಕರು ಹಾಗೂ ಪ್ರವಾಸಿಗರನ್ನು ಅದರಲ್ಲೂ ಮುಖ್ಯ ವಾಗಿ ಮಹಿಳೆಯರು ಮತ್ತು ಮಕ್ಕಳನ್ನು ರಂಜಿ ಸುವ ತಾಣವನ್ನಾಗಿ ಮಾರ್ಪಡಿಸುವ ದೃಷ್ಟಿ ಯಿಂದ ಬಾಲಭವನ ಸೊಸೈಟಿ ಆರ್ಥಿಕ ಸಹ ಯೋಗದಲ್ಲಿ ಅಭಿವೃದ್ಧಿಗೆ ಮುಂದಡಿ ಇಟ್ಟಿದೆ.

ರಾಜಕುಮಾರ್ ಭಾವಸಾರ್

Translate »