ತಜ್ಞರ ಸಮಿತಿಯಿಂದ ಮೈಷುಗರ್ ಕಾರ್ಖಾನೆ ಪರಿಶೀಲನೆ
ಮಂಡ್ಯ

ತಜ್ಞರ ಸಮಿತಿಯಿಂದ ಮೈಷುಗರ್ ಕಾರ್ಖಾನೆ ಪರಿಶೀಲನೆ

March 8, 2022

ಮಂಡ್ಯ, ಮಾ.7(ಮೋಹನ್‍ರಾಜ್)- ರಾಜ್ಯ ಸರ್ಕಾರ ಜೂನ್ ವೇಳೆಗೆ ಆರಂಭಿಸ ಬೇಕೆಂದುಕೊಂಡಿರುವ ಜಿಲ್ಲೆಯ ಪ್ರತಿಷ್ಠಿತ ಮೈಷುಗರ್ ಸಕ್ಕರೆ ಕಾರ್ಖಾನೆಯ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲು ಪುಣೆಯಿಂದ ಮೂವರು ಅಧಿಕಾರಿಗಳ ತಜ್ಞರ ಸಮಿತಿ ಕಾರ್ಖಾನೆಗೆ ಆಗಮಿಸಿದ್ದು, ಸೋಮ ವಾರದಿಂದ ಪರಿಶೀಲನೆ ಆರಂಭವಾಗಿದೆ.

ಪುಣೆಯ ತಜ್ಞ ಅಧಿಕಾರಿಗಳಾದ ಡಾ. ಕಾಳಯ್ಯ, ಡಾ.ಲೊಂಡೆ, ಡಾ.ಸಂಜಯ್ ನೇತೃತ್ವದಲ್ಲಿ ಪರಿಶೀಲನೆ ಪ್ರಾರಂಭ ವಾಗಿದ್ದು, ಇಂದು ಬೆಳಗ್ಗೆ ಅಧಿಕಾರಿಗಳ ಆಗಮನಕ್ಕೂ ಮುನ್ನ ಕಾರ್ಖಾನೆಯ ಜಿಎಂ ಶಿವಾನಂದಮೂರ್ತಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕಾರ್ಖಾನೆಯ ಸಿಬ್ಬಂದಿ ಹಾಗೂ ಪ್ರಮುಖ ಹುದ್ದೆಯಲ್ಲಿದ್ದ ಕಾರ್ಖಾನೆಯ ನಿವೃತ್ತ ನೌಕರರು ಭಾಗವಹಿಸಿದ್ದರು. ಮೂವರು ಅಧಿಕಾರಿಗಳ ತಂಡಕ್ಕೆ ಸೂಕ್ತ ಹಾಗೂ ವಾಸ್ತವ ರೀತಿಯಲ್ಲಿ ಕಾರ್ಖಾನೆಯ ಸ್ಥಿತಿಗತಿಗಳ ಬಗ್ಗೆ ವರದಿ ನೀಡುವಂತೆ ಜಿಎಂ ಸೂಚನೆ ನೀಡಿದರು. ಆನಂತರ ಮೈಷುಗರ್‍ನ ಡಿಸ್ಟಲರಿ ವಿಭಾಗದ ನಿವೃತ್ತ ಮುಖ್ಯಸ್ಥ ಸತ್ಯನಾರಾಯಣ್ ನೇತೃತ್ವದಲ್ಲಿ ಮೂವರು ಅಧಿಕಾರಿಗಳಿಗೆ ಸಿಬ್ಬಂದಿ ವರ್ಗ ಅಗತ್ಯ ಮಾಹಿತಿಗಳನ್ನು ಒದಗಿಸಿಕೊಟ್ಟರು.

ಮೊದಲ ದಿನವೇ ತಜ್ಞರ ತಂಡ ಸಕ್ಕರೆ ಉತ್ಪಾದನಾ ಘಟಕ, ಕೋಜನ್, ಡಿಸ್ಟಲರಿ, ಇಟಿಪಿ, ಬಯೋಮೆಟ್ರಿಕ್ ಸೇರಿದಂತೆ ಅನೇಕ ಘಟಕಗಳ ಪರಿಶೀಲನೆ ನಡೆಸಿ, ಕಾರ್ಖಾನೆಯ ಸ್ಥಿತಿಗತಿ ಬಗ್ಗೆ ಸಮಗ್ರ ಮಾಹಿತಿ ಪಡೆದು, ಇನ್ನು ಐದಾರು ದಿನಗಳ ಕಾಲ ಕಾರ್ಖಾನೆಯ ಇಡೀ ವಾಸ್ತವತೆಯನ್ನು ಪರಿಶೀಲಿಸಿ ವರದಿ ತಯಾರು ಮಾಡಲಿದ್ದಾರೆ. ಸುಮಾರು ಐದರಿಂದ ಹತ್ತು ದಿನಗಳ ಕಾಲ ಪರಿಶೀಲನೆ ನಡೆಸಿ, ಆ ಬಳಿಕ ವರದಿ ತಯಾರಿಸಿ, ಕಾರ್ಖಾನೆಯ ಆಡಳಿತ ಮಂಡಳಿಗೆ ಸಲ್ಲಿಸಲಿದ್ದು, ಆಡಳಿತ ಮಂಡಳಿ ಸರ್ಕಾರಕ್ಕೆ ವರದಿ ನೀಡಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮೈಷುಗರ್‍ನ ಡಿಸ್ಟಲರಿ ವಿಭಾಗದ ನಿವೃತ್ತ ಮುಖ್ಯಸ್ಥ ಸತ್ಯನಾರಾಯಣ್, ಅಧಿಕಾರಿ ಗಳಿಗೆ ಸೂಕ್ತ ಮಾಹಿತಿಯನ್ನು ಒದಗಿಸಿ ಕೊಡುತ್ತಿದ್ದೇವೆ. ಪ್ರಸ್ತುತ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿದೂಗಿಸಿ ಕೊಂಡು ಕಾರ್ಖಾನೆ ನಡೆಸುತ್ತಿದ್ದವು. ಇದೀಗ ಯಾವ ಘಟಕದಲ್ಲಿ ಏನು ಸಮಸ್ಯೆ ಇದೆ ಎಂಬುದನ್ನು ತಜ್ಞರು ಪರಿಶೀಲಿಸಿ, ಯಾವ ವಸ್ತುಗಳನ್ನು ಖರೀದಿಸಬೇಕು ಅಥವಾ ರಿಪೇರಿ ಮಾಡಿಸಬಹುದು ಎಂಬ ಬಗ್ಗೆ ಮಾಹಿತಿ ಕೊಡಲಿದ್ದಾರೆ ಎಂದರು.
ಮೈಷುಗರ್ ಹೋರಾಟಗಾರರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೂನ್ ವೇಳೆಗೆ ಕಾರ್ಖಾನೆ ಆರಂಭಿಸುವ ಭರವಸೆ ನೀಡಿದ್ದರು. ಜೊತೆಗೆ ಸಕ್ಕರೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಸಹ ಕಾರ್ಖಾನೆಗೆ ಭೇಟಿ ನೀಡಿ, ಪರಿಶೀಲಿಸಿ ದ್ದರು. ಬಜೆಟ್‍ನಲ್ಲಿ ಕಾರ್ಖಾನೆಗೆ 50 ಕೋಟಿ ರೂ. ಹಣ ಸಹ ಮೀಸಲಿಡಲಾಗಿದೆ.

Translate »