ಸೆ.13ಕ್ಕೆ ಗಜಪಯಣ
ಮೈಸೂರು

ಸೆ.13ಕ್ಕೆ ಗಜಪಯಣ

September 9, 2021

ಮೈಸೂರು, ಸೆ.8(ಎಂಟಿವೈ)- ಈ ಬಾರಿ ದಸರಾ ಮಹೋ ತ್ಸವವನ್ನು ಸರಳವಾಗಿ ಆಚರಿಸಲಿದ್ದು, ಹುಣಸೂರು ತಾಲೂಕು ವೀರನಹೊಸಹಳ್ಳಿ ಗೇಟ್ ಬಳಿ ಸೆ.13ರಂದು ಬೆಳಗ್ಗೆ 9.30ಕ್ಕೆ ಗಜಪಯಣಕ್ಕೆ ಚಾಲನೆ ನೀಡುವ ಮೂಲಕ 8 ಆನೆಗಳ ತಂಡ ವನ್ನು ಬರಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸರಳ ದಸರಾ ಕಾರಣದಿಂದಾಗಿ ಕಳೆದ ಬಾರಿ 5 ಆನೆಗಳ ನ್ನಷ್ಟೇ ಕರೆತರಲಾಗಿತ್ತು. ಆದರೆ ಈ ಬಾರಿ ಅದರ ಸಂಖ್ಯೆಯನ್ನು 8ಕ್ಕೆ ಹೆಚ್ಚಿಸಲಾಗಿದೆ. ಸೆ.13ರಂದು ವೀರನಹೊಸಹಳ್ಳಿಯಿಂದ ಮೈಸೂರಿಗೆ ಆಗಮಿಸುವ ಗಜಪಡೆಯನ್ನು ಸೆ.16ರಂದು ಬೆಳಗ್ಗೆ 8.36ರಿಂದ 9.11ರೊಳಗಿನ ಶುಭ ವೇಳೆಯಲ್ಲಿ ಅರಮನೆ ಆವರಣಕ್ಕೆ ಬರಮಾಡಿಕೊಳ್ಳಲಾಗುವುದು. ದಸರೆ ಮುಗಿದ ನಂತರ ಅ.17 ರಂದು ಗಜಪಡೆಯನ್ನು ಆಯಾ ಶಿಬಿರಗಳಿಗೆ ಬೀಳ್ಕೊಡಲಾಗು ವುದು. ಗಜಪಡೆಯ ನಿರ್ವಹಣೆಗಾಗಿ 50 ಲಕ್ಷ ರೂ. ಅನುದಾನಕ್ಕೆ ಅರಣ್ಯ ಇಲಾಖೆ ಬೇಡಿಕೆ ಸಲ್ಲಿಸಿದೆ. ಕಳೆದ ವರ್ಷದ ಬಾಕಿ 23 ಲಕ್ಷ ರೂ. ಜೊತೆಗೆ ಪ್ರಸಕ್ತ ವರ್ಷದ ಅನುದಾನದ ಬಿಡುಗಡೆಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.

ಅ.7ರಂದು ದಸರಾ ಉದ್ಘಾಟನೆ: ನಾಡಹಬ್ಬ ದಸರಾ ಮಹೋ ತ್ಸವವನ್ನು ಅಕ್ಟೋಬರ್ 7ರಂದು ಬೆಳಗ್ಗೆ 8.15ರಿಂದ 8.45ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಲಾಗು ತ್ತದೆ. ದಸರಾ ಉದ್ಘಾಟಕರ ಆಯ್ಕೆ ಜವಾಬ್ದಾರಿಯನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಲಾಗಿದೆ. ಜಂಬೂಸವಾರಿ ದಿನವಾದ ಅಕ್ಟೋಬರ್ 15ರಂದು ಸಂಜೆ 4.36ರಿಂದ 4.46ರೊಳಗೆ ನಂದಿಪೂಜೆ ನಂತರ ಸಂಜೆ 5ರಿಂದ 5.36ರೊಳಗೆ ಅಂಬಾರಿಗೆ ಪುಷ್ಪಾರ್ಚನೆ ನಡೆಯಲಿದೆ ಎಂದು ಸಚಿವರು ಹೇಳಿದರು.

100 ಕಿ.ಮೀ. ದೀಪಾಲಂಕಾರ: ಕಳೆದ ವರ್ಷ ದಸರೆಯಲ್ಲಿ ಮೈಸೂರು ನಗರದ 60 ಕಿ.ಮೀ. ರಸ್ತೆಗೆ ದೀಪಾಲಂಕಾರ ಮಾಡಲಾಗಿತ್ತು. ಆದರೆ ಈ ಬಾರಿ 150 ರಸ್ತೆ, 77 ವೃತ್ತ ಸೇರಿದಂತೆ ಒಟ್ಟು 100 ಕಿ.ಮೀ.ವರೆಗೆ ಆಕರ್ಷಕ ದೀಪಾಲಂಕಾರ ಮಾಡಲು ನಿರ್ಧರಿಸಿದ್ದು, ಅಕ್ಟೋಬರ್ 7ರಿಂದ 15ರವರೆಗೆ ಪ್ರತಿದಿನ ಸಂಜೆ 7ರಿಂದ ರಾತ್ರಿ 9.30ರವರೆಗೆ ದೀಪಾಲಂಕಾರವಿರುತ್ತದೆ ಎಂದು ಅವರು ಹೇಳಿದರು.

ಸಾಂಸ್ಕøತಿಕ ಕಾರ್ಯಕ್ರಮ: ನವರಾತ್ರಿ ವೇಳೆ ಅರಮನೆ ಆವರಣದಲ್ಲಿ ಮಾತ್ರ 7 ದಿನಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಕಲಾವಿದರಿಗೆ ಆದ್ಯತೆ ನೀಡಲಾಗುತ್ತಿದ್ದು, ಇದರ ಜೊತೆಗೆ ನಂಜನಗೂಡು ದೇವಾಲಯದ ಆವರಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅದನ್ನು ವರ್ಚುಯಲ್ ಮೂಲಕ ವೀಕ್ಷಿಸಬಹುದಾಗಿದೆ ಎಂದ ಅವರು, ಈ ತಿಂಗಳ ಅಂತ್ಯದವರೆಗೆ ಕೋವಿಡ್ ಪರಿಸ್ಥಿತಿ ಅವಲೋಕಿಸಿ, ಸೋಂಕಿನಲ್ಲಿ ಹೆಚ್ಚಳ ಕಂಡುಬರದಿದ್ದರೆ ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮವನ್ನು ಹೆಚ್ಚಿನ ಜನರು ವೀಕ್ಷಿಸಲು ಅವಕಾಶ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದರು. ಕಳೆದ ವರ್ಷ ಜಂಬೂಸವಾರಿ ಮೆರವಣಿಗೆಯಲ್ಲಿ 2 ಸ್ತಬ್ದಚಿತ್ರಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಸಂದಿರುವ ಹಿನ್ನೆಲೆಯಲ್ಲಿ ದೇಶಭಕ್ತಿ ಸಾರುವ ಸ್ತಬ್ದಚಿತ್ರದ ಜೊತೆ ಕೊರೊನಾ ಕುರಿತು ಜಾಗೃತಿ ಮೂಡಿಸುವ ಹಾಗೂ ಪೊಲೀಸ್ ಬ್ಯಾಂಡ್ ವಾಹನ ಸ್ತಬ್ದಚಿತ್ರ ಸೇರಿ 3 ಸ್ತಬ್ದಚಿತ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಉತ್ಸವ ಮೂರ್ತಿ ಮೆರವಣಿಗೆ: ಜಂಬೂಸವಾರಿ ದಿನ ಚಿನ್ನದ ಅಂಬಾರಿಯಲ್ಲಿ ಕಂಗೊಳಿ ಸುವ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಇದೇ ಮೊದಲ ಬಾರಿಗೆ ಚಾಮುಂಡಿ ಬೆಟ್ಟದಿಂದ ಮೈಸೂರು ಅರಮನೆಗೆ ಮೆರವಣಿಗೆ ಮೂಲಕ ತರಲು ನಿರ್ಧರಿಸಲಾಗಿದೆ ಜಂಬೂಸವಾರಿ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಸೀಮಿತ ಗೊಳಿಸಿರುವುದರಿಂದ ಹೆಚ್ಚಿನ ಸಾರ್ವಜನಿಕರು ಉತ್ಸವ ಮೂರ್ತಿಯನ್ನು ವೀಕ್ಷಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಉತ್ಸವಮೂರ್ತಿಯ ಮೆರವಣಿಗೆಯುದ್ದಕ್ಕೂ ಬರುವ ಬಡಾವಣೆ ನಿವಾಸಿಗಳು ಹಾಗೂ ಸಾರ್ವಜನಿಕರು ದೇವಿ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು. ಇಂದಿನ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ನಿರಂಜನ್‍ಕುಮಾರ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಡಿಸಿಎಫ್ ವಿ.ಕರಿಕಾಳನ್, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಓ ಎ.ಎಂ.ಯೋಗೇಶ್, ಮುಡಾ ಆಯುಕ್ತ ನಟೇಶ್, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.

Translate »