ಪ್ರವಾಸಿಗರ ಸಂಖ್ಯೆ ನೂರಾರಕ್ಕೆ ಕಡಿತ
ಮೈಸೂರು

ಪ್ರವಾಸಿಗರ ಸಂಖ್ಯೆ ನೂರಾರಕ್ಕೆ ಕಡಿತ

March 31, 2021

ಮೈಸೂರು, ಮಾ. 30(ಆರ್‍ಕೆ)- ಸರ್ವ ಕಾಲದಲ್ಲೂ ಪ್ರವಾಸಿಗರಿಂದ ತುಂಬಿ ರುತ್ತಿದ್ದ ವಿಶ್ವ ಪ್ರಸಿದ್ಧ ಕೃಷ್ಣರಾಜ ಸಾಗರ (ಕೆಆರ್‍ಎಸ್) ಬೃಂದಾ ವನವೀಗ ಪ್ರವಾಸಿಗರಿಲ್ಲದೇ ಭಣ ಗುಡುತ್ತಿದೆ. ಸಾಮಾನ್ಯವಾಗಿ ದಿನಕ್ಕೆ 7,000ದಿಂದ 10,000 ದವರೆಗೆ ಪ್ರವಾಸಿಗರು ಕೆಆರ್‍ಎಸ್‍ಗೆ ಭೇಟಿ ನೀಡುತ್ತಿದ್ದರು. ಆದರೆ ಈಗ ದಿನಕ್ಕೆ 700ರಿಂದ 750 ಮಂದಿ ಮಾತ್ರ ಬರುತ್ತಿರುವುದರಿಂದ ಬೃಂದಾವನದಲ್ಲಿ ನೀರಸ ವಾತಾವರಣ ಕಂಡುಬರುತ್ತಿದೆ.

ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಬರುವವ ರಿಗೆ ರಾಜ್ಯದ ಗಡಿಯಲ್ಲಿ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿ ಪ್ರವೇಶ ನಿರ್ಬಂಧಗೊಳಿಸಿರುವುದರಿಂದ ಪ್ರವಾಸಿಗರ ಸಂಖ್ಯೆ ಕ್ಷೀಣಿಸಲು ಪ್ರಮುಖ ಕಾರಣ ಎಂದು ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ನಿರ್ಬಂಧಕಾಜ್ಞೆ ಜಾರಿಗೊಳಿಸುವ ಮೊದಲು ಪ್ರತೀನಿತ್ಯ 7,000 ಹಾಗೂ ಶನಿವಾರ, ಭಾನುವಾರ ಮತ್ತು ರಜಾ ದಿನಗಳಂದು 10ರಿಂದ 12,000 ಪ್ರವಾಸಿಗರು ಬರುತ್ತಿದ್ದರು. ನಿರ್ಬಂಧಕಾಜ್ಞೆ ತೆರವುಗೊಳಿಸಿದ ನಂತರವೂ 3ರಿಂದ 4,000 ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ, ಇದೀಗ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಕೇರಳ, ಮಹಾರಾಷ್ಟ್ರ ಗಡಿಗಳಲ್ಲಿ ರಾಜ್ಯ ಪ್ರವೇಶಿಸುವವರಿಗೆ ಆರ್‍ಟಿ ಪಿಸಿಆರ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದ ನಂತರ ಹೊರ ರಾಜ್ಯದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಸಿಗರ ಕೊರತೆಯಿಂದಾಗಿ ಕೆಆರ್‍ಎಸ್‍ನ ಬೃಂದಾವನದ ಪ್ರವೇಶ, ವಾಹನ ನಿಲುಗಡೆ ಹಾಗೂ ಟೋಲ್ ಶುಲ್ಕದಿಂದ ಬರುತ್ತಿದ್ದ ಆದಾಯ ಸಂಪೂರ್ಣ ಕುಸಿದಿರುವುದರಿಂದ ಬೃಂದಾವನ, ಅಣೆಕಟ್ಟೆ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು, ಸಿಬ್ಬಂದಿ ಸಂಬಳ, ವಿದ್ಯುತ್ ಶುಲ್ಕ, ಉದ್ಯಾನ ನಿರ್ವಹಣೆ, ಕೆಆರ್‍ಎಸ್ ಡ್ಯಾಂ ನಿರ್ವಹಣಾ ವೆಚ್ಚ, ಪೊಲೀಸ್ ಭದ್ರತಾ ವ್ಯವಸ್ಥೆ, ಸಿಸಿ ಕ್ಯಾಮರಾ, ವಾಹನಗಳ ನಿರ್ವಹಣೆ ಸೇರಿದಂತೆ ನಿತ್ಯ ಬರುವ ಖರ್ಚು-ವೆಚ್ಚ ನಿಭಾಯಿಸುವುದೇ ಕಾವೇರಿ ನೀರಾವರಿ ನಿಗಮಕ್ಕೆ ದುಸ್ತರವಾಗಿದೆ. ಪರಿಣಾಮ ಬೃಂದಾವನದ ನೂರಾರು ಅಂಗಡಿ ಮುಂಗಟ್ಟುಗಳಿಗೂ ವಹಿವಾಟಿಲ್ಲದೆ ನಷ್ಟಕ್ಕೀಡಾಗಿದ್ದಾರೆ. ಬಾಡಿಗೆ ವಸೂ ಲಾತಿಯೂ ಕಷ್ಟಸಾಧ್ಯವಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಆರ್ಥಿಕ ಸಂಕಷ್ಟ ಪರಿಸ್ಥಿತಿ ಉಂಟಾಗಿ ಬೃಂದಾವನದ ನಿರ್ವಹಣೆಗೂ ತೀವ್ರ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಕೆಆರ್‍ಎಸ್ ಅಷ್ಟೇ ಅಲ್ಲದೆ, ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ರಂಗನತಿಟ್ಟು ಪಕ್ಷಿಧಾಮ, ದರಿಯಾ ದೌಲತ್, ಶ್ರೀ ನಿಮಿಷಾಂಬ ದೇವಸ್ಥಾನಗಳಂತಹ ಪ್ರವಾಸೀ ಹಾಗೂ ಯಾತ್ರಾ ಸ್ಥಳಗಳಿಗೂ ಪ್ರವಾಸಿಗರ ಕೊರತೆ ಉಂಟಾಗಿದೆ ಎಂದು ಹೇಳಲಾಗಿದೆ. ಒಂದೆಡೆ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಡಿಸ್ನಿಲ್ಯಾಂಡ್ ಮಾದರಿ ಕೆಆರ್‍ಎಸ್ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಪ್ರವಾಸಿಗರೇ ಮುಖ ಮಾಡುತ್ತಿಲ್ಲ. ಕೊರೊನಾ ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಏನೇ ಅಭಿವೃದ್ಧಿ ಮಾಡಿದರೂ ಆದಾಯವೇ ಇಲ್ಲದಿದ್ದರೆ ಖರ್ಚನ್ನು ಭರಿಸುವು ದಾದರೂ ಹೇಗೆ ಎಂಬ ಆತಂಕ ಕಾವೇರಿ ನೀರಾವರಿ ನಿಗಮಕ್ಕೆ ಎದುರಾಗಿದೆ.

Translate »