ರಾಜ್ಯದಲ್ಲಿ ಅಗತ್ಯಬಿದ್ದರೆ ವೀಕೆಂಡ್ ಕಫ್ರ್ಯೂ ಮುಂದುವರಿಕೆ
News

ರಾಜ್ಯದಲ್ಲಿ ಅಗತ್ಯಬಿದ್ದರೆ ವೀಕೆಂಡ್ ಕಫ್ರ್ಯೂ ಮುಂದುವರಿಕೆ

April 26, 2021

ಬೆಂಗಳೂರು,ಏ.25-ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗಿರುವುದರಿಂದ ಅದರ ನಿಯಂತ್ರಣಕ್ಕೆ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಕೂಡ ಜಾರಿಗೊಳಿಸ ಲಾಗಿದೆ. ಆದರೂ ನಿನ್ನೆ ಒಂದೇ ದಿನ ಸುಮಾರು 30 ಸಾವಿರ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ, ಭಾನುವಾರ ವಿಧಾನಸೌಧದಲ್ಲಿ ಕೊರೊನಾ ನಿರ್ವ ಹಣೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿದೆ.

ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಎಂಎಲ್‍ಸಿ ನಾರಾಯಣಸ್ವಾಮಿ ಅವರೊಂದಿಗೆ ಸಭೆ ನಡೆಸಿದ ಡಿ.ವಿ.ಸದಾನಂದಗೌಡ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೊರೊನಾ ಮೂರನೇ ಅಲೆಗೆ ಹೋಗಬಾರದು ಎಂದರೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಅದು ಎಲ್ಲರ ಜವಾಬ್ದಾರಿ. ಹಾಗೇ ಎಲ್ಲರಿಗೂ ಲಸಿಕೆ ಹಾಕುವುದು ನಮ್ಮ ಜವಾಬ್ದಾರಿ ಎಂದ ಅವರು, ವೀಕೆಂಡ್ ಕರ್ಫ್ಯೂ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಸಂಪುಟದ ಸಚಿವರ ಜೊತೆ ಚರ್ಚಿಸಿ ಸಿಎಂ ಯಡಿಯೂರಪ್ಪ ನಿರ್ಧಾರ ಮಾಡುತ್ತಾರೆ. ಒಂದು ವೇಳೆ ಅಗತ್ಯವಿದ್ದರೆ ವೀಕೆಂಡ್ ಕರ್ಫ್ಯೂ ಮುಂದುವರೆಸುತ್ತಾರೆ. ಅದು ಅವರಿಗೆ ಬಿಟ್ಟಿದ್ದು ಎಂದಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದಿಂದ ನೆರವು, ಆಕ್ಸಿಜನ್, ರೆಮಿ ಡಿಸಿವಿರ್ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಕೇಂದ್ರ ಸರ್ಕಾರದಿಂದ ಹೆಚ್ಚುವರಿಯಾಗಿ ಬರುತ್ತಿರುವ ರೆಮಿಡಿಸಿವಿರ್, ಆಕ್ಸಿಜನ್ ಸಮರ್ಪಕವಾಗಿ ಬಳಸಿಕೊಳ್ಳುವ ಕುರಿತು ಚರ್ಚೆ ನಡೆಸಲಾಗಿದೆ. ಕರ್ನಾಟಕ ರಾಜ್ಯ ಕೊರೊನಾ ನಿಯಂತ್ರಣವನ್ನು ಯಶಸ್ವಿ ಯಾಗಿ ಮಾಡುತ್ತಿದೆ. ಆದರೆ, ಬೆಂಗಳೂರಿನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ, ನಾವು ತುಂಬ ಜಾಗ್ರತೆಯಿಂದ ಇರಬೇಕು. ಕೊರೊನಾ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆರಂಭಿಕ ಹಂತದಲ್ಲಿ ಅಕ್ಸಿಜನ್ ಮತ್ತು ರೆಮ್ಡಿಸಿವಿರ್ ಸ್ವಲ್ಪ ಪ್ರಮಾಣದಲ್ಲಿ ಕೊರತೆ ಇತ್ತು. ಆ ಕೊರತೆ ಬಗ್ಗೆ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಅದೇ ದಿವಸ 1.22 ಲಕ್ಷ ರೆಮ್ಡಿಸಿವಿರ್ ರಾಜ್ಯಕ್ಕೆ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. 30ನೇ ತಾರೀಕಿನವರೆಗೂ 3 ಲಕ್ಷ ಲಸಿಕೆ ಬೇಕು ಎಂದು ಕೇಳಿದ್ದರು. ಅದನ್ನ ಸಹ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ 800 ಮೆಟ್ರಿಕ್ ಟನ್ ಆಕ್ಸಿಜನ್ ನೀಡಲು ಮುಂದಾಗಿದೆ. ಇನ್ನು 15 ದಿನದೊಳಗೆ ರಾಜ್ಯಕ್ಕೆ ಎಲ್ಲವೂ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಕರ್ನಾಟಕದ ಸರ್ಕಾರದಿಂದ ಹೆಚ್ಚಿನ ಕೊರೊನಾ ಲಸಿಕೆಗೆ ಬೇಡಿಕೆ ಇಟ್ಟಿದ್ದಾರೆ. ಅದನ್ನು ಸಹ ಕೇಂದ್ರ ಸರ್ಕಾರ ನೀಡಲಿದೆ. ನಾವು ಯಶಸ್ವಿಯಾಗಿ ಕೊರೊನಾ ನಿಯಂತ್ರಣ ಮಾಡುತ್ತೇವೆ. ಹೆಚ್ಚು ಸಾವು ಸಂಭವಿಸಿರುವುದು ನಮಗೂ ಮನಸ್ಸಿಗೆ ನೋವು ತಂದಿದೆ. ಜನರು ಸಹ ಜಾಗೃತರಾಗಬೇಕು. ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಯಶಸ್ವಿಯಾಗಿದೆ. ಇದರ ಫಲಿತಾಂಶ 10ರಿಂದ 14 ದಿವಸದ ನಂತರ ಗೊತ್ತಾಗಲಿದೆ. ವೀಕೆಂಡ್ ಕರ್ಫ್ಯೂ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಮಾಡುತ್ತದೆ. ಮುಂದಿನ 10 ದಿನ ಕಠಿಣ ಇರಬಹುದು. ತದನಂತರ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ.

Translate »