ಕೊರೊನಾ ಮಾನವೀಯತೆ ಪಾಠ ಕಲಿಸಿದೆ
ಮೈಸೂರು

ಕೊರೊನಾ ಮಾನವೀಯತೆ ಪಾಠ ಕಲಿಸಿದೆ

September 8, 2021

ಮೈಸೂರು, ಸೆ.7(ಆರ್‍ಕೆ)- ಮಹಾಮಾರಿ ಕೊರೊನಾ ಸೋಂಕು ಕಳೆದ ಒಂದೂ ವರೆ ವರ್ಷದಿಂದ ನಮಗೆ ಮಾನವೀಯ ತೆಯ ಪಾಠ ಕಲಿಸಿದೆ ಎಂದು ನವದೆಹ ಲಿಯ ಸಿಎಸ್‍ಐಆರ್ ಮಹಾ ನಿರ್ದೇಶಕ ಡಾ. ಶೇಖರ್ ಸಿ. ಮಂಡೆ ತಿಳಿಸಿದ್ದಾರೆ.

ಕ್ರಾಫರ್ಡ್ ಭವನದಲ್ಲಿ ಇಂದು ನಡೆದ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವದಲ್ಲಿ, ಅವರು ಘಟಿಕೋತ್ಸವ ಭಾಷಣ ಮಾಡುತ್ತ, ಈ ಮಹಾಮಾರಿ ಪ್ರತಿಯೊಬ್ಬರಿಗೂ ಸವಾಲಿನ ಸನ್ನಿವೇಶ ಒಡ್ಡಿದೆ. ಜಗತ್ತು ಲಾಕ್‍ಡೌನ್ ಆದಾಗ ವೈದ್ಯರು, ಆರೋಗ್ಯ ಸಿಬ್ಬಂದಿ, ಇತರೆ ಆರೋಗ್ಯ ಸೇವೆ ಪೂರೈಸುವವರು, ಅಧಿಕಾರಿ ವರ್ಗ, ಸಮಾಜ ಸೇವಕರೆಲ್ಲರೂ ತಮ್ಮ ಯೋಗಕ್ಷೇಮವನ್ನೂ ಬದಿಗಿಟ್ಟು ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಿ ಮಾನವೀಯ ಮೌಲ್ಯ ಪ್ರದರ್ಶಿಸಿ ದ್ದಾರೆ. ಕೋವಿಡ್ ಸಂಕಷ್ಟ ಪರಿಸ್ಥಿತಿ ನಿವಾ ರಣೆಗೆ ಕಾಯಾ-ವಾಚಾ-ಮನಸಾ ಶ್ರಮಿಸಿದ ವಿಜ್ಞಾನಿಗಳು, ಸಂಶೋಧಕರು ಸೇರಿದಂತೆ ಎಲ್ಲರಿಗೂ ಹೃದಯಾಂತರಾಳದ ಕೃತಜ್ಞತೆ ಸಲ್ಲಿಸಬೇಕು. ಶಿಕ್ಷಣ ಕ್ಷೇತ್ರದ ಮೇಲೂ ಮಹಾಮಾರಿ ತೀವ್ರ ಪ್ರಭಾವ ಬೀರಿತು. ಆಗ ಮುಚ್ಚಿದ ಕೆಲ ಶಿಕ್ಷಣ ಸಂಸ್ಥೆಗಳು ಇನ್ನೂ ಬಾಗಿಲು ತೆರೆಯಲಾಗಿಲ್ಲ. ಬೋಧನೆ ಮತ್ತು ಕಲಿಕೆಯನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಕೊಂಡೊಯ್ದ ಶ್ರೇಯಸ್ಸು ಶಿಕ್ಷಣ ವಲಯಕ್ಕೆ ಸಲ್ಲಬೇಕು ಎಂದು ಅವರು ನುಡಿದರು.

ಒಂದೂವರೆ ವರ್ಷದಿಂದ ಕೋವಿಡ್ ನಿಮ್ಮ ಶೈಕ್ಷಣಿಕ ಸಾಧನೆಯನ್ನು ತಗ್ಗಿಸಿರ ಬಹುದು. ಆದರೆ ನಿಮ್ಮ ತಾಳ್ಮೆ, ಸಮಚಿತ್ತ, ದೃಢತೆ ಅಸದೃಶ. ಮೈವಿವಿ ಇದಕ್ಕೂ ಮೊದಲೇ ಆನ್‍ಲೈನ್ ಕಲಿಕೆ ಆರಂಭಿಸಿತ್ತು. ಆನ್‍ಲೈನ್ ಇರಲಿ, ಭೌತಿಕ ತರಗತಿ ಇರಲಿ ವಿದ್ಯಾರ್ಥಿಗಳು-ಬೋಧಕರು ತೊಡಗಿಸಿಕೊಂಡಿರುವುದು ವಿಸ್ಮಯಕರ ಅನುಭವವೇ ಸರಿ ಎಂದು ಮಂಡೆ ಶ್ಲಾಘಿಸಿದರು. ಸೆ. 5ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹುಟ್ಟುಹಬ್ಬದಂದು ಶಿಕ್ಷಕರ ದಿನ ಆಚರಿಸಿದ್ದೇವೆ. ರಾಯಭಾರಿಯಾಗಿ, ವಿದ್ವಾಂಸರಾಗಿ, ರಾಷ್ಟ್ರಪತಿಗಳಾಗಿ, ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಉತ್ತಮ ಶಿಕ್ಷಕರಾಗಿ ಅವರು ಮಾದರಿ ಎಂದರು.

ಅನೇಕ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸುವುದರಲ್ಲಿ ನಿಪುಣರಾಗಿದ್ದಾರೆ. ತಂತ್ರಜ್ಞಾನ ಬೆಂಬಲಿತ ಕಲಿಕೆಯನ್ನು ನಿರಾಯಾಸವಾಗಿ ಸ್ವೀಕರಿಸುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ನೀತಿ-2020ಯಲ್ಲಿ ವರ್ಚುಯಲ್ ಪ್ರಯೋಗ ಶಾಲೆ, ಆನ್‍ಲೈನ್ ಪರೀಕ್ಷೆಗಳನ್ನು ಸ್ವಾಗತಿಸುತ್ತಿರುವುದು ಮೆಚ್ಚುವಂತಹದು ಎಂದು ಪ್ರಶಂಸಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಿರುವಾಗಲೂ ಮಾನವೀಯತೆಯತ್ತ ಗಮನ ಹರಿಸುತ್ತಿರುವುದಕ್ಕೆ ನಮ್ಮಲ್ಲಿರುವ ಕರುಣೆ ಗುಣವೇ ಕಾರಣ ಎಂದ ಅವರು, ಗಾಂಧೀಜಿ ಹೇಳಿದ್ದ ‘ಮಾನವೀಯತೆಯ ದೊಡ್ಡತನ ಇರುವುದು ಮನುಷ್ಯತ್ವದಲ್ಲಲ್ಲ, ಮಾನವೀಯತೆಯಲ್ಲಿ’ ಎಂಬ ಮಾತನ್ನು ಇದೇ ವೇಳೆ ಸ್ಮರಿಸಿದರು.

ನೀವು ಎಷ್ಟೇ ದೊಡ್ಡ ವ್ಯಕ್ತಿಗಳಾಗಿ, ಯಾವುದೇ ಹುದ್ದೆ ಅಲಂಕರಿಸಿ, ಆದರೆ ಮಾನವೀಯತೆ ಯನ್ನು ಪ್ರದರ್ಶಿಸಿ. ಕೋವಿಡ್ ಮಹಾಮಾರಿಯು ಜಾಗತಿಕ ಸಮುದಾಯದ ಮಾನವೀಯ ಮುಖವನ್ನು ಅನಾವರಣಗೊಳಿಸಿದೆ ಎಂದ ಮಂಡೆ, ನಿಮ್ಮ ಹೃದಯಗಳಲ್ಲಿ ಅನುಕಂಪಕ್ಕೆ ಸ್ಥಾನವಿರಲಿ. ಮಾನವ ಸ್ಪರ್ಶ ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಪದವಿ ಪಡೆದು ಹೊರಹೋಗುತ್ತಿರುವ ನೀವು ಇತಿಹಾಸ ಪ್ರಸಿದ್ಧ ಮೈಸೂರು ವಿಶ್ವವಿದ್ಯಾ ನಿಲಯದ ವಿದ್ಯಾರ್ಥಿ ಎಂದು ಹೆಮ್ಮೆಯಿಂದ ಹೇಳುವ ಜೊತೆಗೆ ಸಂಸ್ಥೆ ಅಂಕುರಾರ್ಪಣೆ ಮಾಡಿರುವ ಶ್ರೇಷ್ಠ ಮಟ್ಟದ ಮೌಲ್ಯವನ್ನು ಸದಾಕಾಲ ಎತ್ತಿ ಹಿಡಿಯುವಿರೆಂದು ನಂಬಿದ್ದೇನೆ. ವಿಶ್ವವಿದ್ಯಾನಿಲಯವು ಜಾಗತಿಕ ಮಟ್ಟದಲ್ಲಿ ಬೆಳೆಯಲು ಶ್ರಮಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಅವರಂತಹ ಸರ್ವ ಶ್ರೇಷ್ಠ ವ್ಯಕ್ತಿಗಳ ನಿರೀಕ್ಷೆಗೆ ಅನುಗುಣವಾಗಿ ಬಾಳಿ ನಿಮ್ಮ ಬದುಕನ್ನು ಸಾರ್ಥಕಗೊಳಿಸಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

Translate »