ಜ.25ರಂದು ಚಾ.ನಗರ, ಮೈಸೂರಲ್ಲಿ ಕಾಂಗ್ರೆಸ್ `ಪ್ರಜಾಧ್ವನಿ ಯಾತ್ರೆ’
ಮೈಸೂರು

ಜ.25ರಂದು ಚಾ.ನಗರ, ಮೈಸೂರಲ್ಲಿ ಕಾಂಗ್ರೆಸ್ `ಪ್ರಜಾಧ್ವನಿ ಯಾತ್ರೆ’

January 14, 2023

ಮೈಸೂರು, ಜ.13 (ಆರ್‍ಕೆಬಿ)- ರಾಜ್ಯ ವಿಧಾನಸಭಾ ಚುನಾವಣೆಗೆ ಪೂರ್ವಭಾವಿ ಯಾಗಿ ಕಾಂಗ್ರೆಸ್‍ನ ಪ್ರಜಾಧ್ವನಿ ಬಸ್ ಯಾತ್ರೆ ಜ.25 ರಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದು, ಯಾತ್ರೆಯು ಬೆಳಗ್ಗೆ ಚಾಮರಾಜನಗರ ಹಾಗೂ ಮಧ್ಯಾಹ್ನ ಮೈಸೂರಿನಲ್ಲಿ ಸಂಚರಿಸಲಿದೆ.
ಈ ಸಂಬಂಧ ಶುಕ್ರವಾರ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರೋಜಿ ಜೋನ್, ಬಸ್ ಯಾತ್ರೆಯ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಜ.21ರಂದು ಹಾಸನದಲ್ಲಿ ಹಾಗೂ ಜ.25 ರಂದು ಬೆಳಗ್ಗೆ ಚಾಮರಾಜನಗರ, ಮಧ್ಯಾಹ್ನ ಮೈಸೂರಿನಲ್ಲಿ ಪ್ರಜಾಧ್ವನಿ ಯಾತ್ರೆ ಯಶಸ್ವಿ ಗೊಳಿಸುವ ಸಂಬಂಧ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯದ ಉಸ್ತುವಾರಿಯೂ ಆದ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಜ.30 ರಂದು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಸಮಾರೋಪಗೊಳ್ಳಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಬಳ್ಳಾರಿ ಪಾದಯಾತ್ರೆ, ಮೇಕೆದಾಟು ಪಾದಯಾತ್ರೆ ಹೀಗೆ ಅನೇಕ ಯಾತ್ರೆಗಳನ್ನು ಯಶಸ್ವಿ ಯಾಗಿ ನಡೆಸಿ ಜನರನ್ನು ತಲುಪಿದೆ. ಅದೇ ರೀತಿ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಮ್ಮಿಕೊಂಡಿರುವ `ಪ್ರಜಾಧ್ವನಿ ಬಸ್ ಯಾತ್ರೆ’ ಯಶಸ್ವಿಯಾಗು ವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಕೇವಲ ಹಿಂದುತ್ವದ ಅಜೆಂಡಾ ಇಟ್ಟು ಕೊಂಡು ಹೊರಟಿರುವ ಬಿಜೆಪಿಗೆ ಮೈಸೂರು ವಿಭಾಗದಲ್ಲಿ ಯಾವುದೇ ಪ್ರಯೋಜನ ಆಗುವುದಿಲ್ಲ. ರಾಜ್ಯದಲ್ಲಿ ರಾಜಕೀಯ ಬದಲಾವಣೆಗೆ ಈ ಪ್ರಜಾಯಾತ್ರೆ ಹೆಚ್ಚು ಪ್ರಯೋಜನವಾಗಲಿದೆ. ನಾವು ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಬಿಜೆಪಿಯ ಜನವಿರೋಧಿ ವಿಚಾರಗಳ ಬಗ್ಗೆ ಜನರನ್ನು ಸೆಳೆಯಬೇಕಿದೆ. ಅದಕ್ಕಾಗಿ ಈ ಯಾತ್ರೆ ಬಗ್ಗೆ ಹೆಚ್ಚು ಪ್ರಚಾರ ಆಗಬೇಕು. ಕಾಂಗ್ರೆಸ್‍ನ ಕಾರ್ಯಕ್ರಮಗಳ ಬಗ್ಗೆ ಪರಿಣಾಮ ಕಾರಿಯಾಗಿ ಪರಿಚಯ ಮಾಡಿಕೊಡ ಬೇಕು. ಯಾತ್ರೆ ಪೂರ್ಣ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಬೂತ್ ಮಟ್ಟದಲ್ಲಿ ಬಿಎಲ್‍ಎ-2 ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಿರಂತರ ಸಭೆಗಳನ್ನು ನಡೆಸಿ, ಹಳ್ಳಿ ಹಳ್ಳಿಗಳಲ್ಲಿ ಪ್ರಜಾ ಧ್ವನಿ ಯಾತ್ರೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಈ ಬಗ್ಗೆ ಸೋಶಿಯಲ್ ಮೀಡಿಯಾ ಸದ್ಬಳಕೆ ಮಾಡಿಕೊಂಡು, ಹೆಚ್ಚು ಪ್ರಚಾರ ಮಾಡಿ, ಯಾತ್ರೆ ಯಶಸ್ವಿಯಾ ಗುವಂತೆ ಶ್ರಮಿಸಲು ಕರೆ ನೀಡಿದರು.

ಚುನಾವಣೆ ಗೆಲ್ಲುವುದು ನಮ್ಮ ಗುರಿಯಾಗ ಬೇಕು: ಮಾಜಿ ಸಂಸದರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ಪ್ರಜಾಧ್ವನಿ ಬಸ್ ಯಾತ್ರೆ ಜ.21ರಂದು ಹಾಸನದಿಂದ ಆರಂಭ ವಾಗಲಿದ್ದು, ನಂತರ ಚಿಕ್ಕಮಗಳೂರು, ಜ.25ರಂದು ಚಾಮರಾಜನಗರ, ಮೈಸೂರಿನಲ್ಲಿ ನಡೆಯಲಿದೆ. ಹಾಸನದಲ್ಲಿ ಬಸ್ ಯಾತ್ರೆ ಯಶಸ್ವಿಗೊಳಿಸಲು ಅಲ್ಲಿನ ಮುಖಂಡರು ನಾ ಮುಂದು ತಾ ಮುಂದು ಎಂದು ಮುಂದೆ ಬಂದಿದ್ದಾರೆ. ಇದು ಅಲ್ಲಿನ ಸಭೆ ಸಂಪೂರ್ಣ ಯಶಸ್ವಿಯಾಗುವ ಮುನ್ಸೂಚನೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯವರು ಸಹ ಯಾತ್ರೆಗೆ ಸಂಬಂಧಿಸಿದಂತೆ ಮೂರು ಸಭೆ ನಡೆಸಿ, ಯಾತ್ರೆ ಯಶಸ್ಸಿಗೆ ಕೈಜೋಡಿಸಿದ್ದಾರೆ ಎಂದರು.

ಚಾಮರಾಜನಗರ ಮತ್ತು ಮೈಸೂರಿನಲ್ಲಿ ಯಾತ್ರೆ ಯಶಸ್ವಿಗೊಳಿಸಲು ಎಲ್ಲರೂ ಸಂಘಟಿತರಾಗಿ ಸಿದ್ಧತೆಯಲ್ಲಿ ತೊಡಗಿ ದ್ದಾರೆ. ಮೈಸೂರಿನಲ್ಲಿ ಸಿದ್ದರಾಮಯ್ಯನವರ ಸೂಚನೆಯಂತೆ ಯಾತ್ರೆ ನಡೆಯುವ ಸ್ಥಳ ನಿಗದಿಪಡಿಸಲಾಗುವುದು. ಅಲ್ಲದೆ ಕನಿಷ್ಟ ಒಂದೂವರೆ ಲಕ್ಷ ಜನರು ಭಾಗವಹಿಸಲು ಸಿದ್ಧತೆ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮೈಸೂರು ವಿಭಾಗದ 48 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವುದು ನಮ್ಮ ಗುರಿಯಾಗಬೇಕು. ಸರ್ವೆ ವರದಿಗಳ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ತೀರಾ ಮುಂದಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಬೂತ್ ಮಟ್ಟದಲ್ಲಿ ಬಿಎಲ್‍ಎ-2 ಗಳ ನೇಮಕ ಶೀಘ್ರ ಆಗಬೇಕು ಎಂದು ಕರೆ ನೀಡಿದರು.

ಯಾತ್ರೆಗಳಲ್ಲಿ ಲಕ್ಷ ಮಂದಿ ಭಾಗವಹಿಸಲು ಕರೆ: ಸಮನ್ವಯ ಸಮಿತಿ ಅಧ್ಯಕ್ಷರು ಆದ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾತನಾಡಿ, ಮುಂದಿನ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಮೈಸೂರು ವಿಭಾಗದ ಐದು ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಕೆಪಿಸಿಸಿ ಸದಸ್ಯರು, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರ ಸಭೆ ಇದಾಗಿದೆ. ಜ.25 ರಂದು ಮೈಸೂರು ಮತ್ತು ಚಾಮರಾಜನಗರದಲ್ಲಿ. ನಡೆಯಲಿರುವ ಪ್ರಜಾಧ್ವನಿ ಯಾತ್ರೆ ಯಶಸ್ವಿ ಗೊಳಿಸಲು ಎಲ್ಲರೂ ಸಂಘಟಿತ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಜ.21ರಂದು ಹಾಸನದಲ್ಲಿ ನಡೆಯಲಿರುವ ಯಾತ್ರೆಗೆ ಕನಿಷ್ಠ ಒಂದು ಲಕ್ಷ ಮಂದಿ ಕಾರ್ಯಕರ್ತರು ಭಾಗವಹಿ ಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಹಾಸನ ಜಿಲ್ಲಾ ಮುಖಂಡರಲ್ಲಿ ಮನವಿ ಮಾಡಿದರು.

ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ: ನÀಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಾವು ಮುಂದೆ ಚುನಾವಣೆ ಗೆಲ್ಲುವ ಉದ್ದೇಶದಿಂದ ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆಗೆ ಸಂಬಂಧಿಸಿದಂತೆ ಈ ಮಹತ್ವದ ಸಭೆ ನಡೆಸಿದ್ದೇವೆ. ಯಾತ್ರೆ ಯಶಸ್ವಿಯಾಗುವ ಜೊತೆಗೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಈ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ ಎಂದು ಹೇಳಿದರು.

60 ವರ್ಷಗಳ ಸುದೀರ್ಘ ಕಾಲ ದೇಶದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್‍ಗೆ ಭಯಪಡುವ ಅಗತ್ಯವಿಲ್ಲ ಎಂದ ಅವರು, ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗುವ ಯಾರಾದರೂ ಲೀಡರ್‍ಗಳು ಇದ್ದಾರೆಯೇ ಎಂದು ಪ್ರಶ್ನಿಸಿದರು.

ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಹೆಚ್. ಲಕ್ಷ್ಮಣ್ ಮಾತನಾಡಿ, 21 ರಂದು ಹಾಸನ ದಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆ ಮೂಲಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಇನ್ನಿತರ ನಾಯಕರು ಆಗಮಿಸುತ್ತಿರುವ ಹಿನ್ನೆಲೆ ಯಲ್ಲಿ ಹೆಚ್ಚು ಜನರನ್ನು ಸೇರಿಸಿ, ಬೈಕ್ ಹಾಗೂ ಎತ್ತಿನ ಗಾಡಿ ರ್ಯಾಲಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಸಭೆ ಸಂಪೂರ್ಣ ಯಶಸ್ಸಿಗೆ ಶ್ರಮಿಸಲಿದ್ದೇವೆÉ ಎಂದು ಹೇಳಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಅನಿಲ್ ಚಿಕ್ಕಮಾದು, ಡಾ.ಡಿ. ತಿಮ್ಮಯ್ಯ, ಮಧು ಮಾದೇಗೌಡ, ದಿನೇಶ್ ಗೂಳೀಗೌಡ, ಮಾಜಿ ಶಾಸಕರಾದ ವಾಸು, ಎ.ಆರ್.ಕೃಷ್ಣಮೂರ್ತಿ, ಕಳಲೆ ಕೇಶವಮೂರ್ತಿ, ಮಲ್ಲಾಜಮ್ಮ, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಮಾಜಿ ಎಂಎಲ್‍ಸಿ ಗುರುಪಾದ ಸ್ವಾಮಿ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಆಧ್ಯಕ್ಷ ಗಂಗಾಧರ್, ಚಾಮರಾಜನಗರ ಜಿಲ್ಲಾಧ್ಯಕ್ಷ ಸಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿ ಕುಮಾರ್, ಯಾತ್ರೆ ಸಮಿತಿ ಸದಸ್ಯರಾದ ಹುಸೇನ್, ನಿವೇದಿತಾ ಆಳ್ವಾ, ಕಾಂಗ್ರೆಸ್ ಪರಿಶಿಷ್ಟ ಘಟಕದ ರಾಜ್ಯಾಧ್ಯಕ್ಷ ಆರ್.ಧರ್ಮಸೇನಾ, ಮೈಸೂರು ನಗರಾಧ್ಯಕ್ಷ ಆರ್.ಮೂರ್ತಿ ಇನ್ನಿತರರಿದ್ದರು.

Translate »