ಮೈಸೂರು, ಮಾ.6(ಆರ್‍ಕೆಬಿ)- ಮೈಸೂರಿನ ಚಾಮುಂಡಿಬೆಟ್ಟದ ಪಾದದ ಸಮೀಪ ಚಾಮುಂಡಿಬೆಟ್ಟದ ಸ್ವಾಗತ ಕಮಾನಿನ ಬಳಿ 81 ಕೋಟಿ ರೂ. ವೆಚ್ಚದ ಕಾಸ್ಮೊಲಜಿ ಶಿಕ್ಷಣ ಮತ್ತು ಸಂಶೋಧನಾ-ತರಬೇತಿ ಕೇಂದ್ರ (ಕಾಸ್ಮಾಸ್)ಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಶಂಕು ಸ್ಥಾಪನೆ ನೆರವೇರಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ನಿವೇಶನದಲ್ಲಿರುವ ಶ್ರೀ ಜಯ ಚಾಮ ರಾಜ ಒಡೆಯರ್ ಉನ್ನತ ಶಿಕ್ಷಣ ಕಲಿಕಾ ಕೇಂದ್ರದ ಆವರಣದಲ್ಲಿ ದೇಶದ ಮೊದಲ ಆತ್ಯಾಧುನಿಕ ಖಗೋಳ ತಾರಾಲಯಕ್ಕೆ ಅವರು ಅಡಿಗಲ್ಲು ಹಾಕಿದರು. ಮೈಸೂರು ವಿವಿ ಮತ್ತು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಕಾರ್ಯಕ್ರಮ ಆಯೋಜಿ ಸಿತ್ತು. ಶಂಕುಸ್ಥಾಪನೆ ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್, ಯುವ ಮನಸ್ಸುಗಳೇ ಬನ್ನಿ, ಇಲ್ಲಿ ಸಿಗುವ ಜ್ಞಾನವನ್ನು ಪಡೆದು ಬೇರೆಡೆಗೆ ಪಸರಿಸಿ, ಆ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿ ಮಾಡೋಣ ಎಂದು ಯುವಜನರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಕಷ್ಟು ಹೆಣ್ಣು ಮಕ್ಕಳೆ ಹೆಚ್ಚಾಗಿರುವುದನ್ನು ಕಂಡ ಅವರು, ಇವರೇ ನಮ್ಮ ಭವಿಷ್ಯದ ವಿಜ್ಞಾನಿಗಳು. ತಾರೆಗಳಂತೆ ಹೊಳೆಯುತ್ತಿದ್ದಾರೆ. ಇವರೆಲ್ಲರೂ ವಿಜ್ಞಾನಿ ಗಳಾಗಿ ಹೊರ ಹೊಮ್ಮಿದರೆ ದೇಶದ ಕೀರ್ತಿ ಮತ್ತಷ್ಟು ಹೆಚ್ಚಲಿದೆ. ಈ ನಿಟ್ಟಿನಲ್ಲಿ ಯುವ ವಿಜ್ಞಾನಿ ಗಳೂ ಸಂಶೋಧನೆ ಮತ್ತು ತರಬೇತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಖಗೋಳ ತಾರಾಲಯ ಸ್ಥಾಪನೆಯಾದ ಮೇಲೆ ಹಳೆಯದು, ಹೊಸತು ಎಂದು ಸಾಕಷ್ಟು ಡೇಟಾ (ಅಂಕಿ ಅಂಶ) ಸಂಗ್ರಹವಾಗುತ್ತದೆ. ಆದರೆ ಬರೀ ಶೇಖರಣೆಯಾದರೆ ಪ್ರಯೋ ಜನವಿಲ್ಲ. ಅದು ಬಳಕೆಯಾಗಬೇಕು. ಬಳಕೆ ಯಾಗಲು ಸೂಕ್ತವಾಗಿ ಮಾರ್ಗದರ್ಶನ ಬೇಕಾ ಗುತ್ತದೆ. ಅಂತಹ ಸಲಹೆಗಾರರು ಮೈಸೂರು ವಿವಿಯಲ್ಲಿ ಸಾಕಷ್ಟು ಯುವ ವಿಜ್ಞಾನಿಗಳಿದ್ದಾರೆ. ಯುವ ವಿಜ್ಞಾನಿಗಳು ತಾರಾಲಯದ ಡೇಟಾ ಸರಿಯಾಗಿ ಬಳಸಿಕೊಂಡರೆ ದೇಶ ಮತ್ತು ಸಮಾಜಕ್ಕೆ ಅನುಕೂಲವಾಗುತ್ತದೆ ಎಂದರು.
ಕಲೆ ಮತ್ತು ಕಲಾವಿದರ ತವರೂರಾದ ಮೈಸೂರಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಇಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿದೆ. ನನ್ನ ಆಪ್ತ ಸಲಹೆಗಾರರಾಗಿದ್ದ ಕರ್ನಾಟಕದ ಐಎಎಸ್ ಅಧಿಕಾರಿಯೊಬ್ಬರಿಂದ ನನಗೆ ತಾರಾಲಯ ಸ್ಥಾಪನೆಯ ಕಲ್ಪನೆ ಬಂದಿತು. ನಂತರ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಕೆ.ವಿಜಯ ರಾಘವನ್ ಯೋಜನೆಯ ರೂಪುರೇಷೆ ತಯಾರಿಸಿದರು. ಇದರ ಅನುಷ್ಠಾನಕ್ಕೆ ಮೈಸೂರು ವಿಶ್ವವಿದ್ಯಾಲಯ ಹೆಚ್ಚಿನ ಸಹಕಾರ ನೀಡಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಕೆ.ವಿಜಯ ರಾಘವನ್, ಅಟಾಮಿಕ್ ಎನರ್ಜಿ ವಿಭಾಗದ ಕಾರ್ಯದರ್ಶಿ ಕೆ.ಎನ್.ವ್ಯಾಸ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎಸ್. ಚಂದ್ರಶೇಖರ್, ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ನಿರ್ದೇಶಕಿ ಪ್ರೊ. ಅನ್ನಪೂರ್ಣಿ ಸುಬ್ರಮಣಿಯಂ, ಮೈಸೂರು ಕುಲಸಚಿವ ಪ್ರೊ.ಬಿ.ಶಿವಪ್ಪ, ಮೈಸೂರು ವಿವಿ ಪಿಎಂಇಬಿ ನಿರ್ದೇಶಕ ಪ್ರೊ.ಕೆ.ಎನ್.ಲೋಕನಾಥ್ ಉಪಸ್ಥಿತರಿದ್ದರು.