- ಇಂದಿನಿಂದ ಪಾಠ ಆರಂಭ
- ರಾಜ್ಯದ 16 ಜಿಲ್ಲೆಗಳಿಂದ 102ಕ್ಕೂ ಅಧಿಕ ಪಂಚಾಯಿತಿಗಳ ಅಧಿಕಾರಿಗಳು ಭಾಗಿ
ಮೈಸೂರು,ಏ.8(ಎಂಟಿವೈ)- ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮೈಸೂರಿನ ಆಡಳಿತ ಮತ್ತು ತರಬೇತಿ ಸಂಸ್ಥೆಯು (ಎಟಿಐ) ತಾಲೂಕು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಆನ್‍ಲೈನ್ ಮೂಲಕ ಕೊರೊನಾ ವೈರಾಣು ಕುರಿತಂತೆ ಪಾಠ ಮಾಡಲಿದೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ತಾಪಂ ಹಾಗೂ ಗ್ರಾಪಂ ಅಧಿಕಾರಿ ಗಳಿಗೆ ತರಬೇತಿ ನೀಡಲು ಆನ್‍ಲೈನ್ ಮೊರೆ ಹೋಗಿರುವ ಎಟಿಐ, ಕೊರೊನಾ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಪರಿಣಾಮ ಕಾರಿ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿದೆ. ಈವರೆಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಪಾಠ ಮಾಡುತ್ತಿ ದ್ದುದ್ದನ್ನು ಕಂಡಿದ್ದೆವು. ಆದರೆ ಇದೀಗ ಎಟಿಐ ಕೂಡ ಆನ್‍ಲೈನ್ ಶಿಕ್ಷಣಕ್ಕೆ ಮೊರೆ ಹೋಗಿದೆ. ಈ ಹಿಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ನೀಡಿದ್ದ ಅನುಭವ ಹೊಂದಿರುವ ಈ ಸಂಸ್ಥೆ ಇದೀಗ ಪೂರ್ಣ ಪ್ರಮಾಣದಲ್ಲಿ ಆನ್‍ಲೈನ್ ಶಿಕ್ಷಣ ಆರಂಭಿಸಿದಂತಾಗಿದೆ.
ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಂಚಾ ಯಿತಿ ಮಟ್ಟದ ಅಧಿಕಾರಿಗಳಿಗೆ ಪೂರ್ವಸಿದ್ಧತೆ, ಸ್ಪಂದನೆ ಹಾಗೂ ವೈರಾಣು ಹರಡುವುದನ್ನು ತಡೆಗಟ್ಟುವ ಕುರಿತು ಆನ್‍ಲೈನ್ ತರಬೇತಿ ನಡೆದಿದೆ. ಆಡಳಿತ ತರಬೇತಿ ಸಂಸ್ಥೆಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರವು ಆರೋಗ್ಯ ಇಲಾಖೆಯ ಸಹ ಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೋವಿಡ್-19 ಸೇರಿದಂತೆ ಎಲ್ಲಾ ರೀತಿಯ ಜೈವಿಕ ವಿಪತ್ತುಗಳನ್ನು ನಿರ್ವಹಿ ಸುವ ಬಗೆಗೆ ತಿಳಿಸಿ ಕೊಡಲಾಗುವುದು. ಇದಕ್ಕಾಗಿ ರಾಜ್ಯದ ವಿವಿಧ ತಾಲೂಕು ಪಂಚಾಯಿತಿ ಇಒ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿ ಗಳನ್ನು ಆನ್‍ಲೈನ್‍ಗೆ ಆಹ್ವಾನಿಸಲಾಗಿದ್ದು, ಸ್ಕೈಪ್ ಅಥವಾ ಜೂಮ್ ಆ್ಯಪ್ ಇನ್‍ಸ್ಟ್ಟಾಲ್ ಮಾಡಿಕೊಳ್ಳಲು ಸೂಚಿಸಲಾಗಿದೆ.
ಏ.9ರ ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ಆನ್‍ಲೈನ್ ತರಬೇತಿ ನಡೆಯಲಿದೆ. ವಿಪತ್ತು ನಿರ್ವಹಣೆಯ ಹಿರಿಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಆರೋಗ್ಯ ಇಲಾಖೆ ಸರ್ವೇಕ್ಷಣಾ ಅಧಿಕಾರಿ ಡಾ.ಪಿ.ಚಿದಂಬರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ.ಸುಧೀರ್ ನಾಯ್ಕ್ ಆನ್‍ಲೈನ್ ಮೂಲಕ ತರಬೇತಿ ನೀಡಲಿದ್ದಾರೆ. ಈ ತರಬೇತಿಯಲ್ಲಿ 16 ಜಿಲ್ಲೆಗಳಿಂದ 102ಕ್ಕೂ ಹೆಚ್ಚು ಪಂಚಾಯಿತಿ ಗಳ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಏ.9ರಂದು ಆನ್‍ಲೈನ್ ತರಬೇತಿಯಲ್ಲಿ ಭಾಗವಹಿಸುವ ತಾಪಂ ಇಒಗಳಿಗೆ ಹಾಗೂ ಗ್ರಾಪಂ ಅಧಿಕಾರಿಗಳು ಜೂಮ್ ಆ್ಯಪ್ ಇನ್‍ಸ್ಟ್ಟಾಲ್ ಮಾಡಿ ಕೊಂಡು ಸನ್ನದ್ಧರಾಗಿದ್ದಾರೆ. ನಿಗದಿತ ಸಮಯಕ್ಕೆ ಆ್ಯಪ್ ಓಪನ್ ಮಾಡಿದರೆ ಸಂಸ್ಥೆಯಿಂದ ಕಳುಹಿಸುವ ಮೀಟಿಂಗ್ ಐಡಿ ಮತ್ತು ಪಾಸ್‍ವರ್ಡ್ ಸಂಬಂಧಪಟ್ಟ ಅಧಿಕಾರಿಗಳಿಗೆ ದೊರೆಯುತ್ತದೆ. ಅದನ್ನು ನಮೂದು ಮಾಡಿದರೆ ಆನ್‍ಲೈನ್ ತರಬೇತಿಗೆ ಸೇರಿಕೊಳ್ಳುತ್ತಾರೆ.
ಆನ್‍ಲೈನ್ ತರಬೇತಿ: ಈ ಕುರಿತಂತೆ ಆಡಳಿತ ತರಬೇತಿ ಸಂಸ್ಥೆಯ ವಿಪತ್ತು ನಿರ್ಹಹಣಾ ಕೇಂದ್ರದ ನಿರ್ದೇಶಕ ಅಶೋಕ್ ಕುಮಾರ್ ಸಂಗನಾಳ್ ಪತ್ರಕರ್ತರೊಂದಿಗೆ ಮಾತನಾಡಿ, ಕೋವಿಡ್-19ನಂತಹ ಜೈವಿಕ ವಿಪತ್ತು ಸಂಭವಿಸಿದಾಗ ಅಧಿಕಾರಿಗಳ ಪಾತ್ರ, ನಿರ್ವಹಣೆ ಹಾಗೂ ಪೂರ್ವ ಸಿದ್ಧತೆ ಕುರಿತು ತರಬೇತಿ ಆಯೋಜಿಸುವ ಅಗತ್ಯ ಹೆಚ್ಚಾಗಿದೆ. ಆದರೆ ಲಾಕ್‍ಡೌನ್‍ನಿಂದಾಗಿ ಅಧಿಕಾರಿಗಳನ್ನು ಎಟಿಐ ಕೇಂದ್ರಕ್ಕೆ ಕರೆಸಿಕೊಂಡು ತರಬೇತಿ ನೀಡಲು ಸಾಧ್ಯವಾಗಿರಲಿಲ್ಲ. ಈ ನಿಟ್ಟಿನಲ್ಲಿ ಸಂಸ್ಥೆಯು ಆನ್‍ಲೈನ್ ತರಬೇತಿಗೆ ನಿರ್ಧರಿಸಿತು. ಲಾಕ್‍ಡೌನ್ ಮುಗಿದ ಬಳಿಕವೂ ಆನ್‍ಲೈನ್ ತರಬೇತಿ ಮುಂದುವರೆಸಲು ಉದ್ದೇಶಿಸಲಾಗಿದೆ. ಸ್ಯಾಟ್‍ಲೈಟ್ ಮೂಲಕ 175 ಪಂಚಾಯಿತಿಗಳ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು ಎಂದು ವಿವರಿಸಿದ್ದಾರೆ.