ಕಬ್ಬು ಬೆಳೆಗಾರರ ಸಂಘದಿಂದ ಕೊರೋನಾ ವಾರಿಯರ್ಸ್‍ಗೆ ಅಭಿನಂದನೆ
ಮೈಸೂರು ಗ್ರಾಮಾಂತರ

ಕಬ್ಬು ಬೆಳೆಗಾರರ ಸಂಘದಿಂದ ಕೊರೋನಾ ವಾರಿಯರ್ಸ್‍ಗೆ ಅಭಿನಂದನೆ

June 11, 2020

ತಿ.ನರಸೀಪುರ, ಜೂ.10(ಎಸ್‍ಕೆ)-ತಾಲೂಕಿನ ಬನ್ನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಬ್ಬು ಬೆಳೆಗಾರರ ಸಂಘದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೊರೋನಾ ವಾರಿಯರ್ಸ್ ಅಭಿನಂದಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದಲ್ಲಿ ಸರ್ಕಾರಿ ವೈದ್ಯರು ಜನರ ಜೀವ ರಕ್ಷಣೆಗೆ ಮುಂದಾಗಿ ಮಾನವೀಯತೆ ಮೆರೆದರು. ಅಲ್ಲದೆ ಪೌರಕಾರ್ಮಿಕರು, ಆಶಾ-ಅಂಗನವಾಡಿ ಕಾರ್ಯಕರ್ತರು, ಅಧಿಕಾರಿಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಿದರು ಎಂದು ಪ್ರಶಂಸಿಸಿದರು.

ಪ್ರಪಂಚದಾದ್ಯಂತ ಕೊರೊನಾ ಸೋಂಕು ಜನತೆ ಜೀವದ ಜತೆ ಚೆಲ್ಲಾಟವಾಡುತ್ತಿದ್ದ ಸಂದರ್ಭದಲ್ಲಿ ಕ್ಲೀನಿಕ್ ಹಾಗೂ ನರ್ಸಿಂಗ್ ಹೋಂಗಳನ್ನು ಮುಚ್ಚಿ ಮನೆಯಲ್ಲೇ ಕುಳಿತ ಖಾಸಗೀ ವೈದ್ಯರ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್‍ಗಳಾದ ಹಿರಿಯ ವೈದ್ಯಾಧಿಕಾರಿ ಡಾ.ರವಿಕುಮಾರ್, ಮಹಿಳಾ ವೈದ್ಯಾಧಿಕಾರಿ ಡಾ.ಶಾಲಿನಿ, ಮಕ್ಕಳತಜ್ಞ ಡಾ.ಪುರುಷೋತ್ತಮ್, ಉಪತಹಸೀಲ್ದಾರ್ ಆನಂದ್, ನೇತ್ರತಜ್ಞ ರಂಗಸ್ವಾಮಿ, ಔಷದ ವಿಭಾಗದ ಅಕ್ಬರ್ ಆಲಿ, ಮುದ್ದು ಮಲ್ಲೇಶ್, ರಮೇಶ್, ಶುಶ್ರೂಷಕಿಯರಾದ ರಮ್ಯ, ಶಿಲ್ಪ, ಮುತ್ತಮ್ಮ, ಜಯಲಕ್ಷ್ಮಿ, ರೇಣುಕಾ, ಬೂದಪ್ಪ, ಇಂದಿರಾ ಮಣಿ ಅವರನ್ನು ಕುರುಬೂರು ಶಾಂತಕುಮಾರ್ ಸನ್ಮಾನಿಸಿದರು. ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ರಕ್ತದಾನಿಗಳ ಸಂಘದ ಅಧ್ಯಕ್ಷ ಜಿ.ಕೆ.ನಯನ್‍ಗೌಡ, ರಂಗಸಮುದ್ರ ರೇವಣ್ಣ, ಚಾಮನಹಳ್ಳಿ ಸುರೇಶ್, ಅನಿಲ್‍ಕುಮಾರ್, ಹನುಮನಾಳು ಜಗದೀಶ್, ರಾಘವೇಂದ್ರ, ಡಿ.ರಾಜು, ಎ.ಪಿ.ನವೀನ್, ಸಿ.ಲಿಂಗಣ್ಣ, ಎ.ಆರ್.ರಾಮು, ಕುಚೇಲ, ಅರುಣ್‍ಕುಮಾರ್ ಬನ್ನೂರು ಪ್ರಸಾದ್ ಮತ್ತಿತರರಿದ್ದರು.

Translate »