ಶಾಸಕ ಎಲ್.ನಾಗೇಂದ್ರರ ಫೋನ್ ಇನ್‍ನಲ್ಲಿ ದೂರುಗಳ ಸುರಿಮಳೆ ಕೊರೊನಾ ರೋಗಿಗೆ ಐಸಿಯು ಬೇಕು… ಟೀ ಅಂಗಡಿಗಳಿಂದ  ಸಿಗರೇಟು ಹೊಗೆ ತಪ್ಪಿಸಿ.. ಕಂದಾಯ ಪಾವತಿ ಮುಂದೂಡಿ…
ಮೈಸೂರು

ಶಾಸಕ ಎಲ್.ನಾಗೇಂದ್ರರ ಫೋನ್ ಇನ್‍ನಲ್ಲಿ ದೂರುಗಳ ಸುರಿಮಳೆ ಕೊರೊನಾ ರೋಗಿಗೆ ಐಸಿಯು ಬೇಕು… ಟೀ ಅಂಗಡಿಗಳಿಂದ ಸಿಗರೇಟು ಹೊಗೆ ತಪ್ಪಿಸಿ.. ಕಂದಾಯ ಪಾವತಿ ಮುಂದೂಡಿ…

April 27, 2021

ಮೈಸೂರಿನ ಹೊರವಲಯದ ಕೇರ್ಗಳ್ಳಿ ಮತ್ತು ಅಜ್ಜಯ್ಯನಹುಂಡಿಯಲ್ಲಿ 20 ವರ್ಷದ ಹಿಂದೆ 476 ಜನರಿಗೆ ಅಂದು ಶಾಸಕರಾಗಿದ್ದ ಶಂಕರಲಿಂಗೇಗೌಡರು ಆಶ್ರಯ ನಿವೇಶನಗಳನ್ನು ಮಂಜೂರು ಮಾಡಿಸಿದ್ದರು. ಎಲ್ಲರೂ ಪೂರ್ತಿ ಹಣವನ್ನು ಕಟ್ಟಿದ್ದರೂ, ಇದುವರೆಗೂ ನಿವೇಶನ ನೀಡಿಲ್ಲ. ಈಗ ಆ ಸ್ಥಳವನ್ನು ಕೆರೆಯ ಜಾಗ ಎಂದು ಫಲಾನುಭವಿಗಳಿಗೆ ನಿವೇಶನ ವಿತರಿಸದೆ ಮೀನಮೇಷ ಎಣಿಸ ಲಾಗುತ್ತಿದೆ ಎಂದು ಫಲಾನುಭವಿಗಳ ಪರವಾಗಿ ಚಂದ್ರು ಎಂಬುವರು ಶಾಸಕರಲ್ಲಿ ದೂರಿದರು. ಇದಕ್ಕೆ ಉತ್ತರಿಸಿದ ಶಾಸಕ ಎಲ್.ನಾಗೇಂದ್ರ, ಸರ್ಕಾರಿ ಜಾಗವಾದ ಕೆರೆಯನ್ನು ಅಂದು ಜಾಗ ಕೊಟ್ಟವರು ಸರ್ಕಾರದ ಅನುಮತಿಯನ್ನೂ ಪಡೆಯದೆ ನಿವೇಶನ ಮಾಡಿ ಹಂಚಿಬಿಟ್ಟಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಕೆರೆ ಜಾಗ ಕೆರೆಗೆ ಎಂದು ಆಗಿದೆ. ಮುಂದಿನ ಆಶ್ರಯ ಸಮಿತಿ ಸಭೆ ನಡೆಸಿ, ಇದಕ್ಕೆ ಪರ್ಯಾಯವಾಗಿ ಬೇರೆಡೆ ನಿವೇಶನ ನೀಡುವ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಮೈಸೂರು, ಏ.26(ಆರ್‍ಕೆಬಿ)- ಟ್ರಾಮಾ ಕೇರ್ ಸೆಂಟರ್‍ನಲ್ಲಿ ಕೋವಿಡ್ ರೋಗಿಯೊಬ್ಬರಿಗೆ ಐಸಿಯು ಬೇಕು ವ್ಯವಸ್ಥೆ ಮಾಡಿಕೊಡಿ, ಟೀ ಅಂಗಡಿಗಳಲ್ಲಿ ಸಿಗರೇಟು ಸೇದುವವರಿಂದ ತೊಂದರೆ ತಪ್ಪಿಸಿ, ಕಂದಾಯ ಪಾವತಿ ಮುಂದೂಡಿ, ಆಶ್ರಯ ಮನೆಗಳಿಗೆ ಹಣ ಕಟ್ಟಿ 20 ವರ್ಷ ವಾದರೂ ಇನ್ನೂ ನಿವೇಶನ ನೀಡಿಲ್ಲ. ತಕ್ಷಣ ನಿವೇಶನ ವಿತರಣೆಗೆ ಕ್ರಮ ಕೈಗೊಳ್ಳಿ. ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಸೋಮವಾರ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ಕ್ಷೇತ್ರದ ಸಾರ್ವಜನಿಕರಿಗಾಗಿ ಆಯೋಜಿಸಿದ್ದ 2ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಇಂತಹ ವಿವಿಧ 42 ಕರೆಗಳು ಕೇಳಿ ಬಂದವು. ಮೈಸೂರಿನ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಕೋವಿಡ್ ರೋಗಿಯೊಬ್ಬರಿಗೆ ಐಸಿಯು ಅಗತ್ಯವಿದೆ. ಐಸಿಯು ವಾರ್ಡ್ ಸಿಗದಿರುವ ಬಗ್ಗೆ ಮಂಚೇಗೌಡನಕೊಪ್ಪಲಿನ ಜಯರಾಮು, ಹೆಬ್ಬಾಳದ ಸುನಿಲ್ ಶಾಸಕರ ಗಮನ ಸೆಳೆದರು. ನಿಮ್ಮ ಪ್ರಭಾವ ಬಳಸಿ ಐಸಿಯು ದೊರಕಿಸಿಕೊಡಿ ಎಂದು ಮನವಿ ಮಾಡಿ ದರು. ಇದಕ್ಕೆ ಉತ್ತರಿಸಿದ ಶಾಸಕ ಎಲ್. ನಾಗೇಂದ್ರ ರೋಗಿಗೆ ಐಸಿಯು ವ್ಯವಸ್ಥೆ ಕಲ್ಪಿಸಿಕೊಡುವ ಭರವಸೆ ನೀಡಿದರು.

ಟೀ ಅಂಗಡಿಗಳಲ್ಲಿ ಸಿಗರೇಟು ಸೇದು ವವರ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಿಗರೇಟು ಸೇದುವವರಿಗಿಂತ ಸೇದ ದವರಿಗೆ ಹೆಚ್ಚು ತೊಂದರೆ ಆಗುತ್ತಿದೆ. ಇದನ್ನು ತಪ್ಪಿಸಿ ಎಂದು ಶೋಭಾ ಎಂಬ ಮಹಿಳೆ, ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕರು, ಟೀ ಅಂಗಡಿಗಳಲ್ಲಿ ಯಾರೂ ಸಿಗರೇಟು ಸೇದದಂತೆ ತಪ್ಪಿಸುವುದಾಗಿ ಭರವಸೆ ನೀಡಿದರು.

ಲಾಕ್‍ಡೌನ್ ಘೋಷಣೆಯಾದರೆ ಬೀದಿ ಬದಿ ವ್ಯಾಪಾರಿಗಳಾದ ನಮ್ಮ ಜೀವನಕ್ಕೆ ಏನು ಮಾಡುವುದು ಎಂಬುದು ಪುಷ್ಪಾ ಎಂಬುವರ ಆತಂಕದ ಪ್ರಶ್ನೆಯಾದರೆ, ಲಾಕ್‍ಡೌನ್ ಹಿನ್ನೆಲೆ ಕಂದಾಯ ಪಾವತಿಯ ಅವಧಿಯನ್ನು ಮುಂದೂಡುವಂತೆ ಗೋಕುಲಂನ ರಂಗಸ್ವಾಮಿ ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿ ಸಿದ ಶಾಸಕ ಎಲ್.ನಾಗೇಂದ್ರ, ಕಂದಾಯ ವನ್ನು ತಕ್ಷಣ ಅಲ್ಲದಿದ್ದರೂ ನಿಧಾನ ವಾಗಿಯಾದರೂ ಕಟ್ಟಲು ಸಲಹೆ ನೀಡಿ ದರು. ಹೆಬ್ಬಾಳ 2ನೇ ಹಂತದ ಕಾವೇರಿ ಸರ್ಕಲ್ ಬಳಿ ವಸತಿ ಪ್ರದೇಶದೊಳಗೆ ನಗರ ಸಾರಿಗೆ ಬಸ್‍ಗಳು ಓಡಾಡುತ್ತಿವೆ. ಬಸ್ ರೂಟ್ ಸಂಖ್ಯೆ 116 ಮತ್ತು 119 ಸಂಖ್ಯೆಯ ಬಸ್‍ಗಳು ಅವರ ಮಾಮೂಲಿ ರೂಟ್‍ನಲ್ಲಿ ಓಡಾಡದೆ ಸಮಯ ಉಳಿಸಲೆಂದು ಮಹಿಳೆಯರು, ಮಕ್ಕಳು ಹೆಚ್ಚಾಗಿ ಓಡಾಡುವ ವಸತಿ ಪ್ರದೇಶದ ಸಣ್ಣ ರಸ್ತೆಯಲ್ಲಿ ಬಸ್‍ಗಳನ್ನು ಓಡಿಸುತ್ತಿ ದ್ದಾರೆ. ಇದರಿಂದ ಅಪಘಾತದ ಆತಂಕ ವಿದೆ. ಇದನ್ನು ತಪ್ಪಿಸಿ ಅವರ ರೂಟ್ ನಲ್ಲಿಯೇ ಬಸ್‍ಗಳು ಓಡಾಡಲು ಸೂಚಿಸಿ ಎಂದು ಮುರುಗನ್ ಶಾಸಕರಿಗೆ ದೂರಿದರು. ಈ ಸಂಬಂಧ ಕೆಎಸ್‍ಆರ್ ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡುವು ದಾಗಿ ಶಾಸಕರು ಭರವಸೆ ನೀಡಿದರು.

ಚಾಮರಾಜಪುರಂ ರೈಲ್ವೆ ನಿಲ್ದಾಣದ ಬಳಿಯ ಚಾಮುಂಡೇಶ್ವರಿ ದೇವಸ್ಥಾನದ ರಸ್ತೆಯಲ್ಲಿ ಫುಟ್‍ಪಾತ್‍ನಲ್ಲಿ ಉದ್ದಕ್ಕೂ ಕಟ್ಟಡದ ಸಾಮಗ್ರಿಗಳು, ಹಸು-ಕರು ಗಳನ್ನು ಕಟ್ಟುವುದು, ಕಾರ್ ಪಾರ್ಕಿಂಗ್ ಇತ್ಯಾದಿಯಿಂದ ರೈಲು, ಬಸ್, ಕೋರ್ಟ್‍ಗೆ ಹೋಗುವವರು, ದೇವಸ್ಥಾನದ ಭಕ್ತರಿಗೆ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಯಾಗುತ್ತಿದೆ ಎಂದು ಕೆ.ಜಿ.ಕೊಪ್ಪಲಿನ ಮಾಜಿ ಸೈನಿಕ ಸಿದ್ದೇಗೌಡ ಶಾಸಕರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಇದನ್ನು ಸರಿಪಡಿಸುವ ಭರವಸೆ ನೀಡಿದರು. ಕೆಲಸಕ್ಕೆ ಅರ್ಜಿ ಹಾಕಿದ್ದೇನೆ. ಸಹಾಯ ಮಾಡಿ ಎಂದು ಮಂಡಿ ಮೊಹಲ್ಲಾ ಅಭಿಲಾಷ್, ಕೆಲಸವಿಲ್ಲದೆ ತೊಂದರೆ ಯಾಗಿದೆ ಸಹಾಯ ಮಾಡಿ ಎಂದು ತಿಲಕ್‍ನಗರದ ಶೋಭಾ, ತಿಲಕ್‍ನಗರ ನ್ಯಾಯಬೆಲೆ ಅಂಗಡಿಯಲ್ಲಿ ಟೋಕನ್ ಕೊಟ್ಟ ಅಂಗಡಿ ಮಾಲೀಕರು ಪಡಿತರ ನೀಡದೆ ತೊಂದರೆ ಕೊಡುತ್ತಿದ್ದಾರೆ ಎಂದು ಮಮತಾ ಎಂಬುವರು ದೂರಿದರು.

Translate »