ಎನ್‍ಟಿಎಂ ಶಾಲೆ, ಶ್ರೀ ನಿರಂಜನ ಮಠ ಸಂರಕ್ಷಣೆಗೆ  ಆಗ್ರಹಿಸಿ ಮೈಸೂರಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
ಮೈಸೂರು

ಎನ್‍ಟಿಎಂ ಶಾಲೆ, ಶ್ರೀ ನಿರಂಜನ ಮಠ ಸಂರಕ್ಷಣೆಗೆ ಆಗ್ರಹಿಸಿ ಮೈಸೂರಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

September 16, 2021

ಮೈಸೂರು,ಸೆ.15(ಪಿಎಂ)-ಎನ್‍ಟಿಎಂ ಶಾಲೆ ಮತ್ತು ನಿರಂಜನ ಮಠ ಸಂರಕ್ಷಿಸಿ, ಅವುಗಳ ಅಸ್ಮಿತೆ ಉಳಿಸಬೇಕೆಂದು ಆಗ್ರ ಹಿಸಿ ಬುಧವಾರ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಮಹಾರಾಣಿ ಎನ್‍ಟಿಎಂ ಶಾಲೆ ಹೋರಾಟ ಒಕ್ಕೂಟ, ಶ್ರೀ ನಿರಂಜನ ಮಠ ಸಂರಕ್ಷಣಾ ಸಮಿತಿ ಜಂಟಿ ಆಶ್ರಯದಲ್ಲಿ ನಡೆದ ಪ್ರತಿ ಭಟನಾ ಮೆರವಣಿಗೆಯಲ್ಲಿ ವಿವಿಧ ಸಂಘ ಟನೆಗಳು ಪಾಲ್ಗೊಂಡು ಬೆಂಬಲ ಸೂಚಿಸಿದವು.

ಸ್ವಾಮಿ ವಿವೇಕಾನಂದರ ಮನವಿ ಮೇರೆಗೆ ಅಂದಿನ ಮಹಾರಾಣಿ ಕೆಂಪನಂಜಮ್ಮಣ್ಣಿ ಯವರು 1881ರಲ್ಲೇ ಹೆಣ್ಣು ಮಕ್ಕಳ ಶಿಕ್ಷಣ ಕ್ಕಾಗಿ ಎನ್‍ಟಿಎಂ ಶಾಲೆ ಪ್ರಾರಂಭಿಸಿದರು. ಜೊತೆಗೆ ಶ್ರೀ ನಿರಂಜನ ಮಠವು 1840 ರಿಂದಲೂ ವೀರಶೈವ ಲಿಂಗಾಯತ ಸಮು ದಾಯದ ಧಾರ್ಮಿಕ ಪರಂಪರೆಯನ್ನು ಹೊಂದಿದೆ. ಇವುಗಳ ಅಸ್ಮಿತೆ ಉಳಿಯ ಬೇಕು ಎಂದು ಒತ್ತಾಯಿಸಿದರು.

ಇಂತಹ ಪಾರಂಪರಿಕ ಅಸ್ಮಿತೆ ಪರಿಗಣಿ ಸದೇ ಮಠದಲ್ಲಿ ಸ್ವಾಮಿ ವಿವೇಕಾನಂದರು ವಾಸ್ತವ್ಯ ಹೂಡಿದ್ದರು ಎಂಬ ಒಂದೇ ಕಾರಣಕ್ಕೆ ಶಾಲೆ ಮತ್ತು ಮಠದ ಅಸ್ಮಿತೆ ಅಳಿಸಿ, ವಿವೇಕ ಸ್ಮಾರಕ ನಿರ್ಮಿಸುವುದು ಸರಿಯಲ್ಲ. ಸ್ವಾಮಿ ವಿವೇಕಾನಂದರ ಆಶಯದಂತೆಯೇ ಎನ್‍ಟಿಎಂ ಶಾಲೆ ಪ್ರಾರಂಭವಾಗಿದೆ. ಇಂತಹ ಶಾಲೆ ನೆಲಸಮಗೊಳಿಸುವುದು ಮತ್ತು ಅವ ರಿಗೆ ಆಶ್ರಯ ನೀಡಿದ್ದ ನಿರಂಜನ ಮಠದ ಅಸ್ಮಿತೆ ನಾಶಗೊಳಿಸಿ ವಿವೇಕ ಸ್ಮಾರಕ ನಿರ್ಮಿ ಸುವುದು ವಿವೇಕಾನಂದರ ತತ್ವಗಳಿಗೇ ವಿರೋಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆ ಮತ್ತು ಮಠದ ಆವರಣದಿಂದ ನಾರಾಯಣಶಾಸ್ತ್ರಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಜಗನ್ಮೋಹನ ಅರಮನೆ ರಸ್ತೆ, ದೇವ ರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ಹುಣ ಸೂರು ರಸ್ತೆ ಮಾರ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಡಿಸಿ ಕಚೇರಿ ಎದುರು ಜಮಾಯಿಸಿ, ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಒಕ್ಕೂಟದ ಮುಖಂಡ ಪ.ಮಲ್ಲೇಶ್ ಮಾತನಾಡಿ, ಎನ್‍ಟಿಎಂ ಶಾಲೆ ಮತ್ತು ನಿರಂಜನ ಮಠ ಐತಿಹಾಸಿಕ ಮಹತ್ವ ಹೊಂದಿವೆ. ಯಾವುದೇ ಸಂದರ್ಭ ಬಂದರೂ ಇವುಗಳನ್ನು ರಾಮಕೃಷ್ಣ ಆಶ್ರಮಕ್ಕೆ ಬಿಟ್ಟು ಕೊಡುವುದಿಲ್ಲ. ಆದಾಗ್ಯೂ ವಶಕ್ಕೆ ಪಡೆದರೆ ನಮ್ಮ ಹೆಣಗಳ ಮೇಲೆ ವಿವೇಕ ಸ್ಮಾರಕ ನಿರ್ಮಿಸಬೇಕಾ ಗುತ್ತದೆ. ಈ ಹೋರಾಟ ಇಲ್ಲಿಗೆ ನಿಲ್ಲುವು ದಿಲ್ಲ. ರಾಜ್ಯವ್ಯಾಪಿ ವಿಸ್ತರಣೆಯಾಗಲಿದೆ ಎಂದು ಎಚ್ಚರಿಸಿದರು.
ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ ಮಿರ್ಜಿ ಮಾತನಾಡಿ, ಮಠವನ್ನು ಸರ್ಕಾರ ಪರಭಾರೆ ಮಾಡಲಿಕ್ಕೆ ಬರುವುದಿಲ್ಲ. ವಿವೇ ಚನೆ ಇಲ್ಲದೆ ಕೆಲಸ ಮಾಡಿದ್ದರಿಂದ ತಪ್ಪಾಗಿದೆ. ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸರ್ಕಾರ ರಾಮಕೃಷ್ಣ ಆಶ್ರ ಮಕ್ಕೆ ಜಾಗ ನೀಡುವ ಆದೇಶವನ್ನು ಹಿಂಪ ಡೆಯಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಸ್ಮಾರಕ ನಿರ್ಮಾಣಕ್ಕೆ ಹೆಣ್ಣು ಮಕ್ಕಳ ಶಾಲೆ, ನಿರಂಜನ ಮಠ ಕೆಡವಲು ಮುಂದಾಗಿರುವ ನಿರ್ಧಾರವನ್ನು ವಿವೇಕಾ ನಂದರ ಆತ್ಮವೇ ಒಪ್ಪುವುದಿಲ್ಲ. ಮೈಸೂ ರಿನಲ್ಲಿ ಬೇರೆ ಕಡೆ ಸ್ಮಾರಕ ನಿರ್ಮಿಸುವುದು ಒಳ್ಳೆಯದು ಎಂದು ತಿಳಿಸಿದರು.
ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಮೈಸೂ ರಿನ ರಾಮಕೃಷ್ಣ ಮಠದವರಿಗೆ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಮೇಲೆ ಗೌರವವಿದ್ದರೆ ಶಾಲೆ ಕೆಡವಿ ಸ್ಮಾರಕ ಕಟ್ಟುವುದಿಲ್ಲ ಎಂದು ಪತ್ರ ಬರೆದು ಕೊಡ ಬೇಕು. ಇಲ್ಲದಿದ್ದರೆ ನಾವು ರಾಮಕೃಷ್ಣ ಆಶ್ರಮದ ಎದುರು ಪ್ರತಿಭಟನೆ ಮಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಹಿನಕಲ್ ಬಸವರಾಜ್ ಮಾತ ನಾಡಿ, ಹೆಣ್ಣು ಮಕ್ಕಳ ಕನ್ನಡ ಶಾಲೆ, ನಿರಂ ಜನ ಮಠ ಅಸ್ಮಿತೆ ಅಳಿಸಿ, ಸ್ಮಾರಕ ನಿರ್ಮಾ ಣಕ್ಕೆ ನಮ್ಮ ವಿರೋಧವಿದೆ. ಈ ಆದೇಶ ವನ್ನು ಹಿಂಪಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು.
ಅಖಿಲ ಭಾರತ ವೀರಶೈವ ಮಹಾ ಸಭಾ ಕೇಂದ್ರ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಎಸ್.ಲೋಕೇಶ್, ಮಾಜಿ ಮೇಯರ್ ಪುರುಷೋತ್ತಮ್, ಕರ್ನಾಟಕ ಕಾವಲುಪಡೆ ಅಧ್ಯಕ್ಷ ಮೋಹನ್‍ಕುಮಾರ್ ಗೌಡ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ವೀರಶೈವ ಲಿಂಗಾಯತ ಸಮುದಾಯದ ಮುಖಂಡರಾದ ವರುಣಾ ಮಹೇಶ್, ಕೆ.ಸಿ.ಬಸವರಾಜಸ್ವಾಮಿ, ದೂರ ಶಿವಕುಮಾರ್ ಸೇರಿದಂತೆ ಸಾಹಿತಿಗಳು, ಚಿಂತಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »