ಮಡಿಕೇರಿ,ಮಾ.16-ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತ ಯುದ್ದೋಪಾದಿಯಾಗಿ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮುಖ್ಯವಾಗಿ ಕೊರೊನಾ ಸೋಂಕು ಬಾಧಿಸಿರುವ ದೇಶಗಳಿಂದ ಜಿಲ್ಲೆಗೆ ಬಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ.
ಇಂದಿನವರೆಗೆ ಮಡಿಕೇರಿ ತಾಲೂಕಿನಲ್ಲಿ 56, ವಿರಾಜಪೇಟೆ ತಾಲೂಕಿನಲ್ಲಿ 31 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 44 ಜನರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 128 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರ ಮನೆಗಳಲ್ಲೇ ಸಂಪರ್ಕ ತಡೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದ ಈ ಸೂಚನೆಯನ್ನು ಉಲಂ್ಲಘಿಸಿದ ಓರ್ವ ವ್ಯಕ್ತಿಗೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
ವಿದೇಶಗಳಿಂದ ಜಿಲ್ಲೆಗೆ ಬಂದ ವ್ಯಕ್ತಿಗಳ ಪೈಕಿ ಒಟ್ಟು 3 ಮಂದಿಗೆ ಸೋಂಕು ತಗುಲಿರುವ ಶಂಕೆಗಳಿದ್ದು ಅವರೊಂದಿಗೆ ಇದ್ದ ಇತರ 3 ಮಂದಿಯಲ್ಲಿ ಯಾವುದೇ ಸೋಂಕಿನ ಲಕ್ಷಣಗಳಿಲ್ಲದ ಹಿನ್ನಲೆಯಲ್ಲಿ ಅವರ ಆರೋಗ್ಯ ತಪಾಸಣೆ ಮಾಡಿ ಮನೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಕೊಡಗು ಜಿಲ್ಲೆ ನೆರೆಯ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಹಿನ್ನಲೆಯಲ್ಲಿ ಮಾ.17ರಿಂದ ಜಿಲ್ಲೆಯ ಗಡಿ ಭಾಗಗಳಾದ ಕರಿಕೆ, ಕುಟ್ಟ, ಮಾಕುಟ್ಟ ಪ್ರದೇಶಗಳಲ್ಲಿ ಕೇರಳ ರಾಜ್ಯದಿಂದ ಜಿಲ್ಲೆಗೆ ಬರುವವರನ್ನು ದಿನದ 24 ಗಂಟೆಗಳ ಕಾಲ ತಪಾಸಣೆ ನಡೆಸಲು ಆರೋಗ್ಯ ಸಿಬ್ಬಂದಿಗಳನ್ನು ಕೂಡ ಜಿಲ್ಲಾಡಳಿತ ನೇಮಿಸು ತ್ತಿದೆ. ಈವರೆಗೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿರುವ 3 ಮಂದಿಯನ್ನು ಮಾತ್ರವೇ ಜಿಲ್ಲಾಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿಟ್ಟು ಉಪಚರಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.