ಬೆಂಗಳೂರು, ನ.11(ಕೆಎಂಶಿ)- ದೀಪಾವಳಿ ಕಳೆಯುತ್ತಿದ್ದಂತೆ ತಮ್ಮ ಮಂತ್ರಿಮಂಡಲವನ್ನು ವಿಸ್ತರಿಸಿ ಹೊಸದಾಗಿ ಆರು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ.
ಒಂದು ವೇಳೆ ಪಕ್ಷದ ವರಿಷ್ಠರ ಅನುಮತಿ ದೊರೆತರೆ ನವೆಂಬರ್ 16ರ ದೀಪಾವಳಿ ದಿನದಂದು ಇಲ್ಲವೇ 18ರಂದು ಸಂಪುಟ ವಿಸ್ತರಣೆ ಮಾಡಲು ತೀರ್ಮಾನಿಸಿದ್ದಾರೆ.
ಪಕ್ಷವನ್ನು ಅಧಿಕಾರಕ್ಕೆ ತರಲು ಕಾರಣ ರಾದ ವಲಸಿಗ ಶಾಸಕರು ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರೇ ಸಂಪುಟ ವಿಸ್ತರಣೆ ದಿನಾಂಕವನ್ನು ಹೇಳಿದ್ದಾರೆ. ಕೇವಲ ವಿಸ್ತರಣೆಯಾದರೆ ಕಾಂಗ್ರೆಸ್ ನಿಂದ ಬಂದಿರುವ ಎಂಟಿಬಿ ನಾಗರಾಜ್, ಆರ್.ಶಂಕರ್, ಮುನಿರತ್ನ ನಾಯ್ಡು, ಪಕ್ಷದ ಹಿರಿಯ ಶಾಸಕ ಉಮೇಶ್ ಕತ್ತಿ, ಸಿ.ಪಿ. ಯೋಗೇಶ್ವರ್ ಅಲ್ಲದೆ, ಕರಾವಳಿ ತೀರದ ಒಬ್ಬರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಆಡಳಿತ ದೃಷ್ಟಿಯಿಂದ ಸಂಪುಟ ಪುನರ್‍ರಚನೆ ಮಾಡಬೇಕೆಂದಿದ್ದೇನೆ. ಇದಕ್ಕೆ ವರಿಷ್ಠರ ಅನುಮತಿ ಅಗತ್ಯವಿದೆ. ಅನುಮತಿ ದೊರೆತ ನಂತರ ರಾಜ್ಯದ ಮುಖಂಡರೊಂದಿಗೆ ಚರ್ಚಿಸಿ ಕೆಲವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷದ ಮೂಲ ಶಾಸಕರಿಗೆ ಮಂತ್ರಿಮಂಡಲದಲ್ಲಿ ಅವಕಾಶ ಮಾಡಿಕೊಡಬೇಕೆಂದಿದ್ದೇನೆ. ಆದರೆ, ಇದು ಒಂದು ದೊಡ್ಡ ಕಸರತ್ತಾಗುತ್ತದೆ. ವರಿಷ್ಠರು ಅನುಮತಿ ನೀಡಿದರೆ ಇದನ್ನೂ ಮಾಡಿಯೇ ಬಿಡುತ್ತೇನೆ. ಇಲ್ಲದಿದ್ದರೆ, ಪಕ್ಷವನ್ನು ಅಧಿಕಾರಕ್ಕೆ ತರಲು ಕಾರಣರಾದವರಿಗೆ ಈ ಹಿಂದೆ ನೀಡಿದ ಭರವಸೆಯಂತೆ ಅವರುಗಳನ್ನು ಮೊದಲು ಮಂತ್ರಿ ಮಾಡುತ್ತೇನೆ ಎಂದಿದ್ದಾರೆ.
ಉಪ ಚುನಾವಣೆಯಲ್ಲಿ ಪಕ್ಷ ಎರಡು ಸ್ಥಾನಗಳಲ್ಲದೆ, ಪರಿಷತ್ತಿನ 4 ಕ್ಷೇತ್ರಗಳಲ್ಲೂ ಜಯಭೇರಿ ಭಾರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಗಳು ಮಂತ್ರಿಮಂಡಲ ಪುನರ್‍ರಚನೆ ಮಾಡುವುದಾಗಿ ಹೇಳಿದ್ದರು. ವಿಸ್ತರಣೆ ಮಾಡುವ ಉದ್ದೇಶದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸಂಪರ್ಕಿಸಿರುವ ಮುಖ್ಯಮಂತ್ರಿ ಅವರು, ಭೇಟಿಗೆ ಅವಕಾಶ ನೀಡುವಂತೆ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೂ ಅವ ಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಸಾಧ್ಯ ವಾಗದಿದ್ದರೆ, ಸಂಪುಟ ವಿಸ್ತರಣೆಗೆ ಈ ನಾಯಕರೊಂದಿಗೆ ಚರ್ಚಿಸಿ ತಾವೇ ತಮಗೆ ಅನುಮತಿ ನೀಡಬೇಕೆಂದು ಕೋರಲಿ ದ್ದಾರೆ ಎನ್ನಲಾಗಿದೆ. ನಡ್ಡಾ ಅವರನ್ನು ಸಂಪರ್ಕಿಸಿದ ನಂತರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಜೊತೆಯೂ ಈ ಸಂಬಂಧ ಚರ್ಚೆ ಮಾಡಿದ್ದಲ್ಲದೆ ಅಶೋಕ್ ಗಸ್ತಿ ಅವರ ನಿಧನದಿಂದ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಯಾರನ್ನು ಅಭ್ಯರ್ಥಿ ಮಾಡಬೇಕೆಂಬ ಬಗ್ಗೆಯೂ ಈ ನಾಯಕರು ಚರ್ಚೆ ಮಾಡಿದ್ದಾರೆ. ಮುಖ್ಯ ಮಂತ್ರಿ ಹೇಳಿಕೆ ನೀಡುತ್ತಿದ್ದಂತೆ, ಸಚಿವ ಆಕಾಂಕ್ಷಿಗಳು ನಾ ಮುಂದು.. ತಾ ಮುಂದು.. ಎಂದು ಮಂತ್ರಿಯಾಗಲು ಪೈಪೋಟಿ ನಡೆಸಿದ್ದಾರೆ. ಈ ಮಧ್ಯೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಒಂದಷ್ಟು ವಲಸಿಗರು ಮತ್ತು ಕೆಲವು ಶಾಸಕರು ಸಭೆ ಸೇರಿ ಮುಖ್ಯಮಂತ್ರಿ ಅವರ ಮೇಲೆ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಲು ತೀರ್ಮಾ ನಿಸಿದ್ದಾರೆ. ಕೆಲವು ಶಾಸಕರಂತೂ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ರಮೇಶ್ ಜಾರಕಿಹೊಳಿ ಬೆನ್ನುಹತ್ತಿದ್ದಾರೆ. ಬಿಜೆಪಿ ಸರ್ಕಾರ ಬರಲು ರಮೇಶ್ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದರು, ಇದನ್ನೇ ಬಂಡವಾಳ ಮಾಡಿಕೊಳ್ಳಲು ಕೆಲವರು ಮುಂದಾಗಿದ್ದಾರೆ.