ಕೆಟಿಪಿಎಲ್ ಕಾರ್ಖಾನೆ ಕಾರ್ಮಿಕರ ಪ್ರತಿಭಟನೆ
ಮೈಸೂರು

ಕೆಟಿಪಿಎಲ್ ಕಾರ್ಖಾನೆ ಕಾರ್ಮಿಕರ ಪ್ರತಿಭಟನೆ

September 15, 2021

ಮೈಸೂರು,ಸೆ.14(ಪಿಎಂ)-ನಂಜನಗೂಡು ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ರೀಡ್ ಅಂಡ್ ಟೇಲರ್ ಬ್ರ್ಯಾಂಡ್‍ನಡಿ ನಡೆಯುತ್ತಿ ರುವ ಕ್ರಿಹಾನ್ ಟೆಕ್ಸ್‍ಕೆಮ್ ಪ್ರೈವೇಟ್ ಲಿಮಿಟೆಡ್ (ಕೆಟಿಪಿಎಲ್) ಕಾರ್ಖಾನೆ ಆಡಳಿತ ಮಂಡಳಿಯು ಕಾನೂನುಬಾಹಿರವಾಗಿ 6 ಮಂದಿ ಕಾರ್ಮಿಕರನ್ನು ವಜಾಗೊಳಿಸಿದೆ ಎಂದು ಆರೋಪಿಸಿ ಕೆಟಿಪಿಎಲ್ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್ ನೇತೃತ್ವದಲ್ಲಿ ಕಂಪನಿಯ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮೈಸೂರು ಡಿಸಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು, ರೀಡ್ ಅಂಡ್ ಟೇಲರ್ ಮುಚ್ಚಿದ್ದು, ಅದರ ಬ್ರ್ಯಾಂಡ್ ನಡಿ ಕ್ರಿಹಾನ್ ಟೆಕ್ಸ್‍ಕೆಮ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಕಂಪನಿ ನಡೆಸುತ್ತಿದೆ. ಇದನ್ನು ಹೊಸದಾಗಿ ಆರಂಭಿಸುವಾಗ ಎಲ್ಲಾ ಕಾರ್ಮಿಕರನ್ನು ವಜಾಗೊಳಿಸಿ, ಹೊಸದಾಗಿ ನೇಮಕಾತಿ ಮಾಡಿದ್ದು, ಈ ವೇಳೆ 565 ಹಳೇ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ.

ಹಳೇ ಕಂಪನಿ ಅವಧಿಯ ಕಾರ್ಮಿಕ ಸಂಘ ಮುಂದುವರೆಸು ವಂತಿಲ್ಲ ಎಂಬ ಒಪ್ಪಂದದ ಹಿನ್ನೆಲೆಯಲ್ಲಿ ಕಾರ್ಮಿಕರು ಹೊಸ ಸಂಘ ರಚಿಸಿ, ತಮ್ಮ ಹಳೇ ಕಂಪನಿ ಗ್ರಾಚ್ಯುಯಿಟಿ ಹಣ ನೀಡಲು ಮನವಿ ಸಲ್ಲಿಸಿದ್ದರು. ಆದರೆ ಹಳೇ ಮಾಲೀಕರು ನೀಡಬೇಕಿರುವ 8 ಕೋಟಿ ರೂ. ಕಾರ್ಮಿಕರ ಗ್ರಾಚ್ಯುಯಿಟಿ ಹಣವನ್ನು ಹೊಸ ಮಾಲೀಕರು ತಮ್ಮಲ್ಲಿ ಇಟ್ಟುಕೊಂಡಿದ್ದು, ಕಳೆದ 6 ತಿಂಗಳಿಂದ ಕೊಡುವ ಭರವಸೆಯಲ್ಲೇ ಕಾಲದೂಡುತ್ತಿದ್ದಾರೆ ಎಂದು ದೂರಿದರು.

ಮಾಲೀಕರ ಸೂಚನೆಯಂತೆ ಹೊಸ ಸಂಘಕ್ಕೆ 6 ಮಂದಿ ಪ್ರತಿನಿಧಿಗಳನ್ನು ಕಾರ್ಮಿಕರು ಆಯ್ಕೆ ಮಾಡಿ ಅವರ ಮೂಲಕ ಗ್ರಾಚ್ಯುಯಿತಿ ಹಣ ಪಡೆಯಲು ಮುಂದಾಗಿದ್ದರು. ಆದರೆ ಆಯ್ಕೆ ಯಾದ 6 ಮಂದಿ ಕಾರ್ಮಿಕ ಪ್ರತಿನಿಧಿಗಳನ್ನು ಕಾನೂನುಬಾಹಿರ ವಾಗಿ ಮಾಲೀಕರು ವಜಾಗೊಳಿಸಿದರು. ಗ್ರಾಚ್ಯುಯಿಟಿ ಹಣ ಪಡೆದುಕೊಳ್ಳಲು ಮತ್ತು 6 ಮಂದಿ ಕಾರ್ಮಿಕ ಪ್ರತಿನಿಧಿಗಳನ್ನು ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಬೇಕೆಂದು ಕಂಪನಿಗೆ ಮನವಿ ಸಲ್ಲಿಸಿದರೂ ತಿರಸ್ಕರಿಸಿದ್ದಾರೆ ಎಂದು ಆರೋಪಿಸಿದರು.

ನಮ್ಮ ಸಂಘಕ್ಕೆ ಮಾನ್ಯತೆ ನೀಡಿ ಮಾತುಕತೆ ಮಾಡುವಂತೆ ಕಂಪನಿ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕು. ಕಾನೂನು ಬಾಹಿರವಾಗಿ ವಜಾಗೊಳಿಸಿರುವ 6 ಮಂದಿ ಕಾರ್ಮಿಕ ಸಂಘದ ಪ್ರತಿನಿಧಿಗಳನ್ನು ಯಾವುದೇ ಷರತ್ತುಗಳಲ್ಲಿ ಮರು ನೇಮಕ ಮಾಡಿಕೊಳ್ಳಬೇಕು. ಹಳೆ ಕಂಪನಿ ಗ್ಯಾಚ್ಯುಯಿಟಿ ಕಾಯ್ದೆಯಡಿ ನಿಗದಿತ ನಮೂನೆಯಲ್ಲಿ ನೀಡುವಂತೆ ಆದೇಶಿಸಬೇಕು. 2020ರ ನ.11ರ ಒಪ್ಪಂದಕ್ಕೆ ಆಡಳಿತ ಮಂಡಳಿಯವರು ಬದ್ಧರಾಗಿರುವಂತೆ ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು.
ಇದಕ್ಕೂ ಮುನ್ನ ಕಾರ್ಖಾನೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾರ್ಮಿಕರು ಬೈಕ್ ರ್ಯಾಲಿ ನಡೆಸಲಾಯಿತು. ಯೂನಿಯನ್‍ನ ಅಧ್ಯಕ್ಷ ಚಂದ್ರಶೇಖರ್ ಮೇಟಿ, ಪ್ರಧಾನ ಕಾರ್ಯದರ್ಶಿ ಟಿ.ಎನ್.ಲೋಕೇಶ್, ಉಪಾಧ್ಯಕ್ಷ ಮಹದೇವಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »