ಕೊರೊನಾ ಹೆಚ್ಚಳ; ತಿಮ್ಮನಕೊಪ್ಪಲು ಸೀಲ್‍ಡೌನ್
ಮಂಡ್ಯ

ಕೊರೊನಾ ಹೆಚ್ಚಳ; ತಿಮ್ಮನಕೊಪ್ಪಲು ಸೀಲ್‍ಡೌನ್

August 17, 2021

ಪಾಂಡವಪುರರ, ಆ.16- ತಾಲೂಕಿನ ತಿಮ್ಮನಕೊಪ್ಪಲು ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದ್ದು, ಗ್ರಾಮ ವನ್ನು ಸೀಲ್‍ಡೌನ್ ಮಾಡಿದ್ದು, ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ವೈದ್ಯರು ಹಾಗೂ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ದೊಡ್ಡಬ್ಯಾಡರಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ತಿಮ್ಮನಕೊಪ್ಪಲು ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಅಂತ್ಯಸಂಸ್ಕಾರಕ್ಕೆ ಸಾಕಷ್ಟು ಮಂದಿ ಗ್ರಾಮಸ್ಥರು ಸೇರಿದ್ದರು. ಅಂತ್ಯಸಾಂಸ್ಕಾರದ ಪಾಲ್ಗೊಂಡಿದ್ದ ಕೆಲವರಿಗೆ ಕೋವಿಡ್ ಇದ್ದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸುಮಾರು 25 ಮಂದಿಗೆ ಕೋವಿಡ್ ಕಂಡು ಬಂದಿದೆ. ಇದರಿಂದಾಗಿ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ.

ವಿಷಯ ತಿಳಿದ ಶಾಸಕ ಸಿ.ಎಸ್. ಪುಟ್ಟರಾಜು, ತಹಶೀಲ್ದಾರ್ ಪ್ರಮೋದ್ ಪಾಟೀಲ್ ಹಾಗೂ ಪಾಂಡವಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಅವರಿಗೆ ಸೂಚಿಸಿ, ತಿಮ್ಮನಕೊಪ್ಪಲು ಗ್ರಾಮ ದಲ್ಲಿ ಎಲ್ಲರಿಗೂ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿ, ಮುಂಜಾಗ್ರತ ಕ್ರಮ ಜರುಗಿಸುವಂತೆ ಸೂಚಿಸಿದ್ದರು.

ಗ್ರಾಮದ ಸರಕಾರಿ ಶಾಲೆಯಲ್ಲಿ ಗ್ರಾಮದ ಎಲ್ಲರಿಗೂ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ತಿಮ್ಮನಕೊಪ್ಪಲು ಗ್ರಾಮದಲ್ಲಿ ಒಟ್ಟು 650ಕ್ಕೂ ಹೆಚ್ಚು ಜನ ಸಂಖ್ಯೆ ಹೊಂದಿದ್ದು, ಎರಡು ದಿನದಲ್ಲಿ 25 ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿ ಕೊಂಡಿದೆ. ಈವರೆಗೆ ಗ್ರಾಮದ ಒಟ್ಟು 319 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಇನ್ನುಳಿದವರಿಗೆ ಗ್ರಾಮದ ಸರಕಾರಿ ಶಾಲೆ ಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಮಕ್ಕಳು, ಮಹಿಳೆಯರೂ ಸೇರಿದಂತೆ ಎಲ್ಲರೂ ಕಡ್ಡಾಯ ವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಮೋದ್ ಪಾಟೀಲ್, ಆರೋಗ್ಯಾಧಿಕಾರಿ ಅರವಿಂದ್, ಗ್ರಾಪಂ ಉಪಾಧ್ಯಕ್ಷ ಶಂಕರ್, ಸದಸ್ಯರಾದ ನಿಂಗರಾಜು, ಪ್ರಸನ್ನ, ಪಿಡಿಓ ಬಸವರಾಜು, ಮಾಜಿ ಅಧ್ಯಕ್ಷ ರವಿ, ಚಿಕ್ಕಬ್ಯಾಡರಹಳ್ಳಿ ಡೇರಿ ಅಧ್ಯಕ್ಷ ಸಿ.ಎನ್.ಚಂದನ್, ಚನ್ನೇಗೌಡ, ಚೇತನ್ ಸೇರಿದಂತೆ ಹಲವರು ಇದ್ದರು.

Translate »