ಮೈಸೂರು, ಜೂ.15(ಎಂಟಿವೈ)- ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಕಡಿಮೆ ಇದ್ದರೂ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ತೈಲ ಬೆಲೆ ಹೆಚ್ಚಿಸುತ್ತಿರುವುದನ್ನು ಖಂಡಿಸಿ, ಶೀಘ್ರದಲ್ಲೇ ಕಾಂಗ್ರೆಸ್ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಸಂಸದ ಆರ್.ದ್ರವನಾರಾಯಣ್ ಎಚ್ಚರಿಸಿದ್ದಾರೆ.
ಮೈಸೂರಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಲಾಕ್‍ಡೌನ್‍ನಿಂದಾಗಿ ಜನ ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ಸಂದರ್ಭದಲ್ಲಿಯೇ ಸರ್ಕಾರ ತೈಲ ಬೆಲೆಯನ್ನು ಹೆಚ್ಚಿಸುತ್ತಲೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸ್ಥಿರವಾಗಿದ್ದರೂ ನಮ್ಮ ದೇಶ ದಲ್ಲಿ ಕಳೆದ 1 ವಾರದಿಂದ ತೈಲ ಬೆಲೆ 4 ರೂ. ಹೆಚ್ಚಿಸಲಾಗಿದೆ. ಕೆಲಸ, ಆದಾಯ ವಿಲ್ಲದೆ ತತ್ತರಿಸಿರುವ ಜನತೆ ಇದೀಗ ತೈಲ ಬೆಲೆ ಹೆಚ್ಚಳ ದಿಂದಾಗಿ ಕುಗ್ಗುವಂತಾಗಿದೆ. ಅಚ್ಛೇ ದಿನ್ ನಿರೀಕ್ಷೆಯಲ್ಲಿದ್ದ ಜನರಿಗೆ ಕೇಂದ್ರ ಸರ್ಕಾರ ಬೆಲೆ ಹೆಚ್ಚಳದ ಬಳು ವಳಿ ನೀಡುತ್ತಿದೆ ಎಂದು ಟೀಕಿಸಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರ ದಲ್ಲಿದ್ದಾಗ ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ 2013ರಲ್ಲಿ 1 ಬ್ಯಾರಲ್ ಕಚ್ಚಾ ತೈಲಕ್ಕೆ 101.57 ಡಾಲರ್ ಇತ್ತು. ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭ ದಲ್ಲಿ ಅದು(ಬ್ಯಾರಲ್‍ಗೆ) 114 ಡಾಲರ್ ತಲುಪಿತ್ತು. 2020ರ ವೇಳೆಗೆ 16.38 ಡಾಲರ್‍ಗೆ ಕಚ್ಚಾ ತೈಲ ಬೆಲೆ ಕುಸಿದಿದೆ. ಆದರೂ ಭಾರತದಲ್ಲಿ ತೈಲ ಬೆಲೆ ಹೆಚ್ಚಳ ಮಾಡಲಾಗುತ್ತಿದೆ ಎಂದು ದೂರಿದರು.
ಪ್ರತಿಭಟನೆ: ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವ ಕುಮಾರ್ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಬಿಜೆಪಿ ಸರ್ಕಾರದ ಪ್ರಮುಖ ವೈಫಲ್ಯಗಳು ಹಾಗೂ ಇಂಧನ ಬೆಲೆ ಹೆಚ್ಚಳ, ಎಪಿಎಂಸಿ ಹಾಗೂ ಹಾಪ್‍ಕಾಮ್ಸ್ ಕಾಯ್ದೆ ತಿದ್ದುಪಡಿ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ದವೂ ತೀವ್ರ ಸ್ವರೂಪದ ಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.