ರೋಹಿಣಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಶಾಸಕ ಸಾರಾ ಯತ್ನ
News

ರೋಹಿಣಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಶಾಸಕ ಸಾರಾ ಯತ್ನ

September 16, 2021

ಬೆಂಗಳೂರು, ಸೆ. 15(ಕೆಎಂಶಿ)- ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಆಡಳಿತ ವೈಖರಿ ಹಾಗೂ ಜನಪ್ರತಿನಿಧಿಗಳ ಹಕ್ಕಿಗೆ ಚ್ಯುತಿ ತಂದಿದ್ದಾ ರೆಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ, ಅಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಾ.ರಾ.ಮಹೇಶ್, ಅವರ ವಿರುದ್ಧ ಹಕ್ಕು ಚ್ಯುತಿ ಮಂಡಿಸಲು ಅವಕಾಶ ಮಾಡಿಕೊಡಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು. ಸದನದ ಎಲ್ಲಾ ಸದಸ್ಯರ ರಕ್ಷಣೆ ನನ್ನ ಕರ್ತವ್ಯ ಎಂದ ಸಭಾಧ್ಯಕ್ಷರು, ಹಕ್ಕುಚ್ಯುತಿ ಮಂಡನೆಗೆ ಪತ್ರ ನೀಡಿದ್ದೀರಿ, ವಿಷಯ ಇಂದು ತೆಗೆದುಕೊಳ್ಳಲು ಸಾಧ್ಯವಿಲ್ಲ, ನಾಳೆ ಅಥವಾ ಇನ್ನೊಂದು ದಿನ ತೆಗೆದುಕೊಳ್ಳುತ್ತೇನೆ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಹೇಶ್, ಇದು ನನ್ನ ಹಕ್ಕಿನ ಪ್ರಶ್ನೆಯಾಗಿದೆ, ನೀವು ನಮ್ಮ ಹಿತ ಕಾಪಾಡಬೇಕು, ವಿಷಯ ಪ್ರಸ್ತಾಪಕ್ಕೆ ಇಂದೇ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಸಭಾಧ್ಯಕ್ಷರು ತಮ್ಮ ನಿಲುವಿಗೆ ಅಂಟಿಕೊಂಡಾಗ ಕೋಪೋದ್ರಿಕ್ತರಾದ ಸಾ.ರಾ. ಮಹೇಶ್, ಸಭಾಧ್ಯಕ್ಷರ ಪೀಠದ ಮುಂದೆ ಧಾವಿಸಿ, ಧರಣಿಗೆ ಮುಂದಾದರು, ಇವರನ್ನು ಬೆಂಬಲಿಸಿ ಕೆಲವು ಜೆಡಿಎಸ್ ಶಾಸಕರೂ ಧರಣಿಗಿಳಿದರು.

ಅಧಿಕಾರಿಯ ವಿರುದ್ಧ ನಾನು ಹಕ್ಕುಚ್ಯುತಿ ಮಂಡನೆ ಮಾಡಬೇಕು, ನನಗೆ ಅವಕಾಶ ನೀಡಲೇಬೇಕು ಎಂದಾಗ, ಸಭಾಧ್ಯಕ್ಷರು, ವಿಷಯ ಪ್ರಸ್ತಾಪಿಸಲು ನಿರಾಕರಿಸಿಲ್ಲ, ಆದರೆ ಇಂದು ಬೇಡ ಎಂದಿದ್ದೇನೆ. ನಿಮಗೆ ಸಮಯಾವಕಾಶ ಕೊಡುತ್ತೇನೆ. ನಿಮ್ಮ ಸ್ಥಾನಗಳಿಗೆ ತೆರಳಿ ಎಂದಾಗ ಸಭಾಧ್ಯಕ್ಷರ ಮಾತಿಗೆ ಮನ್ನಣೆ ನೀಡಿ, ಧರಣಿ ಕೈಬಿಟ್ಟು ಸ್ವಸ್ಥಾನಗಳಿಗೆ ತೆರಳಿದರು.

Translate »