ಪ್ರತಾಪ್‍ಸಿಂಹರಿಂದ ಕೋಮುಗಲಭೆ  ಪ್ರಚೋದನಾ ಹೇಳಿಕೆ: ಆರೋಪ
ಮೈಸೂರು

ಪ್ರತಾಪ್‍ಸಿಂಹರಿಂದ ಕೋಮುಗಲಭೆ ಪ್ರಚೋದನಾ ಹೇಳಿಕೆ: ಆರೋಪ

September 15, 2021

ಮೈಸೂರು, ಸೆ.14(ಪಿಎಂ)- ಸಂಸದ ಪ್ರತಾಪ್ ಸಿಂಹ ಕೋಮು ಗಲಭೆ ಸೃಷ್ಟಿಸು ವಂಥ ಹೇಳಿಕೆ ನೀಡಿದ್ದಾರೆ ಎಂದು ಆರೋ ಪಿಸಿರುವ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಮಂಗಳವಾರ ಜಿಲ್ಲಾಧಿಕಾರಿಗೆ ದೂರು ನೀಡಿತು.
ಮೈಸೂರು ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಕೊಠಡಿಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕರ ತಂಡ, ಪ್ರತಾಪ್ ಸಿಂಹ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿತು.

ಸೆ.8ರಂದು ಮೈಸೂರು ಜಿಪಂ ಸಭಾಂ ಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಹಲವು ಶಾಸಕರ ಸಮ್ಮುಖದಲ್ಲಿಯೇ ಸಂಸದರು, ದೇವರಾಜ ಅರಸು ರಸ್ತೆಯ ದರ್ಗಾ, ಇರ್ವಿನ್ ರಸ್ತೆಯ ಮಸೀದಿಯನ್ನು ಒಡೆದು ಹಾಕಬೇಕೆಂದು ಜಿಲ್ಲಾಧಿಕಾರಿ ಗಳಾದ ತಮಗೆ ಧಮ್ಕಿ ಹಾಕಿದರು. ಈ ವಿಚಾರವನ್ನು ತಾವು ಗಂಭೀರವಾಗಿ ಪರಿ ಗಣಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೈಸೂರು ನಗರದಲ್ಲಿ ಅಥವಾ ಜಿಲ್ಲೆ ಯಲ್ಲಿ ಮಂದಿರ, ಮಸೀದಿ, ಚರ್ಚ್ ಅಥವಾ ಪ್ರತಿಮೆಗಳನ್ನು ಸಾರ್ವಜನಿಕರು ಉಪಯೋಗಿ ಸುತ್ತಿರುವ ಸ್ಥಳಗಳಲ್ಲಿ ನಿರ್ಮಿಸಿದ್ದರೆ, 2013ರ ಸುಪ್ರೀಂಕೋರ್ಟ್ ಆದೇಶದಂತೆ ಆಯಾ ಧರ್ಮಗಳ ಧಾರ್ಮಿಕ ಮುಖಂಡರೊಂ ದಿಗೆ ಚರ್ಚಿಸಿ ತೆರವುಗೊಳಿಸುವುದಕ್ಕೆ ಕಾಂಗ್ರೆಸ್ ಪಕ್ಷದ ತಕರಾರಿಲ್ಲ. ಆದರೆ ಉಲ್ಲೇಖಿತ ದರ್ಗಾ, ಮಸೀದಿ ಸಂಬಂಧ ನ್ಯಾಯಾ ಲಯದಲ್ಲಿ ವ್ಯಾಜ್ಯವಿದೆ. ಆದಾಗ್ಯೂ ಕೆಡಿಪಿ ಸಭೆಯಲ್ಲಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸದೇ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಸಮುದಾಯಗಳ ನಡುವೆ ಕಿಚ್ಚು ಹಚ್ಚಿಸುವಂತಹ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಸೆ.12ರಂದು ಪತ್ರಿಕಾಗೋಷ್ಠಿ ನಡೆಸಿ, ಅನ್ಯ ಧರ್ಮೀಯ ಮಹಿಳೆಯರ ಬಗ್ಗೆಯೂ ಅವ ಹೇಳನಕಾರಿಯಾಗಿ ಮಾತನಾಡಿದ್ದಾರೆ. ಒಬ್ಬ ಸಂಸದರಾಗಿ ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಎಂದು ಬೇರ್ಪಡಿಸಿ ಮಾತನಾಡಿರುವುದು ದೇಶದ ಕಾನೂನಿಗೆ ವಿರುದ್ಧ. ಇವರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದೇ ನಾದರೂ ಕೋಮು ಗಲಭೆಯಾದರೆ ಸಂಸ ದರು ಮತ್ತು ಜಿಲ್ಲಾಡಳಿತವೇ ನೇರ ಹೊಣೆ ಯಾಗಬೇಕಾಗುತ್ತದೆ. ನೆಲದ ಕಾನೂನು ಎಲ್ಲರಿಗೂ ಒಂದೇ ಎಂದು ಭಾವಿಸಿ ಸಂಸ ದರ ವಿರುದ್ಧ ಸೂಕ್ತ ಕಾನೂನು ಕ್ರಮ ಜರು ಗಿಸಬೇಕೆಂದು ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಕಳಲೆ ಕೇಶವ ಮೂರ್ತಿ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಎಂ. ಲಕ್ಷ್ಮಣ್, ಹೆಚ್.ಎ.ವೆಂಕಟೇಶ್, ಮಂಜುಳಾ ಮಾನಸ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಸೇರಿದಂತೆ ಮತ್ತಿತರರು ತಂಡದಲ್ಲಿದ್ದರು.

Translate »