ನವದೆಹಲಿ, ಜೂ.14- ಭಾರತದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಒಂದೇ ದಿನ ಬರೋಬ್ಬರಿ ದಾಖಲೆಯ 11,929 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ 3.20 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾನುವಾರ ಮಾಹಿತಿ ನೀಡಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ನಿನ್ನೆ ಒಂದೇ ದಿನ 311 ಮಂದಿ ಬಲಿಯಾಗಿದ್ದು, ಮಹಾಮಾರಿ ವೈರಸ್‍ಗೆ ಬಲಿಯಾದವರ ಸಂಖ್ಯೆ 9,195ಕ್ಕೆ ತಲುಪಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 11,929 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದೀಗ ದೇಶದಲ್ಲಿ ಒಟ್ಟಾರೆ 3,20,922 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಈ ನಡುವೆ 3,20,922 ಮಂದಿ ಸೋಂಕಿತರ ಪೈಕಿ 1,62,379 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನು ದೇಶದಲ್ಲಿ 1,49,348 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಶನಿವಾರ ಒಂದೇ ದಿನ 113 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 3830ಕ್ಕೆ ತಲುಪಿದೆ. ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ ಶನಿವಾರ ಮತ್ತೆ 3427 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಇನ್ನು ದೆಹಲಿಯಲ್ಲಿ 57, ತಮಿಳುನಾಡಿನಲ್ಲಿ 30, ಗುಜರಾತ್‍ನಲ್ಲಿ 33, ಪಶ್ಚಿಮ ಬಂಗಾಳದಲ್ಲಿ 12, ಹರಿಯಾಣದಲ್ಲಿ 8 ಮಂದಿ ಕೊರೊನಾ ವ್ಯಾಧಿಗೆ ಬಲಿಯಾಗಿದ್ದಾರೆ.