ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ವಿಪಕ್ಷಗಳಿಂದ ಭಾರೀ ಗದ್ದಲ
News

ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ವಿಪಕ್ಷಗಳಿಂದ ಭಾರೀ ಗದ್ದಲ

December 22, 2021

ಬೆಳಗಾವಿ, ಡಿ. 21- ವಿವಾದಿತ ಮತಾಂತರ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು. ಭೋಜನದ ವಿರಾಮದ ಬಳಿಕ ಸದನ ಆರಂಭವಾಗುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿಧೇಯಕ ಮಂಡನೆ ಮಾಡಿದರು.

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ವಿಧೇಯಕ 2021 ಮಂಡನೆ ಮಾಡುತ್ತಿದ್ದಂತೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತು. ವಿರೋಧ ಪಕ್ಷಗಳ ಗದ್ದಲದ ನಡುವೆಯೂ ವಿಧೇಯಕ ಮಂಡನೆ ಮಾಡಲಾಯಿತು. ಏಕಾಏಕಿ ವಿಧೇಯಕ ಮಂಡನೆ ಮಾಡಿದ್ದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿ ಸಿದರು. ಇದು ಜನ ವಿರೋಧಿ ಮಸೂದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ಇಷ್ಟ ಬಂದಂತೆ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಕೆಟ್ಟ ಸರ್ಕಾರ ಕರ್ನಾಟಕದ ಇತಿಹಾಸದಲ್ಲಿ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಸೂದೆ ಮಂಡನೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕದ್ದು ಮುಚ್ಚಿ ವಿಧೇಯಕ ಮಂಡನೆ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳ್ಳತನದಿಂದ ವಿಧೇಯಕ ಮಂಡನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಆದರೆ ಹೆಚ್ಚುವರಿ ಅಜೆಂಡಾದ ಮೂಲಕ ವಿಧೇಯಕ ಮಂಡನೆ ಮಾಡಲಾಗಿದೆ ಎಂದ ಸ್ಪೀಕರ್ ಹೇಳಿದರೆ ಕಾನೂನು ಪ್ರಕಾರವಾಗಿ ವಿಧೇಯಕ ಮಂಡನೆ ಮಾಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ವಿಧೇಯಕ ಮಂಡನೆ ಖಂಡಿಸಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸದನದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಗದ್ದಲ ತೀವ್ರಗೊಂಡಿದೆ. ಕಾಂಗ್ರೆಸ್ ಸದಸ್ಯರು ಮಸೂದೆ ಪ್ರತಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಮಸೂದೆ ಮಂಡನೆಗೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ,ಕದ್ದು ಮುಚ್ಚಿ ಏಕೆ ಮಸೂದೆ ತರುತ್ತೀರಿ, ರಾಜಾದೋಷವಾಗಿ ತನ್ನಿ ಎಂದು ಸವಾಲು ಹಾಕಿದರು. ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲೂ ಈ ಬಗ್ಗೆ ತಿಳಿಸಿಲ್ಲ. ಇದರ ಹಿಂದೆ ದುರುದ್ದೇಶ ಇದೆ ಎಂದು ಆರೋಪಿಸಿದರು. ಆದರೆ ಇದನ್ನು ನಿರಾಕರಣೆ ಮಾಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಇದರಲ್ಲಿ ಮುಚ್ಚುಮರೆ ಮಾಡೋದು ಏನಿದೆ? ಈ ಕುರಿತಾಗಿ ಬಿಎಸಿ ಸಭೆಯಲ್ಲಿ ಹೇಳಿದ್ದೇವೆ. ಮಸೂದೆ ಮಂಡನೆಗೆ ಏಕೆ ವಿರೋಧ ಮಾಡುತ್ತೀರಿ, ಸಂವಿಧಾನಾತ್ಮಕವಾಗಿ ಮಸೂದೆ ತಂದಿದ್ದೇವೆ ಎಂದರು. ಸಚಿವ ಆರ್. ಅಶೋಕ್ ಮಾತನಾಡಿ, ಏಕಾಏಕಿ ಬಿಲ್ ತಂದಿಲ್ಲ. ಹಲವು ಸಮಯಗಳಿಂದ ಚರ್ಚೆ ಆಗುತ್ತಿದೆ. ಯಾವುದೇ ಧರ್ಮವನ್ನು ಉದ್ದೇಶಿಸಿ ಬಿಲ್ ತಂದಿಲ್ಲ ಎಂದು ಹೇಳಿದರು. ಆದರೂ ಕೊನೆಗೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

Translate »