ಹತ್ತಾರು ಸೋಂಕಿತರನ್ನು ಆಸ್ಪತ್ರೆ ಸೇರಿಸಿದ್ದ ಆಂಬುಲೆನ್ಸ್ ಚಾಲಕನನ್ನೂ ಕೊರೊನಾ ಕಾಡದೇ ಬಿಡಲಿಲ್ಲ!
ಮೈಸೂರು

ಹತ್ತಾರು ಸೋಂಕಿತರನ್ನು ಆಸ್ಪತ್ರೆ ಸೇರಿಸಿದ್ದ ಆಂಬುಲೆನ್ಸ್ ಚಾಲಕನನ್ನೂ ಕೊರೊನಾ ಕಾಡದೇ ಬಿಡಲಿಲ್ಲ!

August 9, 2020

ಕೊರೊನಾ ವಾರಿಯರ್ ಆಗಿದ್ದ ಕೆಎಸ್‍ಆರ್‍ಟಿಸಿ ಬಸ್ ಚಾಲಕನ ಅನುಭವ ಕಥನ

ಮೈಸೂರು, ಜು.8 (ವೈಡಿಎಸ್)- ಕೊರೊನಾಗೆ ಭಯಪಡಬಾರದು. ಇತರರು ಸೋಂಕಿತರ ಮನಸ್ಸನ್ನು ಘಾಸಿಗೊಳಿಸುವ ಮಾತುಗಳನ್ನು ಆಡಬಾರದು. ಬದಲಾಗಿ ಧೈರ್ಯ ತುಂಬಬೇಕು. ಸೋಂಕಿತರು ಕೊರೊನಾ ಗೆದ್ದೇ ಗೆಲ್ಲುತ್ತೇನೆಂಬ ಆತ್ಮ ಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು.

`ನಾನು ಆಂಬುಲೆನ್ಸ್ ಬಸ್ ಚಾಲಕ. ಜತೆಗೆ ಕೊರೊನಾ ವಾರಿಯರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ಪಿಪಿಇ ಕಿಟ್, ಹ್ಯಾಂಡ್‍ಗ್ಲೌಸ್, ಮಾಸ್ಕ್ ಧರಿಸಿ ಸೋಂಕಿ ತರು ಮತ್ತು ಗುಣಮುಖರಾದವರನ್ನು ಬಸ್ ಆಂಬುಲೆನ್ಸ್‍ನಲ್ಲಿ ಕರೆದುಕೊಂಡು ಹೋಗಿ ಮನೆಗೆ ಬಿಡುತ್ತಿದ್ದೆ. ಸಾಕಷ್ಟು ಮುಂಜಾ ಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ನನಗೆ ಕೊರೊನಾ ಸೋಂಕು ಹೇಗೆ ತಗುಲಿ ತೆಂದು ಗೊತ್ತಿಲ್ಲ’ ಎಂದು ಇತ್ತೀಚೆಗೆ ಗುಣ ಮುಖರಾದ ಕೆಎಸ್‍ಆರ್‍ಟಿಸಿ ಆಂಬುಲೆನ್ಸ್ ಬಸ್ ಚಾಲಕ, ಆಲನಹಳ್ಳಿ ನಿವಾಸಿ (ರೋಗಿ ಸಂಖ್ಯೆ 2335) ತಮ್ಮ ಅನುಭವ ಹಂಚಿಕೊಂಡರು. ಜು.20ರಂದು ತೀವ್ರ ಜ್ವರ ಬಂತು. ಕೂಡಲೇ ಕೆ.ಆರ್.ಆಸ್ಪತ್ರೆಗೆ ಹೋಗಿ ಗಂಟಲುದ್ರವ ಪರೀಕ್ಷೆ ಮಾಡಿಸಿದೆ. ಜು.21ರಂದು ವೈದ್ಯರು ಕರೆ ಮಾಡಿ `ಪಾಸಿಟಿವ್’ ಬಂದಿದೆ ಎಂದರು. ಅದರ ಬೆನ್ನಲ್ಲೇ ವೈದ್ಯರು ಪಿಪಿಇ ಕಿಟ್ ಧರಿಸಿ ಆಂಬುಲೆನ್ಸ್‍ನಲ್ಲಿ ಬಂದು ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು.

ಐದು ದಿನಗಳ ನಂತರ ಪತ್ನಿ, ಇಬ್ಬರು ಪುತ್ರರು ಕೊರೊನಾ ಪರೀಕ್ಷೆ ಮಾಡಿಸಿದರು. ಪತ್ನಿ ಮತ್ತು ಹಿರಿಯ ಪುತ್ರನಿಗೆ ಕೊರೊನಾ ದೃಢಪಟ್ಟಿತು. ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಆಸ್ಪತ್ರೆಯಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೈದ್ಯರು ಆರೋಗ್ಯ ವಿಚಾರಿಸು ತ್ತಿದ್ದರು. ಜತೆಗೆ ಊಟವೂ ಚೆನ್ನಾಗಿತ್ತು. 8 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖನಾದೆ. ಬಳಿಕ ಡಿಶ್ಚಾರ್ಜ್ ಆಗಿ ಮನೆಗೆ ಬಂದೆ. ವೈದ್ಯರ ಸಲಹೆಯಂತೆ 14 ದಿನ ಕ್ವಾರಂಟೈನ್ ನಲ್ಲಿದ್ದೆ. ಸಂಬಂಧಿಕರೊಬ್ಬರು ಪ್ರತಿದಿನ ಬೆಳಿಗ್ಗೆ ತಿಂಡಿ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.

ವೃದ್ಧರ ಆರೋಗ್ಯವೂ ಮುಖ್ಯ: ಡಿಶ್ಚಾರ್ಜ್ ಆಗಿ ಮನೆಗೆ ಹೋದಾಗ ಅಕ್ಕಪಕ್ಕದ ನಿವಾಸಿಗಳು ನಾನಿನ್ನೂ ಸೋಂಕಿತನೇ ಆಗಿದ್ದೇನೆ ಎಂಬಂತೆಯೇ ನನ್ನತ್ತ ನೋಡಿದರು. ಅದರಿಂದ ನನಗೇನೂ ಬೇಸರವಾಗಲಿಲ್ಲ. ಏಕೆಂದರೆ ನಮ್ಮ ಪಕ್ಕದ ಮನೆಗಳಲ್ಲಿ ವಯಸ್ಸಾ ದವರಿದ್ದಾರೆ. ಅವರ ಆರೋಗ್ಯವೂ ಮುಖ್ಯವಲ್ಲವೆ? ನಾನು ಆಸ್ಪತ್ರೆಯಿಂದ ಮನೆಗೆ ಮರಳಿದಾಗ ನೆರಮನೆಗಳಲ್ಲಿದ್ದ ವಯಸ್ಸಾದವರೆಲ್ಲಾ ಅವರ ಸಂಬಂಧಿಕರ ಮನೆಗಳಿಗೆ ಹೋದರು. ಅವರೆಲ್ಲಾ ಪ್ರತಿದಿನ ಕರೆ ಮಾಡಿ ನಮ್ಮ ಆರೋಗ್ಯ ವಿಚಾರಿಸುತ್ತಾರೆ. ಇದು ಮನಸ್ಸಿಗೆ ಸಂತೋಷ ಉಂಟು ಮಾಡುತ್ತದೆ ಎಂದು ಆಂಬುಲೆನ್ಸ್ ಬಸ್ ಚಾಲಕ ಮಾತು ಮುಕ್ತಾಯಗೊಳಿಸಿದರು.

Translate »