ಕೊರೊನಾ ತಡೆಗೆ ಸಂಪೂರ್ಣ ಲಾಕ್‍ಡೌನ್ ಅಗತ್ಯ
ಮಂಡ್ಯ

ಕೊರೊನಾ ತಡೆಗೆ ಸಂಪೂರ್ಣ ಲಾಕ್‍ಡೌನ್ ಅಗತ್ಯ

May 6, 2021

ಮಂಡ್ಯ, ಮೇ 5(ಮೋಹನ್‍ರಾಜ್)- ಪ್ರಸ್ತುತ ಸರ್ಕಾರ ನಡೆಸುತ್ತಿರುವ ಲಾಕ್ ಡೌನ್ ನಿಯಮಾವಳಿಗಳಿಂದ ಯಾವುದೇ ಪ್ರಯೋಜನವಿಲ್ಲ. ಕೊರೊನಾ ಸರಪಳಿ ತುಂಡರಿಸಬೇಕಾದರೆ ಸಂಪೂರ್ಣ ಲಾಕ್‍ಡೌನ್ ಆಗಲೇಬೇಕು. ಇಲ್ಲದಿದ್ದರೆ ಬಲು ಕಷ್ಟದ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಜನರ ಜೀವಕ್ಕಿಂತ ಆದಾಯ ಮೂಲಗಳತ್ತಲೇ ಹೆಚ್ಚು ಆದ್ಯತೆ ಯಿದೆ. ಆದರೆ, ಸಂಪೂರ್ಣ ಲಾಕ್‍ಡೌನ್ ಆಗಿದ್ದರೂ ಕಳೆದ ಬಾರಿ ರಾಜ್ಯದ ಜನತೆ ಖಜಾನೆ ತುಂಬಿಸಿರಲಿಲ್ಲವೇ ಎಂದು ಪ್ರಶ್ನಿಸಿದರು.
ನಾನು ಕಳೆದ ಮಾ.15ರಂದೇ ಈ ಸರ್ಕಾರಕ್ಕೆ ಸಲಹೆ ನೀಡಿದ್ದೆ. ಸಂಪೂರ್ಣ ಲಾಕ್‍ಡೌನ್ ಮಾಡಿ ಪ್ರತಿ ಬಡ ಕುಟುಂಬಕ್ಕೆ ಆಹಾರ ವಿತರಿಸಿ, ಅಭಿವೃದ್ಧಿ ಕೆಲಸಗಳನ್ನು ಬಿಟ್ಟು ಮೊದಲು ಜನರ ಜೀವ ಉಳಿಸುವ ಕೆಲಸಕ್ಕೆ ಆದ್ಯತೆ ನೀಡಿ ಎಂದಿದ್ದೆ. ಆದರೆ ನನ್ನ ಸಲಹೆಯನ್ನು ಪರಿಗಣಿಸಲೇ ಇಲ್ಲ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಿಜೆಪಿ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಸಂಪೂರ್ಣ ಎಡವಿದೆ. ಯಾವುದೇ ಪೂರ್ವ ಸಿದ್ಧತೆ ಮಾಡಿ ಕೊಳ್ಳದ ಪರಿಣಾಮವೇ ಚಾಮರಾಜನಗರದಲ್ಲಿ 24 ಮಂದಿ ಬಲಿಯಾಗಲು ಕಾರಣ. ಆದ್ದ ರಿಂದ ಆಗಿಹೋಗಿರುವುದನ್ನು ಬಿಟ್ಟು ಈಗ ಏನಾಗಬೇಕಿದೆ ಅದರತ್ತ ಆದ್ಯತೆ ನೀಡ ಬೇಕೆಂಬುದು ನನ್ನ ಸಲಹೆ. ಸರ್ಕಾರ ಆಕ್ಸಿಜನ್ ಕೊರತೆ ಎಷ್ಟಿದೆ ಎಂದು ಸತ್ಯ ಹೇಳಬೇಕು. ಮುಖ್ಯಮಂತ್ರಿಗಳು ಹುಡುಗಾಟ ಆಡಬಾರದು. ಕಳೆದ ಒಂದು ತಿಂಗಳಿನಿಂದ ಸಂಪುಟದಲ್ಲಿ ಸಹಮತವಿಲ್ಲ. ಹಾಗಾಗಿ ಇವತ್ತು ಒಬ್ಬೊಬ್ಬರಿಗೆ ಒಂದೊಂದು ಹೊಣೆಗಾರಿಕೆ ನೀಡಿದ್ದಾರೆ.

ಸರ್ಕಾರದ ಸಚಿವರು, ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಪದೇ ಪದೆ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸುತ್ತಲೇ ಕಾಲ ಕಳೆದರೆ, ಅವರು ಕೆಲಸ ಮಾಡುವುದು ಯಾವಾಗ? ಮಂಡ್ಯ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ವೈದ್ಯಾಧಿಕಾರಿಗಳು ಯಾರು ಕರೆದರಲ್ಲಿಗೆ ಹೋಗಿ ಸಭೆಯಲ್ಲಿ ಪಾಲ್ಗೊಳ್ಳಬೇಕು. ಹೀಗಾದರೆ ಮಾಹಿತಿ ಕಲೆ ಹಾಕುವು ದರಲ್ಲೇ ಅವರಿಗೆ ಸಮಯ ಹೋಗಿರುತ್ತದೆ. ಇನ್ನು ವೈದ್ಯರಾಗಿ ಕರ್ತವ್ಯ ನಿರ್ವಹಿ ಸುವುದು ಯಾವಾಗ ಎಂಬ ಅಸಮಾ ಧಾನ ಕೇಳಿಬರುತ್ತಿದೆ ಎಂದು ದೂರಿದರು.

ಇವತ್ತು ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂದು ಬೊಬ್ಬೆ ಹೊಡೆ ಯುತ್ತಿರುವ ಬಿಜೆಪಿ ನಾಯಕರಿಗೆ ವಾಸ್ತವಾಂಶ ಏನು ಎಂಬುದು ಗೊತ್ತಿದೆ. ಆದರೂ ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನವಾಗಿ ಬೆಡ್ ಬ್ಲಾಕಿಂಗ್ ದಂಧೆ ವಿಚಾರವನ್ನು ಮುಂದೆ ತಂದಿದ್ದಾರೆ. ಅಸಲಿಗೆ ಈ ಪಕ್ಷದ ನಾಯಕರು ಇವ ರಿಂದ ಲಕ್ಷಾಂತರ ರೂ. ಲಂಚ ಪಡೆದು ಕೊಂಡಿದ್ದರು. ಈಗ ಕೊರೊನಾ ಕಾಲ ಬಂದಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಲ್ಲಿರುವ ಕೆಲವರಿಗೆ ಈಗ ಸುಗ್ಗಿ ಕಾಲ ಬಂದಿದೆ. ಆಗ ಕೊಟ್ಟಿದ್ದನ್ನು ಈಗ ಬಾಚಿಕೊಳ್ಳುತ್ತಿದ್ದಾರಷ್ಟೇ. ಹಾಗಾಗಿ ಈ ಭ್ರಷ್ಟಾಚಾರಕ್ಕೆ ಸರ್ಕಾರದವರೇ ಹೊಣೆ ಎಂದು ಆರೋಪಿಸಿದರು.
ಲಾಕ್‍ಡೌನ್ ವಿಚಾರದಲ್ಲಾಗಲಿ, ಆಸ್ಪತ್ರೆ ಗಳ ಬೆಡ್, ಆಕ್ಸಿಜನ್, ವೆಂಟಿ ಲೇಟರ್, ವ್ಯಾಕ್ಸಿನ್ ಈ ವಿಚಾರಗಳಲ್ಲಿ ಈ ಸರ್ಕಾರ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳ ದಿರುವುದೇ ಇವತ್ತಿನ ಎಲ್ಲ್ಲಾ ಪರಿಸ್ಥಿತಿಗೆ ಕಾರಣ. ಇವತ್ತು ಶೇ.80ರಷ್ಟು ಕಾರ್ಖಾನೆ ಗಳು ಬಾಗಿಲು ಮುಚ್ಚಿವೆ. ಸರ್ಕಾರವೇ ವಿದ್ಯುತ್ ಕೊಟ್ಟು ಅಲ್ಲಿನ ಆಕ್ಸಿಜನ್ ಪ್ಲಾಂಟ್‍ಗಳಿಗೆ ಮರುಜೀವ ನೀಡಿದರೆ ಆಮ್ಲಜನಕದ ಕೊರತೆಯೇ ಬಾರದು ಎಂದು ಸಲಹೆ ನೀಡಿದರು. ಒಟ್ಟಾರೆ ನನ್ನ ಅನುಭವದಲ್ಲಿ ಹೇಳುವುದಾದರೆ ನಾನು ಅಧಿಕಾರದಲ್ಲಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ತಮ್ಮ ಆಡ ಳಿತ ವೈಖರಿಯನ್ನು ಸಮರ್ಥಿಸಿಕೊಂಡರು.

ಗೋಷ್ಠಿಯಲ್ಲಿ ಶಾಸಕರಾದ ಡಿ.ಸಿ. ತಮ್ಮಣ್ಣ, ಕೆ.ಸುರೇಶ್‍ಗೌಡ, ರವೀಂದ್ರ ಶ್ರೀಕಂಠಯ್ಯ, ಕೆ.ಅನ್ನದಾನಿ, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಾ.ದಳ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿ.ಪಂ. ಸದಸ್ಯ ಹೆಚ್.ಟಿ.ಮಂಜು, ಪಿಇಟಿ ಅಧ್ಯಕ್ಷ ವಿಜಯಾನಂದ ಇತರರಿದ್ದರು.

Translate »