ಕೊರೊನಾ ಸ್ಫೋಟದ ಮುನ್ಸೂಚನೆ: ಮೈಸೂರಲ್ಲಿ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳು ಸರ್ವ ಸನ್ನದ್ಧ
ಮೈಸೂರು

ಕೊರೊನಾ ಸ್ಫೋಟದ ಮುನ್ಸೂಚನೆ: ಮೈಸೂರಲ್ಲಿ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳು ಸರ್ವ ಸನ್ನದ್ಧ

January 13, 2022

ಮೈಸೂರು,ಜ.12(ಆರ್‍ಕೆ)-ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವುದರಿಂದ ಎಚ್ಚೆತ್ತ ಜಿಲ್ಲಾಡಳಿ ತವು ಸೋಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲು ಮೈಸೂರಿನ ಹಲವು ಆಸ್ಪತ್ರೆಗಳಲ್ಲಿ ಸಿದ್ಧತೆ ಮಾಡಿಕೊಂಡಿದೆ.

ಜನವರಿ ಅಂತ್ಯದಲ್ಲಿ ಕೊರೊನಾ ಸ್ಫೋಟಗೊಳ್ಳಲಿದೆ ಎಂಬ ಮುನ್ಸೂಚನೆ ಇರುವುದರಿಂದ ಮಹಾಮಾರಿ ಸೋಂಕು ತಗುಲಿದ ರೋಗಿಗಳನ್ನು ದಾಖಲಿಸಲು ಅಗತ್ಯವಾದ ಆಕ್ಸಿಜನೇಟೆಡ್, ವೆಂಟಿಲೇಟರ್ ಬೆಡ್, ಔಷಧಿ, ಆಕ್ಸಿಜನ್, ವೈದ್ಯಕೀಯ ಸಲ ಕರಣೆಗಳು, ಮಾಸ್ಕ್, ಹ್ಯಾಂಡ್ ಗ್ಲೌಸ್, ಪಿಪಿಇ ಕಿಟ್‍ಗಳನ್ನು ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ವ್ಯವಸ್ಥೆ ಮಾಡಿಕೊಂಡು ಸರ್ವ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ.
ಮೈಸೂರು ತಾಲೂಕು ಮಂಡಕಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‍ಓಯು)ದ ಶೈಕ್ಷಣಿಕ ಭವನದ ಕೋವಿಡ್ ಕೇರ್ ಸೆಂಟರ್‍ನಲ್ಲಿ 700 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ ಕೊರೊನಾ 2ನೇ ಅಲೆಯಲ್ಲಿ ಒಟ್ಟು 6,050ಮಂದಿ ಸೋಂಕಿತರನ್ನು ಈ ಕೇಂದ್ರ ದಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಕೆಆರ್‍ಎಸ್ ರಸ್ತೆಯ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಜಿಲ್ಲಾ ಕೋವಿಡ್ ಆಸ್ಪತ್ರೆ, ಬೃಂದಾವನ ಬಡಾವಣೆಯ ಸರ್ಕಾರಿ ಆಯುರ್ವೇದ ಕಾಲೇಜು ಹೈ-ಟೆಕ್ ಪಂಚಕರ್ಮ ಆಸ್ಪತ್ರೆ, ಪ್ರಕೃತಿ-ಯೋಗ ಚಿಕಿತ್ಸಾ ಆಸ್ಪತ್ರೆ, ಇಎಸ್‍ಐ ಆಸ್ಪತ್ರೆ, ಕೆಆರ್ ಆಸ್ಪತ್ರೆ, ಜೆಎಲ್‍ಬಿ ರಸ್ತೆಯ ತುಳಸಿ ದಾಸಪ್ಪ ಆಸ್ಪತ್ರೆ, ಕಲ್ಯಾಣಗಿರಿಯ ಬೀಡಿ ಕಾರ್ಮಿಕರ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ, ಆರೈಕೆ ನೀಡಲು ಸೌಲಭ್ಯ ಕಲ್ಪಿಸಲಾಗಿದೆ.

ಮೈಸೂರಿನ ಬೋಗಾದಿ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯವನ್ನು ಪರಿವರ್ತಿಸಲಾಗಿದೆ. ಅದೇ ರೀತಿ ಜಿಲ್ಲೆಯ ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲೂ ಕೋವಿಡ್ ಸ್ಯಾನಿಟೈಸ್ ಮಾಡಲಾಗಿದೆ.

ಆಸ್ಪತ್ರೆಗಳಿಗೆ ಅಗತ್ಯವಿರುವ ವ್ಯೆದ್ಯರು, ಹೌಸ್ ಸರ್ಜನ್, ಪ್ಯಾರಾ ಮೆಡಿಕಲ್, ಲ್ಯಾಬ್ ಟೆಕ್ನಿಷಿಯನ್‍ಗಳು, ನರ್ಸ್‍ಗಳು, ಸ್ವಚ್ಛತಾ ಮತ್ತು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲು ಜಿಲ್ಲಾಡಳಿತವು ಜಿಲ್ಲಾ ಆರೋಗ್ಯಾಧಿಕಾರಿ, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿ ಅಂಡ್ ಆರ್‍ಐ) ಡೀನ್ ಅಂಡ್ ಡೈರೆಕ್ಟರ್ ಮೂಲಕ ಪ್ರಕ್ರಿಯೆ ನಡೆಸು ತ್ತಿದೆ. ಈಗಾಗಲೇ ಅಗತ್ಯ ಔಷಧಿ, ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್‍ಗಳನ್ನು ಟೆಂಡರ್ ಮೂಲಕ ತರಿಸಿ ಶೇಖರಿಸ ಲಾಗಿದೆ. ಒಳರೋಗಿಗಳಿಗೆ ಊಟ-ತಿಂಡಿ ಪೂರೈಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು, ಆಂಬುಲೆನ್ಸ್ ಚಾಲಕ ರನ್ನೂ ಸಜ್ಜುಗೊಳಿಸಲಾಗಿದೆ. ಎರಡನೇ ಅಲೆಯಲ್ಲಾದ ಅನುಭವದ ಹಿನ್ನೆಲೆಯಲ್ಲಿ ಈ ಬಾರಿ ಆಕ್ಸಿಜನ್ ಕೊರತೆ ಯಾಗದಂತೆ ದಾಸ್ತಾನಿರಿಸಲಾಗಿದೆಯಲ್ಲದೆ, ಕೋವಿಡ್ ಆಸ್ಪತ್ರೆಗಳ ಆವರಣದಲ್ಲಿ ಆಕ್ಸಿಜನ್ ಜನರೇಟರ್‍ಗಳನ್ನು ಅಳವಡಿಸುವ ಮೂಲಕ ಜಿಲ್ಲಾಡಳಿತವು ಆಕ್ಸಿಜನ್ ಕೊರತೆ ಉಂಟಾಗದಂತೆ ಕ್ರಮ ವಹಿಸಿದೆ. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಹೆಚ್. ಪ್ರಸಾದ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್ ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸುತ್ತಿದ್ದಾರೆ.

Translate »