ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ
ಕೊಡಗು

ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ

July 6, 2022

ಮಡಿಕೇರಿ, ಜು.5- ಕೊಡಗಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಗಾಳಿಯೊಂದಿಗೆ ಮಳೆ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಜಿಲ್ಲೆಯಾ ದ್ಯಂತ ಬುಧವಾರ ಬೆಳಗ್ಗೆ 8.30ರವರೆಗೆ ಮತ್ತೆ “ಆರೆಂಜ್ ಅಲರ್ಟ್” ಘೋಷಣೆ ಮಾಡಲಾಗಿದೆ. ಗಾಳಿ ಮಳೆಗೆ ಮುರಿದು ಬಿದ್ದ ಮರಗಳಿಂದ ವಿದ್ಯುತ್ ಕಂಬ ಗಳಿಗೂ ಹಾನಿಯಾಗಿದ್ದು, ಹಲವು ಗ್ರಾಮ ಗಳು ಕಗ್ಗತ್ತಲಿನಲ್ಲಿ ಮುಳುಗಿವೆ.

ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಬಾಯಿಸಿ, ಸಮರೋಪಾದಿಯಲ್ಲಿ ತುರ್ತು ಕಾರ್ಯಗಳನ್ನು ನಿರ್ವಹಿಸಲು ಎನ್‍ಡಿಆರ್ ಎಫ್ ತಂಡ ಜಿಲ್ಲೆಗೆ ಆಗಮಿಸಿದ್ದು, ಕೆಲವು ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ.

ಕಳೆದ 24 ಗಂಟೆ ಅವಧಿಯಲ್ಲಿ ಮಡಿಕೇರಿ ತಾಲೂಕಿನ ಸಂಪಾಜೆಗೆ 144 ಮಿ.ಮೀ., ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಯಲ್ಲಿ 111 ಮಿ.ಮೀ ಹಾಗೂ ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ 89.2 ಮಿ.ಮೀ ಮಳೆ ದಾಖಲಾಗಿದೆ. ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆಯಾ ಗುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾ ಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಹಾರಂಗಿ ಜಲಾಶಯದಿಂದ 12,886ಕ್ಯೂಸೆಕ್ ನೀರನ್ನು ನದಿಗೆ ಹರಿಯ ಬಿಡಲಾಗಿದೆ. ಇದರಿಂದ ಕಾವೇರಿ ನದಿ ಹಾಗೂ ಹಾರಂಗಿ ಜಲಾಶಯದ ನೀರು ಸಂಗಮವಾಗುವ ಕಣಿವೆಯಲ್ಲಿ ಪ್ರವಾಹ ಆತಂಕ ಮನೆ ಮಾಡಿದೆ.

ಭಾರಿ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರುತ್ತಿದೆ. ತ್ರಿವೇಣಿ ಸಂಗಮ ತುಂಬಿರುವ ಹಿನ್ನೆಲೆ ಮಡಿಕೇರಿ- ಭಾಗಮಂಡಲ ರಸ್ತೆಗೆ ನದಿ ನೀರು ನುಗ್ಗಿದೆ. ಈ ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು ಹರಿಯು ತ್ತಿದ್ದು, ವಾಹನ ಜನ ಸಂಚಾರ ಎಂದಿ ನಂತಿದೆ. ನಾಪೋಕ್ಲು-ಭಾಗಮಂಡಲ ರಸ್ತೆಗಳ ಮೇಲೆ 5 ಅಡಿ ನೀರು ಹರಿಯು ತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳದಲ್ಲಿ ಗೃಹ ರಕ್ಷಕ ದಳದ ನುರಿತ ಸಿಬ್ಬಂದಿ ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಜನರ ಸಂಚಾರಕ್ಕೆ ಬೋಟ್ ವ್ಯವಸ್ಥೆ ಮಾಡಲಾಗಿದೆ.

ರಸ್ತೆಗೆ ಉರುಳಿದ ಬಂಡೆ: ಭಾಗಮಂಡಲ ತಲಕಾವೇರಿ ರಸ್ತೆಯ ಬೆಟ್ಟದ ಮೇಲಿಂದ ಬಂಡೆಯೊಂದು ರಸ್ತೆಗೆ ಉರುಳಿ ಬಿದ್ದಿದೆ. ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಕಂದಾಯ ಇಲಾಖೆ ಸಿಬ್ಬಂದಿಗಳು ಮತ್ತು ಸ್ಥಳೀಯರ ಸಹಕಾರ ದಿಂದ ಬಂಡೆಯನ್ನು ತೆರವುಗೊಳಿಸಲಾಗಿದೆ.

ಎನ್‍ಡಿಆರ್‍ಎಫ್ ತಂಡ ಭೇಟಿ: ಮಳೆ ಯಿಂದ ಮದೆನಾಡು ಸಮೀಪದ ಕರ್ತೋಜಿ ಯಲ್ಲಿ ರಾಷ್ಟ್ರೀಯ ಹೆದ್ದಾರಿ 275ನಲ್ಲಿ ರಸ್ತೆ ಬದಿಯಲ್ಲಿ ಉಬ್ಬು ಕಂಡು ಬಂದಿದ್ದ ಸ್ಥಳಕ್ಕೆ ಎನ್‍ಡಿಆರ್‍ಎಫ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ಥಳದಲ್ಲಿ ತಾತ್ಕಾ ಲಿಕ ದುರಸ್ಥಿ ಕಾರ್ಯ ನಡೆಸಲಾಗುತ್ತಿದೆ. ಭೂಮಿ ಒಳಗಿನಿಂದ ಅಂತರ್ ಜಲ ಉಕ್ಕಿ ಕೆಸರು ಮಣ್ಣಿನ ರಾಡಿ ರಸ್ತೆ ಮೇಲೆ ಹರಿಯುತ್ತಿರುವ ಪರಿಣಾಮ ಹೆದ್ದಾರಿಗೆ ಹಾನಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಹಿರಿಯ ಇಂಜಿನಿಯರ್ ಜೆ.ಎನ್. ಹೆಗ್ಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆಗಾಲ ಮುಕ್ತಾಯವಾದ ಬಳಿಕ ಮಣ್ಣಿನ ಪರೀಕ್ಷೆ ನಡೆಸಿ ಶಾಶ್ವತ ತಡೆ ಗೋಡೆ ಕಾಮಗಾರಿ ನಡೆಸಲಾಗುತ್ತದೆ ಎಂದು ಅವರು ಇದೇ ವೇಳೆ ತಿಳಿಸಿದರು. ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ 2ನೇ ಮೊಣ್ಣಂಗೇರಿ ಬಳಿ ಗುಡ್ಡ ಕುಸಿತವಾಗಿದ್ದು, ಕೆಲ ಕಾಲ ರಸ್ತೆ ಸಂಚಾರಕ್ಕೆ ತೊಡಕಾಗಿತ್ತು. ಮಣ್ಣು ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ಭಾಗದಲ್ಲಿ ಮತ್ತಷ್ಟು ಭೂ ಕುಸಿಯುವ ಸಾಧ್ಯತೆಗಳು ಕಂಡು ಬಂದಿದೆ.

ರಸ್ತೆ ಸಂಚಾರ ಕಡಿತ ಸಾಧ್ಯತೆ:ನಾಪೋಕ್ಲು ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗು ತ್ತಿದ್ದು, ಕಾವೇರಿ ನದಿ ನೀರಿನಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು ಕೆಲವು ಪ್ರದೇಶ ಗಳಲ್ಲಿ ರಸ್ತೆ ಸಂಪರ್ಕ ಕಡಿತವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಬಾಡಗ ಬಾಣಂಗಾಲ ಸೇರಿದಂತೆ ಕೊಡಗಿನ ಹಲ ವೆಡೆ ವಿದ್ಯುತ್ ಕಂಬಗಳು ನೆಲಕ್ಕುರು ಲಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕುಶಾಲನಗರದಿಂದ ಮಡಿಕೇರಿಗೆ ವಿದ್ಯುತ್ ಸರಬರಾಜಾಗುವ 66 ಕೆ.ವಿ ವಿದ್ಯುತ್ ಲೈನ್‍ಗೂ ಹಾನಿಯಾಗಿದ್ದು ಮಡಿಕೇರಿ ನಗರದಲ್ಲೂ ವಿದ್ಯುತ್ ಕಡಿತ ಉಂಟಾಗಿದೆ.

ಬಾವಿ ಕುಸಿತ:ಶ್ರೀಮಂಗಲ ಹೋಬಳಿಯ ಕುರ್ಚಿ ಗ್ರಾಮದಲ್ಲಿ ಎ.ಸಿ. ಕಾಳಯ್ಯ ಎಂಬವರ ಮನೆ ಆವರಣದಲ್ಲಿರುವ ನೀರಿನ ಬಾವಿ ಒಳಭಾಗಕ್ಕೆ ಕುಸಿದು ಬಿದ್ದಿದೆ. ಶ್ರೀಮಂಗಲ ಉಪ ತಹಶೀಲ್ದಾರ್, ಕಂದಾಯ ಇಲಾಖೆ ಸಿಬ್ಬಂದಿಗಳು, ಗ್ರಾಮ ಲೆಕ್ಕಿಗರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಗೋಡೆ ಕುಸಿತ, ವೃದ್ಧೆಗೆ ಗಾಯ:ಸುಂಟಿ ಕೊಪ್ಪದ ಪಂಪ್‍ಹೌಸ್ ರಸ್ತೆಯ ಅಂಬೇ ಡ್ಕರ್ ಬಡಾವಣೆಯ ನಿವಾಸಿ ನಂದಿನಿ ಎಂಬವರಿಗೆÀ ಸೇರಿದ ವಾಸದ ಮನೆಯ ಗೋಡೆ ಮಳೆಯಿಂದ ಭಾಗಶಃ ಕುಸಿದಿರುವ ಬಗ್ಗೆ ವರದಿಯಾಗಿದೆ. ಶನಿವಾರಸಂತೆ ಸುಳುಗಳಲೆ ಕಾಲೋನಿಯಲ್ಲಿ ಭಾರಿ ಮಳೆಗೆ ಮನೆಯೊಂದರ ಬಾತ್ ರೂಂ ಗೋಡೆ ಬಿದ್ಧು ವೃದ್ಧೆಯೊಬ್ಬರಿಗೆ ಗಂಭೀರ ಗಾಯವಾಗಿದೆ. ಸ್ನಾನ ಗೃಹಕ್ಕೆ ಬೆಳಗೆ ಎಂದಿನಂತೆ ತೆರಳಿದ್ದ ವಸಂತಮ್ಮ(70) ಎಂಬುವರ ಮೇಲೆ ಸ್ನಾನದ ಮನೆಯ ಗೋಡೆ ಕುಸಿದು ಗಂಭೀರವಾಗಿ ಗಾಯ ವಾಗಿದೆ. ಎರಡು ಕಾಲು ಹಾಗೂ ಮುಖ ಮತ್ತು ಕಣ್ಣಿಗೆ ತೀವ್ರವಾಗಿ ಪೆಟ್ಟಾಗಿದ್ದು, ಗಾಯಾಳು ವಸಂತಮ್ಮ ಅವರನ್ನು ಹಾಸನದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸಂಪಾಜೆ, ಮದೆನಾಡು, ಕೊಯನಾಡು ಭಾಗದಲ್ಲೂ ವ್ಯಾಪಕ ಮಳೆ ಸುರಿಯು ತ್ತಿದ್ದು, ಪಯಶ್ವಿನಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ. ಸಂಪಾಜೆ ಬಳಿ ಉಕ್ಕಿ ಹರಿಯುತ್ತಿರುವ ನದಿ ನೀರಿನಲ್ಲೇ ಗ್ರಾಮಸ್ಥರು ಪಟ್ಟಣಕ್ಕೆ ಬರಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಜೀಪೊಂದು ರಭಸದಿಂದ ಉಕ್ಕಿ ಹರಿಯು ತ್ತಿರುವ ನದಿ ನೀರಿನಲ್ಲಿ ಸಂಚರಿಸುತ್ತಿದ್ದು, ಗ್ರಾಮಸ್ಥರ ಭವಣೆಗೆ ಸಾಕ್ಷಿ ಹೇಳುತ್ತಿದೆ.

Translate »