ನಂಜನಗೂಡು,ಆ.8-ನದಿಗೆ ಚರಂಡಿ ನೀರುಣಿಸಿ ದವರಿಗೆ ತುಂಬಿ ಹರಿಯುತ್ತಿರುವ ಕಪಿಲೆ ಸದ್ದಿಲ್ಲದೆ ತಿರು ಗೇಟು ನೀಡುತ್ತಾ ಪರಿತಪಿಸುವಂತೆ ಮಾಡಿದ್ದಾಳೆ. ಇಷ್ಟು ದಿನ ತನ್ನ ಮೇಲಾದ ದೌರ್ಜನ್ಯವನ್ನು ಸಹಿಸಿಕೊಂಡು ಮೌನವಾಗಿದ್ದ ಕಪಿಲೆ, ಇದೀಗ ಮೈ ಕೊಡವಿದ್ದಾಳೆ. ನದಿ ಮಲಿನಗೊಳಿಸುತ್ತಿದ್ದವರ ನಿದ್ದೆಗೆಡಿಸಿದ್ದಾಳೆ.
ಮಾನವನ ದುರಾಸೆಯಿಂದಾಗಿ ನೋವುಣ್ಣುವ ಪ್ರಕೃತಿ ಮಾತೆ, ಮನುಷ್ಯನ ದೌರ್ಜನ್ಯ, ಒತ್ತಡ ಮಿತಿ ಮೀರಿದಾಗ ತನ್ನ ರೌದ್ರಾವತಾರ ಪ್ರದರ್ಶಿಸಿ ಎಚ್ಚರಿಸುತ್ತಾಳೆ. ಜನ ಆಗಲೂ ಎಚ್ಚೆತ್ತುಕೊಳ್ಳದಿದ್ದರೆ ತಕ್ಕಶಾಸ್ತಿ ಮಾಡುತ್ತಾಳೆ. ನಂಜನಗೂಡಿನ ತೋಪಿನ ಬೀದಿ, ರಾಜಾಜಿ ಕಾಲೋನಿ, ಹಳ್ಳದಕೇರಿ, ಹಾಗೂ ಸರಸ್ವತಿ ಕಾಲೋನಿಯಲ್ಲಿನ 200ಕ್ಕೂ ಹೆಚ್ಚು ಮನೆಗಳವರಿಗೆ 2 ದಿನಗಳಿಂದ ಎದು ರಾಗಿರುವ ಸಂಕಷ್ಟವೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.
ಜಲಾವೃತ ಬಡಾವಣೆ: ನಂಜುಂಡೇಶ್ವರ ದೇವಾ ಲಯದಿಂದ 500 ಮೀ. ದೂರದಲ್ಲಿ ನಂಜನಗೂಡು -ಚಾಮರಾಜನಗರ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ತೋಪಿನ ಬೀದಿ, ರಾಜಾಜಿ ಕಾಲೋನಿ, ಹಳ್ಳದ ಕೇರಿ ಹಾಗೂ ಸರಸ್ವತಿ ಕಾಲೋನಿ ಈಗ ಜಲಾವೃತ ಗೊಂಡಿವೆ. ನದಿಗೂ ಈ ಬಡಾವಣೆಗಳಿಗೂ 800ರಿಂದ 1000 ಮೀ. ಅಂತರ. ನದಿಪಾತ್ರದಲ್ಲಿ ಗದ್ದೆಗಳಿವೆ. ಪಕ್ಕ ಮುಖ್ಯರಸ್ತೆ ಇದೆ. ಆ ರಸ್ತೆಯ ಮತ್ತೊಂದು ಬದಿಯಲ್ಲಿ ಈ ಬಡಾವಣೆಗಳಿವೆ. ಹಲವು ವರ್ಷಗಳಿಂದ ಇಲ್ಲಿ ಜನ ವಾಸಿಸುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ನದಿ ಉಕ್ಕಿ ಹರಿದರೆ ಈ ಬಡಾವಣೆ ಜಲಾವೃತಗೊಂಡು ಅಲ್ಲಿನ ನಿವಾಸಿಗಳ ನಿದ್ದೆ ಕೆಡಿಸುತ್ತದೆ. ಸ್ಥಳೀಯ ಆಡಳಿತದ ಎಡ ವಟ್ಟು ಇದಕ್ಕೆ ಪ್ರಮುಖ ಕಾರಣ ಎಂಬ ಆರೋಪಗಳಿವೆ.
ಮರಳಿಸಿದ ಉಡುಗೊರೆ: ಈ ಬಡಾವಣೆಯಲ್ಲಿ ಹಳೆಯ ಹಂಚಿನ ಮನೆ, ಹೊಸ ತಾರಸಿ ಮನೆ, ಮಹಡಿ ಮನೆಗಳೂ ಇವೆ. ಇಲ್ಲಿನ ಚರಂಡಿ ಹಾಗೂ ಒಳಚರಂಡಿ ನೀರನ್ನು ನೇರವಾಗಿ ಕಪಿಲಾ ನದಿ ಸೇರುವಂತೆ ಚರಂಡಿ ನಿರ್ಮಿಸಲಾಗಿದೆ. ವರ್ಷದ 365 ದಿನವೂ ಸಾವಿರಾರು ಲೀ. ಕಲುಷಿತ ನೀರು ಕಪಿಲೆಯ ಮಡಿಲು ಸೇರುತ್ತಿದೆ. ಇದರೊಂದಿಗೆ ದೇವಾಲಯದ ಪಾರ್ಕಿಂಗ್ ಸ್ಥಳದ ಸುತ್ತ್ತಲಿನ ಅಂಗಡಿ, ಟೀಶಾಪ್, ಬೇಕರಿಗಳಿಂದ ಹೊರ ಬೀಳುವ ಪ್ಲಾಸ್ಟಿಕ್ ತ್ಯಾಜ್ಯ, ಪೇಪರ್ ಲೋಟ, ಖಾಲಿ ಬಾಟಲ್ ಸೇರಿದಂತೆ ಅಪಾರ ತ್ಯಾಜ್ಯ ಚರಂಡಿ ಮೂಲಕ ಕಪಿಲಾ ನದಿ ಸೇರುತ್ತಲೇ ಇದೆ. ಇದು ಸ್ಥಳೀಯ ಸಂಸ್ಥೆ ಗಳ ಗಮನಕ್ಕೆ ಬಂದಿದ್ದರೂ ತಡೆಯುತ್ತಿಲ್ಲ.
ಸ್ಥಳೀಯ ಸಂಸ್ಥೆ ನಿರ್ಮಿಸಿದ ಚರಂಡಿ ಮೂಲಕವೇ ನದಿ ನೀರು ಹಿಮ್ಮುಖವಾಗಿ ರಭಸವಾಗಿ ಬಂದು ಇಡೀ ಬಡಾವಣೆಯನ್ನೇ ಆವರಿಸಿದೆ. ಅಲ್ಲದೇ, ಚರಂಡಿ ನೀರು ಬಡಾವಣೆಯ ಖಾಲಿ ಜಾಗದಲ್ಲಿ ತುಂಬಿ ದುರ್ನಾಥ ಬೀರುವಂತಾಗಿದೆ. ಪ್ಲಾಸ್ಟಿಕ್ ಹಾಳೆ, ಪೇಪರ್ ಲೋಟ ಹಾಗೂ ನೀರಿನ ಖಾಲಿ ಬಾಟಲ್‍ಗಳನ್ನು ಗುಡ್ಡೆ ಗುಡ್ಡೆ ಯಾಗಿ ತೋಪಿನ ಬೀದಿಗೆ ತಂದೆಸೆದಿದೆ. ಬೃಹತ್ ಈಶ್ವರ ಮೂರ್ತಿಗೆ ಸರಿಯಾಗಿ ಹಿಂಬದಿಯಿರುವ ತೋಪಿನ ಬೀದಿಯಿಂದಲೇ ನದಿ ನೀರು ಮನೆಗಳಿಗೆ ನುಗ್ಗುತ್ತಿದೆ. ಇಲ್ಲಿದ್ದ ಎಲ್ಲರನ್ನು ಸ್ಥಳಾಂತರಿಸಲಾಗಿದೆ. ತಾಲೂಕು ಆಡಳಿತದಿಂದ ಸಾಂತ್ವನ ಕೇಂದ್ರ ನಿರ್ಮಿಸಿ ಅಲ್ಲಿ ಆಶ್ರಯ ನೀಡಲಾಗಿದೆ. ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ.
ಎಂ.ಟಿ.ಯೋಗೇಶ್‍ಕುಮಾರ್