ಕೊರೊನಾ, ತುರ್ತು ಸೇವೆ ಹೊರತುಪಡಿಸಿ ನಾಳೆ ಉಳಿದೆಲ್ಲಾ ವೈದ್ಯಕೀಯ ಸೇವೆ ಸ್ಥಗಿತ
ಮೈಸೂರು

ಕೊರೊನಾ, ತುರ್ತು ಸೇವೆ ಹೊರತುಪಡಿಸಿ ನಾಳೆ ಉಳಿದೆಲ್ಲಾ ವೈದ್ಯಕೀಯ ಸೇವೆ ಸ್ಥಗಿತ

December 10, 2020

ಮೈಸೂರು, ಡಿ.9(ಪಿಎಂ)- ಹಲವು ರೀತಿ ಶಸ್ತ್ರಚಿಕಿತ್ಸೆ ನಡೆಸಲು ಆಯುರ್ವೇದ ವೈದ್ಯರಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿರುವುದನ್ನು ಖಂಡಿಸಿ ಆಲೋಪತಿ ವೈದ್ಯರು ಡಿ.11ರಂದು ಮುಷ್ಕರ ನಡೆಸಲಿದ್ದು, ಅಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕೊರೊನಾ ಹಾಗೂ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ವೈದ್ಯಕೀಯ ಸೇವೆಗಳು ಸ್ಥಗಿತಗೊಳ್ಳಲಿವೆ. ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ವ್ಯವಸ್ಥೆಯ ಆಲೋಪತಿ ಸೇವೆಗೆ ಇದು ಅನ್ವಯಿಸಲಿದೆ.

ಆಯುರ್ವೇದ ವೈದ್ಯ ಶಿಕ್ಷಣದ ಶಾಲ್ಯ ತಂತ್ರ ಮತ್ತು ಶಾಲಕ್ಯ ತಂತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆ ದವರು ತರಬೇತಿ ಬಳಿಕ ಹಲವು ಶಸ್ತ್ರಚಿಕಿತ್ಸೆ ನಡೆಸ ಬಹುದು ಎಂದು ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ) ಅನುಮತಿ ನೀಡಿದೆ. ಈ ಸಂಬಂಧ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರದ ಈ ಕ್ರಮ ಅತ್ಯಂತ ಅಪಾಯಕಾರಿ ಎಂದು ಪ್ರತಿಪಾದಿಸಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಕೇಂದ್ರ ಸರ್ಕಾರ ಈ ಆದೇಶ ಹಿಂಪಡೆಯ ಬೇಕೆಂದು ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದೆ.

ಐಎಂಎ ಕರೆ ಮೇರೆಗೆ ಡಿ.11ರಂದು ದೇಶದಾದ್ಯಂತ ಆಲೋಪತಿ ವೈದ್ಯರು ಮುಷ್ಕರ ನಡೆಸಲಿದ್ದು, ಅದರಂತೆ ಮೈಸೂರು ಜಿಲ್ಲೆಯಲ್ಲಿಯೂ ಅಂದು ಮುಷ್ಕರ ನಡೆಯ ಲಿದೆ. ಜೊತೆಗೆ ಮೈಸೂರಿನಲ್ಲಿ ಇಂದಿನಿಂದ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಆಲೋಪತಿ ವೈದ್ಯರು ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಜಿಲ್ಲಾ ಪತ್ರಕರ್ತರ ಭವನದಲ್ಲಿಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಎಂಎ ಮೈಸೂರು ಘಟಕದ ಅಧ್ಯಕ್ಷ ಡಾ.ಬಿ.ಎನ್.ಆನಂದರವಿ, ಕೇಂದ್ರ ಸರ್ಕಾರದ ಈ ಕ್ರಮ ಖಂಡಿಸಿ ಈಗಾಗಲೇ ಕಪ್ಪುಪಟ್ಟಿ ಧರಿಸಿ ಎಲ್ಲಾ ಆಲೋಪತಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಳೆ ಸಂಜೆ 4ಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಗುವುದು. ಸಂಸದರಿಗೂ ಮನವಿ ಸಲ್ಲಿಸಲಿದ್ದೇವೆ. ನಾಳೆಯೂ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಿದ್ದೇವೆ ಎಂದು ತಿಳಿಸಿದರು.

ಆಯುರ್ವೇದ ವೈದ್ಯರಿಗೆ ನೀಡಿರುವ ಶಸ್ತ್ರಚಿಕಿತ್ಸೆ ಅವಕಾಶ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಈ ಹೋರಾಟ ನಡೆಯುತ್ತಿದೆ. ಆಯುರ್ವೇದ, ಯುನಾನಿ, ಯೋಗ ಮತ್ತು ನ್ಯಾಚೋರೋಪತಿ, ಹೋಮಿಯೋಪತಿ, ಆಲೋಪತಿಗಳ ನಡುವೆ ಮಿಶ್ರವೈದ್ಯ ಪದ್ಧತಿ ಅತ್ಯಂತ ಅಪಾಯಕಾರಿ. ಯಾವುದೇ ಕಾರಣಕ್ಕೂ ಇದಕ್ಕೆ ಉತ್ತೇಜನ ನೀಡಬಾರದು. ಎಲ್ಲಾ ವೈದ್ಯ ಪದ್ಧತಿಗಳ ಶುದ್ಧೀಕರಣ ಆಗಬೇಕು. ಆಲೋಪತಿ ವೈದ್ಯರು `ಡಾಕ್ಟರ್’, ಆಯುರ್ವೇದ ವೈದ್ಯರು `ವೈದ್ಯ’, ಯುನಾನಿ ವೈದ್ಯರು `ಹಕೀಮ್’ ಹಾಗೂ ಹೋಮಿ ಯೋಪತಿ ವೈದ್ಯರು `ಹೋಮಿಯೋ’ ಆಗಿ ನಿರ್ದಿಷ್ಟವಾಗಿ ಗುರುತಿಸಲ್ಪಡಲು ಕ್ರಮ ಕೈಗೊಳ್ಳಬೇಕು. ಸಂಶೋಧನೆ ಮತ್ತು ಬೆಳವಣಿಗೆಗಳು ಆಯಾಯ ವೈದ್ಯಕೀಯ ಪದ್ಧತಿ ಅನುಸಾರವೇ ನಡೆಯಬೇಕು. ಇವು ನಮ್ಮ ಪ್ರಮುಖ ಬೇಡಿಕೆಗಳು ಎಂದರು.

ಐಎಂಎ ಹಿರಿಯ ಸದಸ್ಯ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ಸ್ನಾತಕೋತ್ತರ ಪದವಿ ಪಡೆದ ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬಹುದು ಎಂಬುದು ಅವೈಜ್ಞಾನಿಕ. ಆಯುರ್ವೇದ ಹಾಗೂ ಆಲೋಪತಿ ಶಸ್ತ್ರಚಿಕಿತ್ಸೆ ವಿಧಾನಗಳು ಬೇರೆ ಬೇರೆಯಾಗಿವೆ. ಆಲೋಪತಿ ಎಂಬ ಆಧುನಿಕ ವೈದ್ಯ ಪದ್ಧತಿಯಲ್ಲಿ 5 ವರ್ಷಗಳ ಎಂಬಿಬಿಎಸ್ ಪದವಿ ಪಡೆದವರು ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಆಯುರ್ವೇದ ವೈದ್ಯರಿಗೆ ಕೆಲ ತಿಂಗಳು ತರಬೇತಿ ನೀಡಿ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ಕಲ್ಪಿಸುವುದು ಸೂಕ್ತವೇ ಎಂದು ಪ್ರಶ್ನಿಸಿದರು. ಆಧುನಿಕ ವೈದ್ಯ ಪದ್ಧತಿಯಲ್ಲಿ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ (ಎಂಎಸ್) ಪೂರೈಸಿದವರು ಅವರವರ ವಿಷಯಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಅರ್ಹರಾಗಿರುತ್ತಾರೆ. ಅದಾಗ್ಯೂ ಅವರಿಗೂ ಹಲವು ವರ್ಷಗಳು ತರಬೇತಿ ಅಗತ್ಯ. ಹೀಗಿರುವಾಗ ಏನೂ ಗೊತ್ತಿಲ್ಲದವರಿಗೆ ತರಬೇತಿ ನೀಡಿ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಿದರೆ ಅಪಾಯ ಎದುರಾಗಲಿದೆ. ಕೇಂದ್ರ ಸರ್ಕಾರದ ಈ ನಡೆ ಅಚ್ಚರಿ ಹಾಗೂ ಆಘಾತಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ನಾವು ಆಯುರ್ವೇದ ವೈದ್ಯ ಪದ್ಧತಿ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ. ಆಯುರ್ವೇದ ಈ ನೆಲದ ವೈದ್ಯ ಪದ್ಧತಿ. ಅದಕ್ಕೆ ಅದರದೇ ಸ್ಥಾನಮಾನವಿದೆ. ಅದಕ್ಕೆ ಸೂಕ್ತ ರೀತಿಯಲ್ಲಿ ಉತ್ತೇಜನ ನೀಡಬೇಕು. ಆಯಾಯ ಪದ್ಧತಿ ವ್ಯಾಸಂಗ ಮಾಡುವವರು ಆಯಾಯ ಪದ್ಧತಿಯನ್ನೇ ಅನುಸರಿಸಬೇಕು. ಸರ್ಕಾರದ ಈ ಕ್ರಮದ ಬಗ್ಗೆ ಮುಖ್ಯವಾಗಿ ಸಾರ್ವಜನಿಕರು ಆಲೋಚನೆ ಮಾಡಬೇಕಿದೆ ಎಂದರು. ಅಖಿಲ ಭಾರತ ಶಸ್ತ್ರಚಿಕಿತ್ಸೆ ತಜ್ಞರ ಸಂಘದ ಚುನಾಯಿತ ಅಧ್ಯಕ್ಷ ಡಾ.ಜಿ.ಸಿದ್ದೇಶ್, ಮಾತನಾಡಿ, ಸಾಮಾನ್ಯ ಜನತೆ ಕೇಂದ್ರ ಸರ್ಕಾರದ ಈ ಕ್ರಮದಿಂದ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ವೈದ್ಯಕೀಯ ಸಂಘಟನೆಗಳೊಂ ದಿಗೆ ಚರ್ಚೆ ಮಾಡಬಹುದಿತ್ತು. ಆದರೆ ಅದನ್ನು ಮಾಡದೇ ಏಕಾಏಕಿ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಸಾರ್ವಜನಿಕ ಆರೋಗ್ಯಕ್ಕೆ ಮಾರಕವಾಗುವ ನಿರ್ಧಾರವಿದು. ಆಯುರ್ವೇದದ ಮೂಲ ಪದ್ಧತಿಗೂ ಧಕ್ಕೆಯಾಗಲಿದೆ ಎಂದು ಹೇಳಿದರು.

ಮೈಸೂರ್ ಅಸೋಷಿಯೇಷನ್ ಆಫ್ ಹಾಸ್ಪಿಟಲ್ಸ್, ನರ್ಸಿಂಗ್ ಹೋಮ್ಸ್, ಕಿನಿಕ್ಸ್ ಅಂಡ್ ಡಯಾಗ್ನೋಸ್ಟಿಕ್ ಸೆಂಟ್ರರ್ಸ್ (ಮಹಾನ್) ಅಧ್ಯಕ್ಷ ಜಾವೀದ್ ನಯೀಮ್, ಐಎಂಎ ಮೈಸೂರು ಮಾಜಿ ಅಧ್ಯಕ್ಷ ಡಾ.ಸಿ.ರಾಜನ್, ಮೈಸೂರು ವೈದ್ಯಕೀಯ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಸಿ.ಪ್ರಸನ್ನಶಂಕರ್, ಐಎಂಎ ಮೈಸೂರು ಕಾರ್ಯದರ್ಶಿ ಡಾ.ಎನ್.ಚಂದ್ರಭಾನ್ ಸಿಂಗ್ ಗೋಷ್ಠಿಯಲ್ಲಿದ್ದರು.

Translate »