ರಾಜ್ಯದಲ್ಲಿ 21,232 ಮಂದಿ ಸರ್ಕಾರಿ ನೌಕರರಲ್ಲಿ ಅನಧಿಕೃತ ಪಡಿತರ ಚೀಟಿ
ಮೈಸೂರು

ರಾಜ್ಯದಲ್ಲಿ 21,232 ಮಂದಿ ಸರ್ಕಾರಿ ನೌಕರರಲ್ಲಿ ಅನಧಿಕೃತ ಪಡಿತರ ಚೀಟಿ

March 8, 2022

ಮೈಸೂರು, ಮಾ.7(ಎಸ್‍ಪಿಎನ್)- ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಒಟ್ಟು 21,232 ಮಂದಿ ಸರ್ಕಾರಿ, ಅರೆ ಸರ್ಕಾರಿ ನೌಕರರು ಅನಧಿಕೃತವಾಗಿ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿ ಪಡೆದಿದ್ದಾರೆ.

ಇಂತಹ ಸರ್ಕಾರಿ ನೌಕರರಿಗೆ ಕಾರಣ ಕೇಳಿ ನೋಟೀಸ್ ಅನ್ನು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಿಂದ ಆಯಾಯ ಜಿಲ್ಲಾ ಹಂತದ ಅಧಿಕಾರಿಗಳ ಮೂಲಕ ಜಾರಿಗೊಳಿಸಲಾಗಿದೆ.

ಆದ್ಯತಾ ಪಡಿತರ ಚೀಟಿಗಳನ್ನು(ಬಿಪಿಎಲ್) ಅಕ್ರಮವಾಗಿ ಪಡೆಯುವುದನ್ನು ತಪ್ಪಿಸಲು ಸರ್ಕಾರದಿಂದ ಅನುದಾನಿತ ಸಂಸ್ಥೆಗಳಲ್ಲಿ ವೇತನ ಪಡೆಯುವ ಸರ್ಕಾರಿ ನೌಕರರನ್ನು ಈ ಯೋಜನೆ ವ್ಯಾಪ್ತಿಯಿಂದ ಹೊರಗಿಡಲು 2017ರಲ್ಲೇ ಕೆಲವು ಮಾನದಂಡ ರೂಪಿಸಲಾಗಿದೆ.

2017ರ ಮಾನದಂಡ: ಸರ್ಕಾರಿ ವೇತನ ಪಡೆಯುವ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಸ್ವೌಮ್ಯದ ಸಂಸ್ಥೆಗಳು, ನಿಗಮ ಮಂಡಳಿಗಳು, ಸ್ವಾಯತ್ತ ಸಂಸ್ಥೆಗಳು ಹಾಗೂ ಆದಾಯ ತೆರಿಗೆ, ಸೇವಾ ತೆರಿಗೆ, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು (ಬಿಪಿಎಲ್ ಕಾರ್ಡ್ ಪಡೆಯದಂತೆ ತಡೆಯಲು) ಈ ಮಾನದಂಡ ವ್ಯಾಪ್ತಿಗೆ ಬರಲಿವೆ.

ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ 3 ಹೇಕ್ಟೆರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶದಲ್ಲಿ ಸಾವಿರ ಚದರ ಅಡಿಗಿಂ ತಲೂ ಹೆಚ್ಚಿನ ವಿಸ್ತೀರ್ಣವುಳ್ಳ ಸ್ವಂತ ಮನೆ ಹೊಂದಿರುವ ಕುಟುಂಬಗಳನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ.

ಆದರೆ, ಜೀವನೋಪಾಯಕ್ಕಾಗಿ ವಾಣಿಜ್ಯ ವಾಹನವನ್ನು ಓಡಿಸುವ ಕುಟುಂಬಗಳು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿ ವಾಣಿಜ್ಯ ವಾಹನಗಳನ್ನು ಹೊಂದಿದ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಿರುತ್ತಾರೆ. ಆದರೆ ಸ್ವಂತ ಕಾರು ಹೊಂದಿರುವ ಕುಟುಂಬ ಗಳು ಆದ್ಯತಾ ಪಡಿತರ (ಬಿಪಿಎಲ್) ಚೀಟಿ ಯನ್ನು ಪಡೆಯುವಂತಿಲ್ಲ. ಹಾಗೆಯೇ ಒಂದು ಕುಟುಂಬದಲ್ಲಿ ವಾರ್ಷಿಕ ಆದಾಯ ರೂ.1.20 ಲಕ್ಷ ಕ್ಕಿಂತಲೂ ಅಧಿಕವಿದ್ದರೆ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ.

5 ಜಿಲ್ಲೆಯಿಂದ 4,058 ಅಕ್ರಮ ಪಡಿತರ ಚೀಟಿ ಪತ್ತೆ: ಮೈಸೂರು ಜಿಲ್ಲೆಯ ವಿವಿಧ ಇಲಾಖೆಯ 1,457 ಮಂದಿ ನೌಕರರು, ಮಂಡ್ಯ 906, ಚಾಮರಾಜನಗರ 562, ಕೊಡಗು 562, ಹಾಸನ 571 ಸೇರಿದಂತೆ ಒಟ್ಟು ರಾಜ್ಯಾದ್ಯಂತ 21,232 ಮಂದಿ ವಿವಿಧ ಹಂತದ ನೌಕರರು ಅಕ್ರಮ ಪಡಿತರ ಚೀಟಿ ಇರುವುದನ್ನು ಪತ್ತೆ ಮಾಡಲಾಗಿತ್ತು. ಇವರೆಲ್ಲರಿಗೂ ಸರ್ಕಾರದಿದ ನೋಟೀಸ್ ಜಾರಿ ಮಾಡಿ, ಅಕ್ರಮ ಪಡಿತರ ಚೀಟಿ ಪಡೆದಿರುವ ಕುರಿತು ಕಾರಣ ಕೇಳಿ ನೋಟೀಸ್ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

Translate »