ಡಿ.30ರಿಂದ ಕಾಂಗ್ರೆಸ್ ಬಸ್ ಯಾತ್ರೆ
News

ಡಿ.30ರಿಂದ ಕಾಂಗ್ರೆಸ್ ಬಸ್ ಯಾತ್ರೆ

December 24, 2022

ಬೆಂಗಳೂರು, ಡಿ.23(ಕೆಎಂಶಿ)-ಕೊರೊನಾ ಸೋಂಕಿನ ಭೀತಿಯ ನಡುವೆಯೇ ಪ್ರದೇಶ ಕಾಂಗ್ರೆಸ್ ನಾಯಕರು ರಾಜ್ಯಾ ದ್ಯಂತ ಬಸ್ ಯಾತ್ರೆ ಕೈಗೊಂಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾ ವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು ಸಂಕಲ್ಪಯಾತ್ರೆ, ಜೆಡಿಎಸ್ ಪಂಚರತ್ನಯಾತ್ರೆ ಆರಂಭಿಸಿರುವ ಬೆನ್ನಲ್ಲೆ ಮತದಾರರನ್ನು ಮನವೊಲಿಸಲು ಕಾಂಗ್ರೆಸ್ ಒಂದು ತಿಂಗಳ ಕಾಲ ಬಸ್ ಯಾತ್ರೆ ಹಮ್ಮಿ ಕೊಂಡಿದೆ. ಬಸ್ ಯಾತ್ರೆಗೆ ಸಂಬಂಧಿಸಿ ದಂತೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಉಂಟಾಗಿದ್ದ ವೈಮನಸ್ಸನ್ನು ದೆಹಲಿ ವರಿಷ್ಠರು ಬಗೆಹರಿಸಿದ ನಂತರ ಯಾತ್ರೆಗೆ ಹಸಿರು ನಿಶಾನೆ ದೊರೆತಿದೆ. ಡಿಸೆಂಬರ್ 30 ರಿಂದ ಜನವರಿ 29ರವರೆಗೆ ಇಡೀ ರಾಜ್ಯಾದ್ಯಂತ ಎರಡು ಹಂತದಲ್ಲಿ ಬಸ್ ಯಾತ್ರೆ ನಡೆಯ ಲಿದೆ. ಒಕ್ಕಲಿಗ ಸಮುದಾಯ ಹೆಚ್ಚಿರುವ ದಕ್ಷಿಣ ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅಹಿಂದ ಮತದಾರ ರನ್ನು ಓಲೈಸಲು ಉತ್ತರ ಕರ್ನಾಟಕ ಭಾಗ ದಲ್ಲಿ ಸಿದ್ದರಾಮಯ್ಯ ನಾಯಕತ್ವದಲ್ಲಿ ಯಾತ್ರೆ ನಡೆಯಲಿದೆ. ಈ ಮಧ್ಯೆ ವಿಶ್ವದ ಅನೇಕ ಭಾಗಗಳಲ್ಲಿ ಕೊರೊನಾ ಸೋಂಕು ಉಲ್ಭಣಗೊಂಡಿದ್ದು, ರಾಷ್ಟ್ರದಲ್ಲಿ ಸೋಂಕು ಹರಡದಂತೆ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರ ಕೂಡ ನಾಳೆ ಕೆಲವು ಕಠಿಣ ತೀರ್ಮಾನಗಳನ್ನು ಈ ಸಂಬಂಧ ತೆಗೆದುಕೊಳ್ಳಲಿದೆ. ರಾಹುಲ್‍ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಕೇಂದ್ರ ಕೆಲವು ನಿಯಮಾವಳಿಗಳನ್ನು ರೂಪಿಸಿ ರುವಂತೆ ಕರ್ನಾಟಕದಲ್ಲೂ ಈ ಚುನಾ ವಣೆ ಯಾತ್ರೆಗೆ ಕೆಲವು ನಿರ್ಬಂಧಗಳನ್ನು ಹೇರುವ ಸಾಧ್ಯತೆ ಇದೆ. ಇದರ ನಡುವೆಯೇ ಕಾಂಗ್ರೆಸ್ ನಾಯಕರು ಯಾತ್ರೆ ಆರಂಭಿ ಸಲಿದ್ದಾರೆ. ಬಸ್ ಮೂಲಕ ಪ್ರವಾಸ ಮಾಡಿ ಎಲ್ಲ ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದಾರೆ. ಇದರಲ್ಲಿ ರಾಜ್ಯದ ಎಲ್ಲ ಕಾಂಗ್ರೆಸ್ ಹಿರಿಯ ನಾಯಕರು ಒಗ್ಗಟ್ಟಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಎರಡು ತಂಡಗಳು ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ದಕ್ಷಿಣ ಕರ್ನಾಟಕ ಭಾಗದ ಪ್ರವಾಸ ಕಾರ್ಯಕ್ರಮಗಳ ಸಂಯೋಜಕರಾಗಿದ್ದಾರೆ. ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಉತ್ತರ ಕರ್ನಾಟಕ ಭಾಗದ ಪ್ರವಾಸ ಕಾರ್ಯಕ್ರಮಗಳ ಸಂಯೋ ಜಕರಾಗಿರುತ್ತಾರೆ. ಈ ತಂಡಗಳಲ್ಲಿ ಆಯಾ ಭಾಗದ ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸಂಸದರು, ವಿಧಾನ ಪರಿಷತ್ ಸದಸ್ಯರುಗಳು, ಕೆಪಿಸಿಸಿ ಉಸ್ತುವಾರಿ ಪದಾಧಿಕಾರಿಗಳು, ಹಿಂದೆ ಸ್ಪರ್ಧಿತ ಚುನಾವಣಾ ಅಭ್ಯರ್ಥಿಗಳು, ಭಾರತ್ ಜೋಡೋ ಯಾತ್ರೆಯ ಸಮಿತಿ ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರಗಳ ಕೆಪಿಸಿಸಿ ಸಂಯೋಜಕರುಗಳು, ಪಕ್ಷದ ಟಿಕೆಟ್ ಆಕಾಂಕ್ಷಿಗಳು ಈ ಪ್ರವಾಸ ಕಾರ್ಯಕ್ರಮಗಳನ್ನು ಸಂಘಟಿಸಲು ಪೂರ್ಣ ಸಹಕಾರ ನೀಡುವಂತೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಕಾರ್ಯಾಧ್ಯಕ್ಷರು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳು (ಕರ್ನಾಟಕ ರಾಜ್ಯ ಜಿಲ್ಲಾ ಉಸ್ತುವಾರಿ), ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಪದಾಧಿಕಾರಿಗಳನ್ನೊಳಗೊಂಡ ತಂಡವು ಮುಂಚಿತವಾಗಿ ಪಾದಯಾತ್ರೆ, ಸಭೆಗಳು ನಡೆಯುವ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಸಭೆಗಳ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಬೇಕು. ಎಲ್ಲಾ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಪಕ್ಷದ ಎಲ್ಲ ಹಂತಗಳಲ್ಲಿ ನಡೆಯುವ ಬೃಹತ್ ಸಭೆಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಪಕ್ಷದ ಎಲ್ಲಾ ಹಂತಗಳಲ್ಲಿ ಇದೇ ರೀತಿಯಲ್ಲಿ ಬಹಿರಂಗ ಸಭೆಗಳನ್ನು ನಡೆಸಬೇಕು. ಇಂತಹ ಸಭೆಗಳನ್ನು ಮುಕ್ತ ಪ್ರದೇಶದಲ್ಲಿ ನಡೆಸಬೇಕು. ಪಕ್ಷದ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅಧ್ಯಕ್ಷರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

Translate »