ಮೈಸೂರು,ಏ.9(ಆರ್‍ಕೆ)-ಸಾರ್ವಜನಿಕ ಸ್ಥಳದಲ್ಲಿ ಸಿಕ್ಕಿದ 50,000 ರೂ. ನಗದನ್ನು ಠಾಣಾಧಿಕಾರಿಗಳ ಗಮನಕ್ಕೆ ತಂದು ವಾರಸುದಾರರಿಗೆ ಹಿಂದಿರು ಗಿಸಿ ಪೊಲೀಸ್ ಕಾನ್‍ಸ್ಟೇಬಲ್ ಒಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಮೈಸೂರು ಜಿಲ್ಲೆ ತಿ.ನರಸೀಪುರ ಠಾಣೆ ಪೊಲೀಸ್ ಕಾನ್ ಸ್ಟೇಬಲ್ ಜಿ.ದಯಾನಂದ್ ಹಣ ಹಿಂದಿರುಗಿಸಿದವರು. ಸಬ್‍ಇನ್ ಸ್ಪೆಕ್ಟರ್ ಶಬ್ಬೀರ್ ಅವರ ಜೀಪ್ ಡ್ರೈವರ್ ಆಗಿ ಕಾರ್ಯನಿರ್ವ ಹಿಸುತ್ತಿರುವ ದಯಾನಂದ, ಮಾರ್ಚ್ 27ರಂದು ಮಧ್ಯಾಹ್ನ 12.30 ಗಂಟೆ ವೇಳೆಗೆ ತಿ.ನರಸೀಪುರದ ಸರ್ಕಾರಿ ಆಸ್ಪತ್ರೆ ರಸ್ತೆಯ ಪ್ರೈವೇಟ್ ಬಸ್ ಸ್ಟ್ಯಾಂಡ್ ಸರ್ಕಲ್ ಬಳಿ ಕೋವಿಡ್-19 ಲಾಕ್ ಡೌನ್ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಸ್ತೆ ಮಧ್ಯೆ ಹಣ ಬಿದ್ದಿರುವುದನ್ನು ಗಮನಿಸಿದರು. ಅದನ್ನು ಲೆಕ್ಕ ಹಾಕಿದಾಗ 50,000 ರೂ. ಇತ್ತು. ದಯಾನಂದ ಅವರು ಆ ವಿಷಯವನ್ನು ಸಬ್‍ಇನ್‍ಸ್ಪೆಕ್ಟರ್ ಗಮನಕ್ಕೆ ತಂದರು. ಎಸ್‍ಬಿ ಕಾನ್‍ಸ್ಟೇಬಲ್ ಮಹದೇಶ್ ಮತ್ತು ಸಿವಿಲ್ ಕಾನ್‍ಸ್ಟೇಬಲ್ ಮೋಹನ್ ಅವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ದಯಾನಂದ, ಸ್ಥಳದಲ್ಲಿ ಯಾರಾದರೂ ಹಣ ಕಳೆದುಕೊಂಡವರಿದ್ದರೆ ಠಾಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಅಕ್ಕಪಕ್ಕದವರಿಗೆ ಹೇಳಿ ಬಂದಿದ್ದರು.
ಹಣ ಕಳೆದುಕೊಂಡಿದ್ದ ತಿ.ನರಸೀಪುರದ ತ್ರಿವೇಣಿ ನಗರ ವಾಸಿ ವಿವೇಕ್ ಎಂಬುವರು ಠಾಣೆಗೆ ಬಂದು ಅಗತ್ಯ ಪುರಾವೆಗಳನ್ನು ನೀಡಿ 50,000 ರೂ. ಹಣವನ್ನು ಸಬ್‍ಇನ್‍ಸ್ಪೆಕ್ಟರ್ ಶಬ್ಬೀರ್ ಅವರಿಂದ ಪಡೆದುಕೊಂಡರು.
ದಯಾನಂದ ಅವರ ಪ್ರಾಮಾಣಿಕತೆ ಮತ್ತು ಕಾರ್ಯಕ್ಷಮತೆ ಪ್ರಶಂಸಿಸಿರುವ ಎಸ್‍ಪಿ ಸಿ.ಬಿ.ರಿಷ್ಯಂತ್ ಅವರು 5,000 ರೂ. ನಗದು ಬಹುಮಾನ ನೀಡಿದ್ದಾರೆ.