ತೀಟೆ ತೀರಿಸಿಕೊಳ್ಳಲು ಕಾಂಗ್ರೆಸ್‍ನವರು ನನಗೆ ಬೆಂಬಲ ನೀಡಿದ್ದರು: ಹೆಚ್‍ಡಿಕೆ
ಮೈಸೂರು

ತೀಟೆ ತೀರಿಸಿಕೊಳ್ಳಲು ಕಾಂಗ್ರೆಸ್‍ನವರು ನನಗೆ ಬೆಂಬಲ ನೀಡಿದ್ದರು: ಹೆಚ್‍ಡಿಕೆ

February 19, 2021

ಮಂಡ್ಯ, ಫೆ.18- `ಕಾಂಗ್ರೆಸ್ ಮುಖಂಡರು ತಮ್ಮ ತೀಟೆ ತೀರಿಸಿಕೊಳ್ಳಲು ಜೆಡಿಎಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದ್ದರು. ಕಾಂಗ್ರೆಸ್‍ನ ಆಶ್ರಯದಿಂದ ನಮ್ಮ ರಾಜಕೀಯ ಜೀವನ ನಡೆಯುತ್ತಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಸಿದ್ದರಾಮಯ್ಯ ಅವರ ಹೇಳಿಕೆ ಗಳನ್ನು ಗಮನಿಸುತ್ತಿದ್ದೇನೆ. ಅವರು ಜೆಡಿಎಸ್‍ನಲ್ಲಿ ಇದ್ದಾಗ ಹೆಚ್ಚಿನ ಸ್ಥಾನ ಗೆದ್ದಿರುವುದಾಗಿ ಹೇಳಿದ್ದಾರೆ. ಆದರೆ 1999ರಲ್ಲಿ ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ ನಡೆದ ಚುನಾವಣೆಯಲ್ಲಿ ನಾನು, ದೇವೇಗೌಡರು ಸೋತಿದ್ದೆವು. ಆಗ ಜೆಡಿಎಸ್ ಕೇವಲ 10 ಸ್ಥಾನ ಗೆದ್ದಿತ್ತು’ ಎಂದರು.

2004ರಲ್ಲಿ 58 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೆವು. ಅದಕ್ಕೆ ಸಿದ್ದರಾಮಯ್ಯ ಕಾರಣರಲ್ಲ, ಪಿಜಿಆರ್ ಸಿಂಧ್ಯಾ, ಎಂಪಿ ಪ್ರಕಾಶ್ ಮುಂತಾದವರು ಕಾರಣ. ಪಕ್ಷ ಸಂಘಟನೆಗಾಗಿ ಇಂದು ನನ್ನದು ಏಕಾಂಗಿ ಹೋರಾಟ, ಆದರೂ ನಾನು ಉತ್ತಮ ಸ್ಥಾನ ಗಳಿಸಿದ್ದೆ. ಸಿದ್ದರಾಮಯ್ಯ ನಮಗೆ ಕೈಕೊಟ್ಟು ಹೋದಾಗ ಕೇವಲ 500 ಮತಗಳಿಂದ ಗೆದ್ದಿದ್ದರು. ಅದೂ ಪೀಟರ್ ಎಂಬಾತ ಬಂದು ಗೆಲ್ಲಿಸಿದ್ದ, ಅದು ಅವರ ಗೆಲುವಲ್ಲ ಎಂದು ಕುಟುಕಿದರು.

`ಜೆಡಿಎಸ್ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಸಿದ್ದರಾಮಯ್ಯ ಅವರಿಗಿಲ್ಲ. ಅವರು ಜವಾಬ್ದಾರಿಯಿಂದ ಮಾತನಾಡಬೇಕು. ಸಾಲಮನ್ನಾ ಮಾಡಲು ಸಿದ್ದರಾಮಯ್ಯ ಬೆಂಬಲ ನೀಡಲಿಲ್ಲ, ಅದೂ ನನ್ನ ಏಕಾಂಗಿ ಹೋರಾಟವಾಗಿತ್ತು’ ಎಂದು ಕುಮಾರ ಸ್ವಾಮಿ ಅವರು ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಪ್ರತ್ಯುತ್ತರ ನೀಡಿದರು.

Translate »