ಷರತ್ತಿನೊಂದಿಗೆ ಜುಬಿಲಂಟ್ ಕಾರ್ಖಾನೆ ಆರಂಭಕ್ಕೆ ಒಪ್ಪಿಗೆ: ಶಾಸಕ.ಹರ್ಷವರ್ಧನ್
ಮೈಸೂರು ಗ್ರಾಮಾಂತರ

ಷರತ್ತಿನೊಂದಿಗೆ ಜುಬಿಲಂಟ್ ಕಾರ್ಖಾನೆ ಆರಂಭಕ್ಕೆ ಒಪ್ಪಿಗೆ: ಶಾಸಕ.ಹರ್ಷವರ್ಧನ್

May 17, 2020

ನಂಜನಗೂಡು, ಮೇ 16(ರವಿ)-ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 50 ಸಾವಿರ ದಿನಸಿ ಕಿಟ್ ವಿತರಣೆ ಹಾಗೂ ಕಾರ್ಖಾನೆ ಸುತ್ತಲಿನ 10 ಗ್ರಾಮಗಳ ದತ್ತು ಪಡೆಯುವಿಕೆ ಸೇರಿದಂತೆ sಸರ್ಕಾರದ ಇನ್ನಿತರ ಷರತ್ತುಗಳಿಗೆ ಬದ್ಧವಾಗಿ ಜುಬಿಲಂಟ್ ಕಾರ್ಖಾನೆ ಆರಂಭಿಸಲು ಆಡಳಿತ ಮಂಡಳಿಯವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರೆಲ್ಲರೂ ಗುಣಮುಖರಾಗಿರುವುದು ಸಮಾಧಾನಕರ ಸಂಗತಿ. ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕಾಯ್ದುಕೊಂಡು ಪ್ರಸಿದ್ಧ ಧಾರ್ಮಿಕ ಪ್ರವಾಸೀ ತಾಣವಾದ ನಂಜನಗೂಡಿನಲ್ಲಿ ವಾಣಿಜ್ಯ ವಹಿವಾಟು ಹಾಗೂ ಜನಜೀವನ ಸಹಜ ಸ್ಥಿತಿಗೆ ಬರುವಂತೆ ನೋಡಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ನಂಜನಗೂಡಿನ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲಾಗಿದೆ. 50 ದಿನಗಳಿಗೂ ಹೆಚ್ಚು ಕಾಲ ನಂಜನಗೂಡನ್ನು ಸಂಪೂರ್ಣ ಬಂದ್ ಮಾಡಿದ್ದರಿಂದ ಜನತೆ ಭಾರೀ ತೊಂದರೆಗೆ ಸಿಲುಕಿದ್ದು, ಸರ್ಕಾರ ಹಾಗೂ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಆರ್ಥಿಕವಾಗಿ ಹಿಂದುಳಿದಿರುವವರಿಗೆ ನೆರವು ನೀಡಬೇಕಿದೆ ಎಂಬ ವಾಸ್ತವ ಸಂಗತಿ ಮನವರಿಕೆ ಮಾಡಿಕೊಡಲಾಗಿದೆ. ಸರ್ಕಾರದಿಂದ ಅಗತ್ಯ ನೆರವು ನೀಡುವ ಭರವಸೆ ದೊರೆತಿದೆ ಎಂದರು.

ಅಮೇರಿಕಾದ ಗಿಲೀಡ್ ಸೈನ್ಸಸ್ ಸಂಸ್ಥೆಯು ಕೊರೊನಾ ನಿವಾರಣೆಗೆ ರೆಮ್ಡೆಸಿವಿರ್(ಖemಜesiviಡಿ) ಔಷಧವನ್ನು ಕಂಡು ಹಿಡಿದಿದೆ. ಈ ಔಷಧಿಯನ್ನು ಉತ್ಪಾದಿಸಿ ಭಾರತ ಸೇರಿದಂತೆ 127 ದೇಶಗಳಿಗೆ ರಫ್ತು ಮಾಡುವ ಹಕ್ಕನ್ನು ಜುಬಿಲಂಟ್ ಸಂಸ್ಥೆ ಪಡೆದುಕೊಂಡಿದೆ. ಆದ್ದರಿಂದ ಕೋವಿಡ್-19 ವಿರುದ್ಧ ಹೋರಾಡಲು ಕಾರ್ಖಾನೆ ಕಾರ್ಯಾರಂಭ ಮಾಡಬೇಕೆಂದು ಆಡಳಿತ ಮಂಡಳಿ ಸರ್ಕಾರಕ್ಕೆ ಮನವಿ ಮಾಡಿದೆ. ಅಲ್ಲದೆ ಕಾರ್ಖಾನೆಯ ಒಂದೂವರೇ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಮತ್ತು ಸ್ಥಳೀಯರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಷರತ್ತುಗಳೊಂದಿಗೆ ಕಾರ್ಖಾನೆ ಆರಂಭಿಸಲು ಸರ್ಕಾರ ಸೂಚಿಸಿದೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಕಾರ್ಖಾನೆಯ ಬೇಜವಾಬ್ದಾರಿಯಿಂದ ಯಾವುದೇ ಅವಘಡಗಳು ಉಂಟಾದಲ್ಲಿ ಅದಕ್ಕೆ ಸಂಭಂದಪಟ್ಟವರೇ ಹೊಣೆಗಾರರಾಗಬೇಕು. ಕಾರ್ಖಾನೆ ವ್ಯಾಪ್ತಿಗೊಳಪಡುವ 10 ಗ್ರಾಮಗಳನ್ನು ದತ್ತು ತೆಗೆದುಕೊಳ್ಳಬೇಕು ಹಾಗೂ ಕಾರ್ಖಾನೆಯಿಂದ 50 ಸಾವಿರ ದಿನಸಿ ಕಿಟ್ ವಿತರಿಸಬೇಕೆಂಬ ಷರತ್ತು ವಿಧಿಸುವ ಮೂಲಕ ಕಾರ್ಖಾನೆ ಪುನರಾರಂಭಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಹರ್ಷವರ್ಧನ್ ಮಾಹಿತಿ ನೀಡಿದರು.

Translate »