ಚೆನ್ನೈ,ಅ.6-ಸಂಸತ್ತಿನಲ್ಲಿ ಜಾರಿಯಾದ 3 ಕೃಷಿ ಮಸೂದೆ ಗಳು ಕೃಷಿ ವಲಯದಲ್ಲಿ ಸುಧಾರಣೆ ತರಲಿದೆ ಎಂದಿರುವ ಕೇಂದ್ರ ಹಣಕಾಸು ಮತ್ತು ಕಾಪೆರ್Çರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಮಸೂದೆಗಳು ಬಹುಕಾಲದಿಂದ ಬಾಕಿ ಉಳಿದಿದ್ದವು. ಇವು ರೈತರಿಗೆ ಅವರ ಬೆಳೆಗಳನ್ನು ಯಾರಿಗೆ ಮತ್ತು ಯಾವ ಬೆಲೆಗೆ ಮಾರಾಟ ಮಾಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತವೆ ಎಂದರು. ಈ ಹೊಸ ಸುಧಾರಣೆ ಬೆಳೆಗಳ ಮಾರಾಟ ಮತ್ತು ಹಣ ಪಾವತಿಗೆ ವೇಗ ನೀಡಲಿದೆ. ರಾಜ್ಯ ಕೃಷಿ ಮಾರುಕಟ್ಟೆಗಳು ಬದಲಾಗದಿದ್ದಲ್ಲಿ, ರೈತರು ಇತರ ರಾಜ್ಯಗಳಲ್ಲಿ ಕೂಡ ತಮ್ಮ ಬೆಳೆಗಳನ್ನು ಮಾರಾಟ ಮಾಡಬಹುದು. ಇದರಿಂದ ಮಂಡಿ ಗಳು ಮತ್ತು ಮಧ್ಯವರ್ತಿಗಳಿಗೆ ಶೇ.8ರಿಂದ 8.5ರಷ್ಟು ಶುಲ್ಕ ಪಾವತಿ ಮಾಡುವ ಅಗತ್ಯವಿಲ್ಲ ಎಂದರು. ಎಂಎಸ್‍ಪಿಯನ್ನು ರದ್ದುಗೊಳಿಸಲಾಗುವುದು ಎಂಬ ವದಂತಿಯನ್ನು ತಳ್ಳಿ ಹಾಕಿದರು.