ಕ್ಲೋರಿನ್  ಸೋರಿಕೆ
ಮೈಸೂರು

ಕ್ಲೋರಿನ್ ಸೋರಿಕೆ

March 8, 2022

ಮೈಸೂರು,ಮಾ.7(ಎಸ್‍ಬಿಡಿ)-ಮೈಸೂರಿನ ಕೆಆರ್‍ಎಸ್ ಮುಖ್ಯರಸ್ತೆಯಲ್ಲಿ ರೈಲ್ವೆ ಇಲಾಖೆ ಜಾಗದಲ್ಲಿದ್ದ ಕ್ಲೋರಿನ್ ಸಿಲಿಂಡರ್‍ನಿಂದ ಅನಿಲ ಸೋರಿಕೆಯಾಗಿ ಸುಮಾರು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಸೋಮವಾರ ಸಂಭವಿಸಿದೆ.

ವಾಣಿ ವಿಲಾಸ ವಾಟರ್ ವಕ್ರ್ಸ್ ಎದುರಿನ ರೈಲ್ವೆ ಲೋಕೋ ಕಾಲೋನಿಗೆ ಹೊಂದಿಕೊಂಡಂತಿರುವ ಉದ್ಯಾ ನವನದಲ್ಲಿ ಅಳವಡಿಸಿದ್ದ ಕ್ಲೋರಿನ್ ಸಿಲಿಂಡರ್‍ನಿಂದ ಸೋಮವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಅನಿಲ ಸೋರಿಕೆಯಾಗಿದ್ದು, ಕೆಆರ್‍ಎಸ್ ರಸ್ತೆ, ಯಾದವಗಿರಿ ರಸ್ತೆಗಳಲ್ಲಿ ವಾಹನಗಳಲ್ಲಿ ತೆರಳುತ್ತಿದ್ದವರು, ರಕ್ಷಣಾ ಕಾರ್ಯಾಚರಣೆಗೆ ದಾವಿಸಿದ್ದ ಅಗ್ನಿ ಶಾಮಕ ಸಿಬ್ಬಂದಿ, ರೈಲ್ವೆ ಕ್ವಾರ್ಟರ್ಸ್ ನಿವಾಸಿಗಳು, ರೈಲ್ವೆ ಪೊಲೀಸ್ ಸಿಬ್ಬಂದಿ, ಆಂಬುಲೆನ್ಸ್ ಸಿಬ್ಬಂದಿ ಸೇರಿ 50ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಇವರಲ್ಲಿ 12 ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ.

ದಟ್ಟ ಕ್ಲೋರಿನ್‍ನಿಂದ ಉಸಿರಾಟಕ್ಕೆ ತೊಂದರೆಯಾಗಿ ಅಸ್ವಸ್ಥರಾದವರನ್ನು ತಕ್ಷಣ ಆಂಬುಲೆನ್ಸ್‍ನಲ್ಲಿ ಸಮೀಪದ ರೈಲ್ವೆ ಆಸ್ಪತ್ರೆಗೆ ಕರೆದೊಯ್ದು, ಇಂಜೆಕ್ಷನ್, ಆಕ್ಸಿಜನ್ ನೀಡಿ, ಕೆಲ ಹೊತ್ತು ಪರಿವೀಕ್ಷಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಎಲ್ಲರೂ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸೋರಿಕೆ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಸೂಕ್ತ ಕ್ರಮ ವಹಿಸಿದ್ದರಿಂದ ಭಾರೀ ಅವಘಡ ತಪ್ಪಿದಂತಾಗಿದೆ. ಕ್ಲೋರಿನ್ ಸೋರಿಕೆ ತಿಳಿಯುತ್ತಿದ್ದಂತೆ ವಾಣಿ ವಿಲಾಸ ವಾಟರ್ ವಕ್ರ್ಸ್‍ನಲ್ಲಿ ನೀರಿನ ಶುಲ್ಕ ಪಾವತಿಸಲು ಬಂದಿದ್ದ ಸಾರ್ವಜನಿಕರನ್ನು ವಾಪಸ್ಸು ಕಳುಹಿಸಿ, ಸಿಬ್ಬಂದಿಗಳೆಲ್ಲಾ ಕಚೇರಿಯಿಂದ ಹೊರಬಂದು ದೂರಕ್ಕೆ ತೆರಳಿ, ಅಪಾಯದಿಂದ ಪಾರಾಗಿದ್ದಾರೆ.

ನಿಂತಲ್ಲೇ ನಿಂತ ಜನ: ರೈಲ್ವೆ ನಿಲ್ದಾಣ, ಕ್ವಾರ್ಟರ್ಸ್‍ಗೆ ಪೂರೈಕೆಯಾಗುವ ನೀರು ಶುದ್ಧೀಕರಣಕ್ಕಾಗಿ ಕೆಆರ್‍ಎಸ್ ರಸ್ತೆ ಪಕ್ಕದಲ್ಲೇ ಇರುವ ಉದ್ಯಾನದಲ್ಲಿ ಕ್ಲೋರಿನ್ ಸಿಲಿಂಡರ್ ಅಳವಡಿಸಲಾಗಿದೆ. ಇದರಲ್ಲಿ ಇಂದು ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಸೋರಿಕೆ ಉಂಟಾಗಿ, ಕೆಲಹೊತ್ತಿನಲ್ಲೇ ಸೋರಿಕೆ ಪ್ರಮಾಣ ಹೆಚ್ಚಾಗಿದೆ. ಸಮೀಪದ ಮೊದಲ ಗೇಟ್ ಲೋಕೋ ಕಾಲೋನಿಗೆ ಹರಡಿದೆ. ಇದೇ ವೇಳೆ ಕೆಆರ್‍ಎಸ್ ರಸ್ತೆ, ಯಾದವಗಿರಿ ರಸ್ತೆಯನ್ನೂ ಕ್ಲೋರಿನ್ ಆವರಿಸಿದೆ. ಈ ಸಂದರ್ಭದಲ್ಲಿ ಸಾರಿಗೆ ಬಸ್, ಆಟೋ, ಕಾರು, ದ್ವಿಚಕ್ರ ವಾಹನ ಗಳಲ್ಲಿ ತೆರಳುತ್ತಿದ್ದವರು, ಪಾದಚಾರಿಗಳು ಪ್ರಬಲ ವಾಸನೆಯುಕ್ತ ಕ್ಲೋರಿನ್ ಸೇವಿಸಿದ್ದಾರೆ. ಕಿಟಕಿ ಗಾಜುಗಳನ್ನು ಬಂದ್ ಮಾಡಿಕೊಂಡಿದ್ದವರು ಹೇಗೋ ಮುಂದೆ ಸಾಗಿದ್ದಾರೆ. ಕೆಲವರು ಉಸಿರಾಡ ಲಾಗದೆ ನಿಂತಲ್ಲೇ ನಿಂತಿದ್ದರು. ಸ್ಥಳದಲ್ಲಿದ್ದ ರೈಲ್ವೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಅಸ್ವಸ್ಥರಾದವರನ್ನು ತಕ್ಷಣ ಆಂಬುಲೆನ್ಸ್‍ನಲ್ಲಿ ರೈಲ್ವೆ ಆಸ್ಪತ್ರೆಗೆ ಕಳುಹಿಸಿದರು.

ಫುಟ್‍ಪಾತ್‍ನಲ್ಲೇ ಮಲಗಿದ ವ್ಯಕ್ತಿ: ಬ್ಯಾಗ್ ಹಿಡಿದುಕೊಂಡು ರೈಲ್ವೆ ಕ್ರೀಡಾಂ ಗಣದ ಕಡೆಯಿಂದ ವಾಣಿ ವಿಲಾಸ ವಾಟರ್ ವಕ್ರ್ಸ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು, ಕ್ಲೋರಿನ್ ಸೋರಿಕೆ ಯಾಗುತ್ತಿದ್ದ ಸ್ಥಳದ ಸಮೀಪ ಹೋಗುತ್ತಿದ್ದಂತೆ ಅಸ್ವಸ್ಥರಾದರು. ಮುಂದೆ ನಡೆಯಲಾಗದೆ ಫುಟ್‍ಪಾತ್‍ನಲ್ಲೇ ಕುಳಿತರು. ಪ್ರಬಲ ವಾಸನೆ ಸಹಿಸಲಾಗದೆ ಕೆಲ ಹೊತ್ತಿಗೆ ಫುಟ್‍ಪಾತ್‍ನಲ್ಲೇ ಮಲಗಿಬಿಟ್ಟರು. ಐದಾರು ಆಂಬುಲೆನ್ಸ್‍ಗಳು ಅಸ್ವಸ್ಥರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಕಾರಣ ಅಲ್ಲಿಗೆ ಆಂಬುಲೆನ್ಸ್ ಬರುವುದೂ ಸ್ವಲ್ಪ ತಡವಾಯಿತು. ಅಷ್ಟರಲ್ಲಿ ರೈಲ್ವೆ ಪೊಲೀಸರು ಬಂದು ತಮ್ಮ ವಾಹನದಲ್ಲೇ ಆ ವ್ಯಕ್ತಿಯನ್ನು ರೈಲ್ವೆ ಆಸ್ಪತ್ರೆಗೆ ಕರೆದೊಯ್ದರು.

ಪರಿಹಾರ ಕಾರ್ಯಾಚರಣೆ: ಕ್ಲೋರಿನ್ ಸೋರಿಕೆ ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ದರಾದರೂ ಪ್ರಬಲ ವಾಸನೆಯಿಂದಾಗಿ ಕಾರ್ಯಾಚರಣೆ ಸವಾಲಾಗಿತ್ತು. ಒಂದೆಡೆ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ಕರೆದೊ ಯ್ಯುತ್ತಿದ್ದರೆ ಮತ್ತೊಂದೆಡೆ ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯರಾಮಯ್ಯ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ.ಪಿ.ನವೀನ್ ಕುಮಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹೆಚ್.ರಾಜು ನೇತೃತ್ವದಲ್ಲಿ ಸರಸ್ವತಿಪುರಂ, ಬನ್ನಿಮಂಟಪ ಹಾಗೂ ಹೆಬ್ಬಾಳ ಅಗ್ನಿಶಾಮಕ ಠಾಣೆ ಅಧಿಕಾರಿ ಗಳು ಹಾಗೂ ಸಿಬ್ಬಂದಿ ಮೂರು ವಾಹನ ಗಳೊಂದಿಗೆ ಕ್ಲೋರಿನ್ ಶಕ್ತಿ ಕುಂದಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು. ರೈಲ್ವೆ ಪೊಲೀಸ್ ಹಾಗೂ ವಾಣಿ ವಿಲಾಸ ವಾಟರ್ ವಕ್ರ್ಸ್ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಗೆ ಸಹಕಾರ ನೀಡಿದರು. ಅಂತಿಮವಾಗಿ ಸಂಜೆ 5 ಗಂಟೆ ವೇಳೆಗೆ ಕ್ಲೋರಿನ್ ಸೋರಿಕೆ ಕಡಿಮೆ ಯಾಯಿತು. ಸಿಲಿಂಡರ್‍ನಿಂದ ಸೋರಿಕೆ ಯಾಗದಂತೆ ಬಂದ್ ಮಾಡಲಾಯಿತು.

ರಸ್ತೆ ಸಂಚಾರ ಬಂದ್: ಕ್ಲೋರಿನ್ ಸೋರಿಗೆ ಪ್ರಮಾಣ ಹೆಚ್ಚಾಗಿ ಸುತ್ತಮುತ್ತಲ ವಾತಾವರಣವೇ ಬದಲಾಗಿತ್ತು. ತಕ್ಷಣ ರೈಲ್ವೆ ಪೊಲೀಸರು ರೈಲು ನಿಲ್ದಾಣದ ಪಶ್ಚಿಮ ಗೇಟ್ ಬಳಿ ಹಾಗೂ ಚೆಲುವಾಂಬ ಪಾರ್ಕ್ ಬಳಿ ನಿಂತು ವಾಹನಗಳನ್ನು ತಡೆದರು. ನಂತರ ನಗರ ಪೊಲೀಸರು ದಾಸಪ್ಪ ವೃತ್ತ, ತರಾಸು ವೃತ್ತ ಹಾಗೂ ಯಾದವಗಿರಿ ಬಳಿ ಬ್ಯಾರಿಕೇಡ್ ಅಳವಡಿಸಿ, ರಸ್ತೆ ಸಂಚಾರ ವನ್ನು ಬಂದ್ ಮಾಡಿದರು. ಆರಂಭದಲ್ಲೇ ರಸ್ತೆ ಸಂಚಾರ ಬಂದ್ ಮಾಡಿದ್ದರೆ ಹೆಚ್ಚು ಜನ ಅಸ್ವಸ್ಥರಾಗದಂತೆ ತಡೆಯಬಹುದಿತ್ತು. ಆದರೆ ಪ್ರಬಲ ವಾಸನೆ ನಡುವೆ ಕ್ಲೋರಿನ್ ಸೋರಿಕೆ ತಡೆಯುವ ಪ್ರಾಥಮಿಕ ಪ್ರಯತ್ನ ಮಾಡುವಷ್ಟರಲ್ಲಿ ಒಂದು ಗಂಟೆ ತಡವಾಗಿತ್ತು. ಕೆಆರ್‍ಎಸ್ ಮುಖ್ಯರಸ್ತೆ ಬಂದ್ ಮಾಡಿದ್ದು, ಒಂದರ ಹಿಂದೊಂದು ಆಂಬುಲೆನ್ಸ್ ಸಂಚಾರ ಗಮನಿಸಿದ ಸಾರ್ವಜನಿಕರಲ್ಲೂ ಆತಂಕಗೊಂಡಿದ್ದು ಕಂಡುಬಂದಿತು.

ಈ ಹಿಂದೆಯೂ ಸೋರಿಕೆಯಾಗಿತ್ತು?: ಸುಮಾರು 15 ವರ್ಷಗಳ ಹಿಂದೆ ವಾಣಿ ವಿಲಾಸ ವಾಟರ್ ವಕ್ರ್ಸ್ ಆವರಣದಲ್ಲಿ ಕ್ಲೋರಿನ್ ಸಿಲಿಂಡರ್ ಸೋರಿಕೆಯಾಗಿತ್ತು. ಆದರೆ ಅಲ್ಲಿನ ಸಿಬ್ಬಂದಿಯ ಸಮಯ ಪ್ರಜ್ಞೆ ಯಿಂದ ಯಾವುದೇ ಅವಘಡ ಸಂಭವಿಸಿ ರಲಿಲ್ಲ. ಸೋರಿಕೆ ಕಂಡುಬಂದ ತಕ್ಷಣವೇ ಸಿಲಿಂಡರ್ ಅನ್ನು ನೀರಿನ ಹೊಂಡಕ್ಕೆ ಹಾಕಿ ನಿಷ್ಕ್ರಿಯಗೊಳಿಸಿದ್ದರು ಎಂದು ತಿಳಿದುಬಂದಿದೆ. ಈಗಲೂ ಇಲ್ಲಿ ಹತ್ತಾರು ಕ್ಲೋರಿನ್ ಸಿಲಿಂಡರ್‍ಗಳಿದ್ದು ಅತ್ಯಂತ ಜಾಗರೂಕತೆಯಿಂದ ನಿತ್ಯ ನಿರ್ವಹಣೆ ಮಾಡಲಾಗುತ್ತಿದೆ.

Translate »