ತಾಯಿ ಹುಲಿಗಾಗಿ 70 ಕ್ಯಾಮರಾ ಬಳಸಿ ಕೂಂಬಿಂಗ್
ಮೈಸೂರು

ತಾಯಿ ಹುಲಿಗಾಗಿ 70 ಕ್ಯಾಮರಾ ಬಳಸಿ ಕೂಂಬಿಂಗ್

March 31, 2021

ಮೈಸೂರು, ಮಾ.30(ಎಂಟಿವೈ)- ಬಂಡೀ ಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ನುಗು ವಲಯದಲ್ಲಿ ಎರಡು ತಿಂಗಳ 4 ಮರಿಗಳನ್ನು ಅಗಲಿರುವ ತಾಯಿ ಹುಲಿ ಪತ್ತೆಗೆ 70 ಕ್ಯಾಮರಾ ಟ್ರಾಪ್ ಬಳಸಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಲಾಗಿದೆ.
ಬಂಡೀಪುರ ಅರಣ್ಯದ ನುಗು ವಲಯದಲ್ಲಿ ತಾಯಿಯಿಂದ ಬೇರ್ಪಟ್ಟು ಚಿಂತಾಜನಕ ಸ್ಥಿತಿಯ ಲ್ಲಿದ್ದ 4 ಹುಲಿ ಮರಿಗಳಲ್ಲಿ ಈಗಾಗಲೇ 3 ಹೆಣ್ಣು ಮರಿಗಳು ಮೃತಪಟ್ಟಿದ್ದು, ಗಂಡು ಮರಿ ಮೈಸೂರು ಮೃಗಾಲಯದ ಆರೈಕೆಯಲ್ಲಿದೆ. ತಾಯಿ ಹುಲಿ ತನ್ನ ಮರಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸು ವುದು ಸಾಮಾನ್ಯ ಸಂಗತಿ. ಆದರೆ ಈ ಪ್ರಕರಣ ದಲ್ಲಿ 4 ಮರಿಗಳನ್ನು ತಾಯಿ ಹುಲಿ ಯಾವ ಕಾರಣಕ್ಕೆ ದೂರ ಮಾಡಿದೆ ಎಂಬುದು ನಿಗೂಢ ವಾಗಿದೆ. ಹುಲಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸಂದರ್ಭದಲ್ಲಿ ಅಮೂಲ್ಯ 3 ಹುಲಿ ಮರಿಗಳು ಮೃತಪಟ್ಟಿದ್ದು, ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ.

ಬಂಡೀಪುರ ಉಪವಿಭಾಗದ ಎಸಿಎಫ್ ಸುಮಿತ್ ಕುಮಾರ್ ಸುಭಾಷ್‍ರಾವ್ ಪಾಟೀಲ್ ಹಾಗೂ ನುಗು ವಲಯದ ಆರ್‍ಎಫ್‍ಓ ಗೀತಾ ನಾಯಕ್, ಹೆಡಿಯಾಲ ಆರ್‍ಎಫ್‍ಒ ಮಂಜುನಾಥ್ ನೇತೃತ್ವ ದಲ್ಲಿ ಕೂಂಬಿಂಗ್ ಮುಂದುವರೆದಿದೆ. ಕಳೆದ ರಾತ್ರಿ ಹುಲಿ ಮರಿ ಕಳೇಬರ ಸಿಕ್ಕಿದ್ದ ಸ್ಥಳದಲ್ಲಿ ಗಂಡು ಹುಲಿಯೊಂದು ಬಂದು ಹೋಗಿದೆ. ಆದರೂ ತಾಯಿ ಹುಲಿ ಆರೋಗ್ಯ ಸ್ಥಿತಿ ಅರಿಯಲು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ, ಸಿಬ್ಬಂದಿ ತಾಯಿ ಹುಲಿಗಾಗಿ ಶೋಧನಾ ಕಾರ್ಯ ಮುಂದುವರೆಸಿದ್ದಾರೆ.

Translate »