`ಪ್ರಸಾದ’ದಡಿ ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿ;48.3 ಕೋಟಿ ರೂ. ಯೋಜನೆಗೆ ಕೇಂದ್ರದ ಅಸ್ತು
ಮೈಸೂರು

`ಪ್ರಸಾದ’ದಡಿ ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿ;48.3 ಕೋಟಿ ರೂ. ಯೋಜನೆಗೆ ಕೇಂದ್ರದ ಅಸ್ತು

December 20, 2022

ಮೈಸೂರು, ಡಿ. 19(ಆರ್‍ಕೆ)-ಮೈಸೂರಿನ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ `ಪ್ರಸಾದ’ ಯೋಜನೆಯಡಿ 48.3 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರ ಕಡೆಗೂ ಅನುಮೋದನೆ ನೀಡಿದೆ.

ಪಿಲಿಗ್ರಿಮೇಜ್ ರಿಜುವಿನೇಷನ್ ಅಂಡ್ ಸ್ಪಿರಿಚ್ಯುಯಲ್, ಹೆರಿಟೇಜ್ ಆಗ್‍ಮೆಂಟೇಷನ್ ಡ್ರೈವ್ (ಪ್ರಸಾದ್) ಯೋಜನೆ ಯಡಿ ಚಾಮುಂಡಿಬೆಟ್ಟದಲ್ಲಿ ಭಕ್ತಾದಿಗಳು ಹಾಗೂ ಪ್ರವಾಸಿ ಗರ ಅನುಕೂಲಕ್ಕಾಗಿ ಕೈಗೊಳ್ಳಲು ಉದ್ದೇಶಿಸಿರುವ ಅಭಿ ವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರವು 48.3 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದ್ದು, ಈ ಸಂಬಂಧ ನಾಲ್ಕು ದಿನದಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ.

2021ಲ್ಲಿ ಬೆಂಗಳೂರಲ್ಲಿ ಜರುಗಿದ ಪ್ರವಾಸೋದ್ಯಮ ಮತ್ತು ಸಂಸ್ಕøತಿ ಸಚಿವರ ಸಮ್ಮೇಳನದಲ್ಲಿ ಈ ಕುರಿತು ಸಮಗ್ರ ಚರ್ಚೆ ನಡೆದ ನಂತರ ಚಾಮುಂಡಿಬೆಟ್ಟದ ಅಭಿ ವೃದ್ಧಿ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸಂಸದ ಪ್ರತಾಪ್ ಸಿಂಹ ಅವರ ನಿರಂತರ ಪ್ರಯತ್ನದಿಂದಾಗಿ ಕೇಂದ್ರ ಪ್ರವಾ ಸೋದ್ಯಮ ಸಚಿವಾಲಯವು `ಪ್ರಸಾದ’ ಯೋಜನೆಯಡಿ 48.3 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ನೀಡಿದೆ.

ಸಂಪೂರ್ಣ ಕೇಂದ್ರ ಸರ್ಕಾರದ ಯೋಜನೆಯಾದ ಪ್ರಸಾದ ಅಡಿ 100 ಕೋಟಿ ರೂ.ವರೆಗೆ ದೇವಸ್ಥಾನಗಳ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಲು ಅವಕಾಶ ವಿದ್ದು, ಯಾತ್ರಾರ್ಥಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲೆಂದು ಕೇಂದ್ರ ಸರ್ಕಾರವು 2014-15ನೇ ಸಾಲಿನಲ್ಲಿ ಈ ಯೋಜನೆ ಯನ್ನು ಜಾರಿಗೆ ತಂದಿತ್ತು. ಅದರಂತೆ ಯಾತ್ರಾಸ್ಥಳಗಳ ಸೌಂದರ್ಯಿಕರಣ ಮತ್ತು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿ ಇದೀಗ 48.3 ಕೋಟಿ ರೂ. ಅನುದಾನ ನೀಡಿ 7 ವಿಭಾಗಗಳನ್ನಾಗಿ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಈ ಸಂಬಂಧ ಆದೇಶ ಪ್ರತಿ ಕೈಸೇರುತ್ತಿದ್ದಂತೆಯೇ ಪ್ರವಾಸೋದ್ಯಮ ಇಲಾಖೆಯು ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಿದೆ ಎಂದು ಇಲಾಖೆ ಡೆಪ್ಯುಟಿ ಡೈರೆಕ್ಟರ್ (ಆಡಳಿತ) ಅನಿತಾ ಭಾಸ್ಕರ್ ತಿಳಿಸಿದ್ದಾರೆ.

ಪ್ರಸ್ತಾವನೆಯಂತೆ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ ಸೌಂದರ್ಯೀಕರಣಗೊಳಿಸುವುದು, ನಂದಿ ಪ್ರತಿಮೆ, ದೇವಿಕೆರೆ ಅಭಿವೃದ್ಧಿ, ಬೆಟ್ಟದ ಮೇಲೆ ಮಹಿಷಾಸುರ ಪ್ರತಿಮೆ ಸರ್ಕಲ್‍ನಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದವರೆಗೆ ರಸ್ತೆ, ಆವರಣದ ಸೌಂದರ್ಯ ಅಭಿವೃದ್ಧಿ ಪಡಿಸುವ ಉದ್ದೇಶ ಯೋಜನೆಯಲ್ಲಿ ಸೇರಿದೆ. ಮಹಿಷಾಸುರ ಪ್ರತಿಮೆಯಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದವರೆಗೆ ಪಾರಂಪರಿಕ ವಿದ್ಯುತ್ ದೀಪಗಳು, ಎಂಟ್ರೆನ್ಸ್ ಪ್ಲಾಜಾ, ಮಹಾಬಲೇಶ್ವರ ದೇವಸ್ಥಾನದ ಸುತ್ತಲಿನ ಪ್ರದೇಶದ ಅಭಿವೃದ್ಧಿಯೂ ಪ್ರಸ್ತಾವನೆಯಲ್ಲಿ ಸೇರಿದೆ. ಮಾರ್ಗಸೂಚಿಯಂತೆ ಇರದಿದ್ದ ಕಾರಣ 2019ರಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದರಿಂದ ಕಳೆದ ವರ್ಷ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಡಿಪಿಆರ್ ತಯಾರಿಸಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿತ್ತು. ಈ ಯೋಜನೆಯಡಿ ಮೈಸೂರಿನ ಚಾಮುಂಡೇಶ್ವರಿ ದೇವಾಲಯ, ಆವರಣ, ನಂದಿ ಪ್ರತಿಮೆ ಆವರಣದ ಸಮಗ್ರ ಅಭಿವೃದ್ಧಿಪಡಿ ಸಲೆಂದು ಸಂಸದ ಪ್ರತಾಪ್ ಸಿಂಹ ನಿರಂತರ ಪ್ರಯತ್ನ ಮಾಡಿ ಯೋಜನೆ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ಸರ್ಕಾರದಿಂದ ಈ ಬಗ್ಗೆ ಆದೇಶ ಹೊರ ಬೀಳುತ್ತಿದ್ದಂತೆಯೇ ಕಾಮಗಾರಿ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Translate »