ಮೈಸೂರು,ನ.11(ಪಿಎಂ)- ರಾಜ್ಯ ದಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟಿ ರೇಟ್ ಇಳಿಮುಖವಾಗಿದೆ. ಕಳೆದ 15 ದಿನಗಳ ಹಿಂದೆ ಕೆಲ ಜಿಲ್ಲೆಗಳಲ್ಲಿ ಶೇ.12 ರಿಂದ ಶೇ.19ರಷ್ಟು ಪಾಸಿಟಿವಿಟಿ ರೇಟ್ ಇತ್ತು. ಆದರೆ ಮಂಗಳವಾರಕ್ಕೆ ಇದು ಶೇ.2ರಷ್ಟಕ್ಕೆ ಇಳಿಕೆ ಕಂಡಿದೆ. ಸೋಂಕಿನ ಪ್ರಮಾಣ ಹೆಚ್ಚಳವಾಗದಂತೆ ನಿಯಂ ತ್ರಣ ಕಾಯ್ದುಕೊಳ್ಳುವುದು ಮುಖ್ಯ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪ ಲಿನ ಸುತ್ತೂರು ಮಠದ ಆವರಣದಲ್ಲಿ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ದೇಶವೂ ಸೇರಿದಂತೆ ಪ್ರಪಂಚದ ವಿವಿಧ ಭಾಗಗಳಲ್ಲಿ ಕೊರೊನಾ ಲಸಿಕೆಗೆ ಸಂಬಂಧಿತ ಸಂಶೋಧನೆ ಪ್ರಗತಿ ಹಂತದಲ್ಲಿದೆ. ಔಷಧ ವಿಜ್ಞಾನದ ಇತಿಹಾಸ ದಲ್ಲಿ ಕೊರೊನಾಗೇ ಶೀಘ್ರದಲ್ಲೇ ಲಭ್ಯ ವಾಗುವ ಆಶಾಭಾವನೆ ಇದೆ ಎಂದರು.
ಚುನಾವಣಾ ರ್ಯಾಲಿಗಳಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಬಗ್ಗೆ ಪ್ರತಿಕ್ರಿಯಿಸಿ, ಕೊರೊನಾ ನಿಯಂತ್ರಣ ಸಂಬಂಧ ಈಗಾಗಲೇ ಮಾರ್ಗಸೂಚಿ ಇದೆ. ಈ ಬಗ್ಗೆ ನಾನು ಎಲ್ಲರಿಗೂ ಹೇಳು ತ್ತಲೇ ಇದ್ದೇನೆ. ಪ್ರತಿಯೊಬ್ಬರಿಗೂ ನಾಗರಿಕ ಪ್ರಜ್ಞೆ ಹಾಗೂ ನಾಗರಿಕ ಜವಾಬ್ದಾರಿ ಇರ ಬೇಕಿರುವುದು ಮುಖ್ಯ. ಮಾರ್ಗಸೂಚಿ ನಮಗೂ ಅನ್ವಯ ಆಗುತ್ತದೆ. ಈ ವಿಚಾರ ದಲ್ಲಿ ರಾಜಕೀಯ ಪಕ್ಷಗಳು ಹಾಗೂ ನಾಯಕರಿಗೆ ಸಾಮೂಹಿಕ ಜವಾಬ್ದಾರಿ ಇರಬೇಕು.
ಅದನ್ನು ಮರೆತಿರುವುದು ದುರದೃಷ್ಟ ಎಂದು ತಿಳಿಸಿದರು.
ಉಸಾಬರಿ ನಮಗೆ-ನಿಮಗೆ ಏಕೆ: ಮುಖ್ಯಮಂತ್ರಿಗಳು ನಿನ್ನೆಯಷ್ಟೇ ಸಂಪುಟ ಪುನ ರ್ರಚನೆ ಬಗ್ಗೆ ಹೇಳಿದ್ದಾರೆ. ಈ ಸಂಬಂಧ ದೆಹಲಿಗೂ ಭೇಟಿ ನೀಡುವುದನ್ನೂ ಹೇಳಿದ್ದಾರೆ. ಮುಖ್ಯಮಂತ್ರಿಗಳೇ ಅಗ್ರ ನಾಯಕರು. ಯಾರಿಗೆ ಯಾವ ಸ್ಥಾನ ಕೊಡಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ. ಈ ಉಸಾಬರಿ ನಮಗೆ-ನಿಮಗೆ ಏಕೆ? ಎಲ್ಲಾ ಒಳ್ಳೆಯದು ಮಾಡುತ್ತಾರೆ. ಸುಖಾಂತ್ಯ ಆಗುತ್ತದೆ ಎಂದು ಪ್ರತಿಕ್ರಿಯಿಸಿದರು. ಉಪಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರ ಅಧಿಕಾರದಲ್ಲಿದ್ದಾಗ ಕೆಲ ಉಪಚುನಾವಣೆಯಲ್ಲಿ ಗೆದ್ದಿದ್ದಾರೆ. ಆ ಅನುಭವ ಹೇಳುತ್ತಿರಬೇಕು ಎಂದು ತಿರುಗೇಟು ನೀಡಿದರು. ಕೇಡರ್ ಬೇಸ್ ಪಕ್ಷ ಆಗಿರುವ ಬಿಜೆಪಿಗೆ ಪ್ರತಿ ಚುನಾವಣೆಯೂ ಪ್ರತಿಷ್ಠೆ ಹಾಗೂ ಸವಾಲು. ನಾವು ಹೇಳಿದಂತೆ ನಾಲ್ಕು ಎಂಎಲ್‍ಸಿ ಸ್ಥಾನ ಹಾಗೂ ಎರಡೂ ಕ್ಷೇತ್ರದ ಉಪಚುನಾವಣೆ ಸೇರಿದಂತೆ ಆರನ್ನೂ ಗೆದ್ದಿದ್ದೇವೆ ಎಂದರು. 50 ಸಾವಿರ ಮತಗಳ ಅಂತರದಲ್ಲಿ ಆರ್‍ಆರ್ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲ್ಲುತ್ತಾರೆ ಎಂದು ಮತದಾನ ಪೂರ್ವದಲ್ಲೇ ಹೇಳಿದ್ದೆ. ಆರ್‍ಆರ್ ನಗರ ಕ್ಷೇತ್ರದ ಗ್ರೌಂಡ್ ರಿಯಾಲಿಟಿ ಕಾಂಗ್ರೆಸ್‍ನವರಿಗೆ ಅರ್ಥವಾಗಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ .ಶಿವಕುಮಾರ್ ಮಾತ್ರವಲ್ಲ, ಕಾಂಗ್ರೆಸ್‍ನ ಎಲ್ಲರೂ ವಿಫಲರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಅವರ ಸೋದರ ಇಬ್ಬರು ಈ ಚುನಾವಣೆಗಾಗಿ ಶ್ರಮಿಸಿದ್ದಾರೆ. ಡಿ.ಕೆ.ಶಿವಕುಮಾರ್ ಒಬ್ಬರನ್ನೇ ಸೋಲಿಗೆ ಹೊಣೆ ಮಾಡುವುದು ಸರಿಯಲ್ಲ ಎಂದು ಹೇಳಿದರು.