ಮೈಸೂರು, ನ.12(ಪಿಎಂ)- ಡಿಪ್ಲೊಮಾ ಕೋರ್ಸ್ ಸಂಬಂಧ ಹೊಸದಾಗಿ ಸಿದ್ಧಪಡಿಸಿರುವ ಸಿ-20 ಪಠ್ಯಕ್ರಮದಲ್ಲಿ ಕೈಬಿಟ್ಟಿರುವ ಅನ್ವಯಿಕ ವಿಜ್ಞಾನ (ಅಪ್ಲೈಡ್ ಸೈನ್ಸ್) ಕುರಿತ ಪಠ್ಯ ಮತ್ತು ಪ್ರಯೋ ಗಾಲಯ ವಿಷಯಗಳನ್ನು ಕಡ್ಡಾಯವಾಗಿ ಅಳವಡಿಸ ಬೇಕೆಂದು ಉಪಮುಖ್ಯಮಂತ್ರಿಗಳೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್‍ನಾರಾಯಣ್ ಅವರನ್ನು ವಿಧಾನ ಪರಿಷತ್ ಸದಸ್ಯ ಮರಿ ತಿಬ್ಬೇಗೌಡ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಿ-20 ಪಠ್ಯಕ್ರಮದಲ್ಲಿ ಅಪ್ಲೈಡ್ ಸೈನ್ಸ್ ಮತ್ತು ಅಪ್ಲೈಡ್ ಸೈನ್ಸ್ ಲ್ಯಾಬ್ ವಿಷಯಗಳನ್ನು ತೆಗೆದಿರುವ ಹಿನ್ನೆಲೆಯಲ್ಲಿ ಈ ವಿಷಯ ಬೋಧಕರು ಬೀದಿಗೆ ಬೀಳಬೇಕಾಗುತ್ತದೆ. ವಿಜ್ಞಾನ ಮತ್ತು ಗಣಿತ ವಿಷಯಗಳು ತಾಂತ್ರಿಕ ಕೋರ್ಸ್ ಗಳಲ್ಲಿ ಒಂದಕ್ಕೊಂದು ಕೊಂಡಿ ಬೆಸೆಯುತ್ತವೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಕೋರ್ಸ್‍ಗಳಿಗೆ ಅನ್ವಯಿಕ ವಿಜ್ಞಾನ ಅವಶ್ಯಕ ಎಂದು ಪ್ರತಿಪಾದಿಸಿದ್ದಾರೆ. ಇದೇ ಫೆಬ್ರವರಿ ಬಳಿಕ ರಚನೆಗೊಂಡ ಪಠ್ಯಕ್ರಮದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧ ಪಟ್ಟು ಒಟ್ಟು ಮೂರು ವಿಷಯಗಳನ್ನು ಪ್ರಥಮ ಸೆಮಿಸ್ಟರ್‍ನಲ್ಲಿ ಹಾಗೂ ಮೂರು ವಿಷಯಗಳನ್ನು ದ್ವಿತೀಯ ಸೆಮಿ ಸ್ಟರ್‍ನಲ್ಲಿ ಅಳವಡಿಸಿ ಅಂತಿಮಗೊಳಿಸಲಾಗಿತ್ತು. ಆದರೆ ಕೋವಿಡ್-19 ಪರಿಣಾಮ ಸೆಪ್ಟೆಂಬರ್ ತಿಂಗಳಲ್ಲಿ ಆತುರವಾಗಿ ಪಠ್ಯಕ್ರಮ ಬದಲಿಸಲಾಗಿದೆ. ನಮ್ಮ ರಾಜ್ಯದಲ್ಲಿ ಮಾತ್ರ ತಾಂತ್ರಿಕ ಶಿಕ್ಷಣ ಇಲಾಖೆ ವಿಜ್ಞಾನ ವಿಷಯ ಹೊರಗಿಟ್ಟು ಪಠ್ಯಕ್ರಮ ರೂಪಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯಾವುದೇ ಡಿಪ್ಲೊಮಾ ತೇರ್ಗಡೆಯಾದ ಅಭ್ಯರ್ಥಿ ಮುಂದೆ ನೌಕರಿಗಾಗಿ ಅಥವಾ ವಿದ್ಯಾಭ್ಯಾಸಕ್ಕೆ ಅನೇಕ ಸ್ಪರ್ಧಾ ತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗರಿಷ್ಠ ಪ್ರಶ್ನೆಗಳು ವಿಜ್ಞಾನ ಮತ್ತು ಗಣಿತ ವಿಷಯ ಗಳಿಂದ ಬಂದಿರುತ್ತವೆ. ವಿಜ್ಞಾನ ವಿಷಯ ತೆಗೆದರೆ ಬೇರೆ ರಾಜ್ಯದ ಅಭ್ಯರ್ಥಿಗಳಿಗೆ ನಾವೇ ಕೆಂಪು ಹಾಸು ಸ್ವಾಗತ ನೀಡಿ ನಮ್ಮಲ್ಲಿ ಹುದ್ದೆಗಳನ್ನು ಅವರಿಗೆ ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಜರೂರು ಎಂದು ಪರಿಗಣಿಸಿ ಡಿಪ್ಲೊಮಾ ಕೋರ್ಸ್‍ಗಳಲ್ಲಿ ವಿಜ್ಞಾನ ವಿಷಯಗಳನ್ನು ಕಡ್ಡಾಯವಾಗಿ ಅಳವಡಿಸಿ ಮುಂದುವರೆಸುವಂತೆ ಅವರು ಆಗ್ರಹಿಸಿದ್ದಾರೆ.
ಶಿಕ್ಷಣ ಇಲಾಖೆ ಮೈಸೂರು-ಬೆಂಗಳೂರು ಆಯುಕ್ತಾಲಯದ
ಪ್ರೌಢಶಾಲಾ ಮುಖ್ಯ ಶಿಕ್ಷಕರು, ತತ್ಸಮಾನ ವೃಂದದ ಬಿ-ಶ್ರೇಣಿ ಹುದ್ದೆಗೆ ಬಡ್ತಿಗೂ ಒತ್ತಾಯ
ಮೈಸೂರು, ನ.12(ಪಿಎಂ)- ಸಾರ್ವಜನಿಕ ಶಿಕ್ಷಣ ಇಲಾಖೆಯ ಮೈಸೂರು ಮತ್ತು ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಬಿ-ಶ್ರೇಣಿ ಅಧಿಕಾರಿಗಳಿಗೆ 20 ವರ್ಷಗಳ ಕಾಲಮಿತಿ ಬಡ್ತಿ ಮಂಜೂರು ಮಾಡು ವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರನ್ನು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಒತ್ತಾಯಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗುಲ್ಬರ್ಗಾ ಮತ್ತು ಧಾರವಾಡ ಆಯುಕ್ತಾಲಯ ವ್ಯಾಪ್ತಿಯ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಬಿ-ಶ್ರೇಣಿಯ ಅಧಿಕಾರಿಗಳಿಗೆ 20 ವರ್ಷಗಳ ಕಾಲಮಿತಿ ಬಡ್ತಿಯನ್ನು ಸಕಾಲದಲ್ಲಿ ಮಂಜೂರು ಮಾಡಲಾಗುತ್ತಿದೆ. ಆದರೆ ಮೈಸೂರು ಮತ್ತು ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿ ಸದರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವವರು ಮೇ-2019ಕ್ಕೆ 20 ವರ್ಷ ಗಳನ್ನು ಪೂರೈಸಿದ್ದರೂ ಈವರೆವಿಗೆ ಅವರಿಗೆ 20 ವರ್ಷಗಳ ಕಾಲಮಿತಿ ಬಡ್ತಿ ಮಂಜೂರು ಮಾಡದೇ ವಿಳಂಬ ಮಾಡುತ್ತಿರುವುದು ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹಲವು ಪತ್ರಗಳನ್ನು ಬರೆದು, ಇಲಾಖೆಯ ಉನ್ನತಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಅವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸದರಿ ವಿಷಯವನ್ನು ಶೈಕ್ಷಣಿಕ ಹಿತದೃಷ್ಟಿಯಿಂದ ಅತೀ ಜರೂರು ಎಂದು ಪರಿಗಣಿಸಿ, ಬಡ್ತಿ ಮಂಜೂರಾತಿಗೆ ಶೀಘ್ರ ಕ್ರಮ ವಹಿಸಬೇಕು ಎಂದು ಸಚಿವರನ್ನು ಆಗ್ರಹಿಸಿದ್ದಾರೆ.