ಉತ್ತರಪ್ರದೇಶ್ ಮತ್ತೆ ಯೋಗಿ ‘ರಾಜ್’
News

ಉತ್ತರಪ್ರದೇಶ್ ಮತ್ತೆ ಯೋಗಿ ‘ರಾಜ್’

March 8, 2022

ನವದೆಹಲಿ, ಮಾ.7 – ಉತ್ತರ ಪ್ರದೇಶ ವಿಧಾನಸಭೆ 7ನೇ ಹಂತದ ಚುನಾವಣೆ ಇಂದು ಅಂತ್ಯಗೊಂಡಿದ್ದು, ಇದರೊಂದಿಗೆ ಉತ್ತರ ಪ್ರದೇಶ, ಪಂಜಾಬ್, ಉತ್ತರ ಖಂಡ, ಮಣಿಪುರ ಮತ್ತು ಗೋವಾ ಪಂಚ ರಾಜ್ಯ ಗಳ ಚುನಾವಣೆ ಮುಗಿದಿದ್ದು, ವಿವಿಧ ಸಂಸ್ಥೆಗಳ ಚುನಾ ವಣೋತ್ತರ ಸಮೀಕ್ಷೆ ವರದಿಗಳು ಪ್ರಕಟಗೊಂಡಿವೆ.
ಸಮೀಕ್ಷಾ ವರದಿಯಂತೆ ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದ್ದು, ಪಂಜಾಬ್‍ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಇದೇ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಗೋವಾ ಮತ್ತು ಉತ್ತರಖಂಡದಲ್ಲಿ ಅತಂತ್ರ ಫಲಿತಾಂಶದ ಭವಿಷ್ಯ ಹೊರಬಿದ್ದಿದೆ.

ಉತ್ತರ ಪ್ರದೇಶದ 403 ಸ್ಥಾನಗಳ ಪೈಕಿ ಬಿಜೆಪಿ ಎಲ್ಲಾ ಸಮೀಕ್ಷೆಗಳ ಪ್ರಕಾರ 230ರಿಂದ 245 ಸ್ಥಾನ ಗಳನ್ನು ಪಡೆದು ಮತ್ತೆ ಅಧಿಕಾರಕ್ಕೇರಲಿದೆ. ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಅವರು 2ನೇ ಬಾರಿ ಮುಖ್ಯಮಂತ್ರಿಯಾಗಲಿದ್ದು, ಈ ರಾಜ್ಯದಲ್ಲಿ ಸತತವಾಗಿ 2ನೇ ಬಾರಿಗೆ ಮುಖ್ಯಮಂತ್ರಿಯಾದ ಮೊದಲಿಗರು ಎಂಬ ದಾಖಲೆ ಬರೆಯಲಿದ್ದಾರೆ ಎಂದು ಸಮೀಕ್ಷೆ ಯಲ್ಲಿ ಹೇಳಲಾಗಿದೆ. ನ್ಯೂಸ್ ಎಕ್ಸ್- ಪೋಲ್ ಸ್ಟಾರ್ ಸಮೀಕ್ಷೆಯಂತೆ ಉತ್ತರಪ್ರದೇಶದಲ್ಲಿ ಬಿಜೆಪಿ 211ರಿಂದ 225, ಎಸ್‍ಪಿ 146ರಿಂದ 160, ಬಿಎಸ್ಪಿ 14ರಿಂದ 24, ಕಾಂಗ್ರೆಸ್ 2ರಿಂದ 6 ಸ್ಥಾನ ಪಡೆಯಲಿದೆ. ಇಟಿಜಿ ರಿಸರ್ಚ್ ಸಮೀಕ್ಷೆಯಂತೆ ಬಿಜೆಪಿ 230ರಿಂದ 245, ಎಸ್ಪಿ 150ರಿಂದ 165, ರಿಪಬ್ಲಿಕ್ ಪಿಎಂಆರ್‍ಕ್ಯೂ ಸಮೀಕ್ಷೆಯಂತೆ ಬಿಜೆಪಿ 240, ಎಸ್ಪಿ 140, ಮ್ಯಾಟ್ರೇಜ್ ಸಮೀಕ್ಷೆಯಂತೆ ಬಿಜೆಪಿ 262ರಿಂದ 272, ಎಸ್ಪಿ 119ರಿಂದ 134, ಬಿಎಸ್ಪಿ 7 ರಿಂದ 15, ಕಾಂಗ್ರೆಸ್ 3ರಿಂದ 8 ಸ್ಥಾನ ಗಳಿಸಲಿದೆ.

ಪಂಜಾಬ್‍ನಲ್ಲಿ ಆಮ್ ಆದ್ಮಿ ಪಕ್ಷ ಇದೇ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಅಲ್ಲಿನ 117 ಸ್ಥಾನಗಳ ಪೈಕಿ ಎಎಪಿ 50ರಿಂದ 56 ಸ್ಥಾನ ಪಡೆದರೆ ಕಾಂಗ್ರೆಸ್ 42ರಿಂದ 48, ಶಿರೋಮಣಿ ಅಕಾಲಿದಳ (ಎಸ್‍ಎಡಿ) 13ರಿಂದ 17, ಬಿಜೆಪಿ, 1ರಿಂದ 3 ಸ್ಥಾನ ಪಡೆಯಲಿದೆ ಎಂದು ರಿಪಬ್ಲಿಕ್ ಪಿಎಂಆರ್‍ಕ್ಯೂ ಸಮೀಕ್ಷೆ ತಿಳಿಸಿದೆ. ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಎಎಪಿ 62ರಿಂದ 76 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಂಜಾ ಬನ್ನು ಕಾಂಗ್ರೆಸ್‍ನಿಂದ ಕಸಿದುಕೊಳ್ಳಲಿದೆ. ಮಣಿಪುರ ರಾಜ್ಯದ 60 ಸ್ಥಾನಗಳ ಪೈಕಿ 26ರಿಂದ 31 ಸ್ಥಾನ ಪಡೆದು ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಗೇರಲಿದೆ. ಕಾಂಗ್ರೆಸ್ 12ರಿಂದ 17, ಎನ್‍ಪಿಪಿ 6ರಿಂದ 10, ಎನ್‍ಸಿಎಫ್ 2ರಿಂದ 6 ಹಾಗೂ ಹಿಡಿಯಲು ಅಗತ್ಯವಿರುವ 31 ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ. ಒಂದು ವೇಳೆ ಅದಕ್ಕಿಂತ ಸ್ವಲ್ಪ ಕಡಿಮೆಯಾದರೂ ಇತರೆ ಪಕ್ಷಗಳ ಸಹಕಾರದೊಂದಿಗೆ ಮತ್ತೆ ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ಇಂಡಿಯಾ ಟಿವಿ ಗ್ರೌಂಡ್ ಜೀರೋ ರಿಸರ್ಚ್ ಸಮೀಕ್ಷೆ ತಿಳಿಸಿದ್ದರೆ, ಜೀ ನ್ಯೂಸ್ ಸಮೀಕ್ಷೆ ಪ್ರಕಾರ ಬಿಜೆಪಿ 33ರಿಂದ 37 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದುಗೆ ಏರಲಿದೆ, ಕಾಂಗ್ರೆಸ್ 13ರಿಂದ 17, ಎನ್‍ಪಿಪಿ 4ರಿಂದ 6, ಎನ್‍ಪಿಎಫ್ 2ರಿಂದ 4 ಸ್ಥಾನ ಪಡೆಯಲಿದೆ. ಪಬ್ಲಿಕ್ ಪಿಎಂಆರ್‍ಕ್ಯೂ ಪ್ರಕಾರ ಬಿಜೆಪಿ 31ರಿಂದ 37 ಕಾಂಗ್ರೆಸ್ 13ರಿಂದ 19, ಎನ್‍ಪಿಪಿ 3ರಿಂದ 9, ಎನ್‍ಪಿಎಫ್ 1ರಿಂದ 5 ಇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

ಗೋವಾ ವಿಧಾನಸಭೆಯ 40 ಕ್ಷೇತ್ರಗಳಿಗೆ ನಡೆದಿರುವ ಚುನಾವಣೆಯಲ್ಲಿ ಯಾರಿಗೂ ಬಹುಮತ ದೊರೆಯದೇ ಅತಂತ್ರ ಫಲಿತಾಂಶ ಹೊರ ಬೀಳಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಅಧಿಕಾರ ಹಿಡಿಯಲು 21 ಸ್ಥಾನದ ಅವಶ್ಯಕತೆಯಿದ್ದು, 16 ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಬಿಜೆಪಿಗೆ 14 ಸ್ಥಾನ ಲಭಿಸಲಿದ್ದು, ಆಮ್ ಆದ್ಮಿ ಪಕ್ಷ ನಾಲ್ವರು ಹಾಗೂ 6 ಇತರರು ಗೆಲುವು ಸಾಧಿಸಲಿದ್ದಾರೆ.

ಉತ್ತರ ಖಂಡದ 70 ಕ್ಷೇತ್ರಗಳಿಗೆ ನಡೆದಿರುವ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಯೇರಲು ಅವಶ್ಯಕತೆಯಿರುವ 36 ಸ್ಥಾನಗಳು ಯಾವುದೇ ಪಕ್ಷಕ್ಕೂ ಬಾರದೇ ಅತಂತ್ರ ಫಲಿತಾಂಶ ಹೊರಬೀಳಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. 26ರಿಂದ 32 ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಬಿಜೆಪಿಗೆ 26ರಿಂದ 32 ಸ್ಥಾನ ಲಭಿಸಿದರೆ ಆಮ್ ಆದ್ಮಿ ಪಕ್ಷಕ್ಕೆ 2 ಸ್ಥಾನ ಸಿಗಲಿದೆ. 3ರಿಂದ 7 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ಗಳು ತಿಳಿಸಿವೆ. ಪಂಚ ರಾಜ್ಯಗಳ ಚುನಾವಣೆಯು ಫೆಬ್ರವರಿ 10ರಂದು ಆರಂಭವಾಗಿ ಇಂದು(ಮಾ.7) ಅಂತ್ಯಗೊಂಡಿದೆ. ಪಂಜಾಬ್‍ನ 117 ಸ್ಥಾನಗಳಿಗೆ ಫೆ.20ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಗೋವಾ ಮತ್ತು ಉತ್ತರ ಖಂಡದಲ್ಲಿ ಫೆ.14, ಮಣಿಪುರದಲ್ಲಿ ಫೆ.28 ಮತ್ತು ಮಾ.5ರಂದು ಚುನಾವಣೆ ನಡೆದಿದ್ದರೆ, ಉತ್ತರ ಪ್ರದೇಶದಲ್ಲಿ ಫೆ.10, 14, 20, 23, 27, ಮಾ.3 ಮತ್ತು ಮಾ7ರಂದು ಸೇರಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮಾ.10ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

Translate »