ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಉಚಿತ ಡಿಜಿಟಲ್ ಗ್ರಂಥಾಲಯ ಸೇವೆ
ಮೈಸೂರು

ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಉಚಿತ ಡಿಜಿಟಲ್ ಗ್ರಂಥಾಲಯ ಸೇವೆ

April 9, 2020

ಡಿಜಿಟಲ್ ಸ್ಪರ್ಶದಿಂದ ಅಂಗೈ, ಮನೆಯಂಗಳದಲ್ಲೇ ಗ್ರಂಥಾಲಯ
ಮೈಸೂರು, ಏ.8- ಅಂಗೈ ಇಲ್ಲವೇ ಮನೆ ಯಂಗಳದಲ್ಲೇ ಗ್ರಂಥಾಲಯ ತೆರೆದುಕೊಳ್ಳಲಿದೆ! ಅದಕ್ಕೆ ಬೇಕಿರುವುದು ಅಂತರ್ಜಾಲ ಸಂಪರ್ಕಿತ ಮೊಬೈಲ್ ಇಲ್ಲವೇ ಕಂಪ್ಯೂಟರ್, ಲ್ಯಾಪ್‍ಟಾಪ್, ಮೊಬೈಲ್ ಒಂದಿದ್ದರೆ ಕುಳಿತಲ್ಲೇ ವಾಚನದಲ್ಲಿ ತಲ್ಲೀನವಾಗಬಹುದು.

ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮನೆಯಿಂದ ಹೊರಬರಲಾಗದ್ದರಿಂದ ಜ್ಞಾನಾರ್ಜನೆಗೆ ಸಾಕಷ್ಟು ಸಮಯ ವಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಡಿಜಿಟಲ್ ಗ್ರಂಥಾಲಯ ಮತ್ತು ಡಿಜಿ ಟಲ್ ಗ್ರಂಥಾಲಯ ಆ್ಯಪ್ ಸೇವೆಯನ್ನು ಉಚಿತ ವಾಗಿ ನೀಡಲು ಮುಂದಾಗಿದೆ.

ಕಲೆ, ಸಾಹಿತ್ಯ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಪುಸ್ತಕಗಳು ಮಾತ್ರವಲ್ಲದೆ, 1ರಿಂದ 12ನೇ ತರಗತಿವರೆಗಿನ ಪಠ್ಯಪುಸ್ತಕಗಳು ಇಲ್ಲಿ ಲಭ್ಯವಿವೆ. ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ರಾಜ್ಯ ಪಠ್ಯಕ್ರಮ ಮಾತ್ರವಲ್ಲದೆ, ಸಿಬಿಎಸ್‍ಇ ಹಾಗೂ ಎನ್‍ಸಿಇಆರ್‍ಟಿ ಪಠ್ಯಕ್ರಮದ ಪುಸ್ತಕಗಳು ಇಲ್ಲಿ ವಾಚನಕ್ಕೆ ದೊರೆಯಲಿವೆ.

ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಇಲ್ಲಿ ವಾಚನಕ್ಕೆ ಲಭ್ಯ ವಾಗಲಿದ್ದು, ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಅನೇಕ ಭಾಷೆಯ ಪುಸ್ತಕಗಳು ಜ್ಞಾನದಾಹ ತಣಿಸ ಲಿವೆ. ಆಡಿಯೋ ಮತ್ತು ವಿಡಿಯೋ ಪುಸ್ತಕಗಳು ಇಲ್ಲಿನ ವಿಶೇಷ. ಇಲಾಖೆಯಿಂದ ಟೆಂಡರ್ ಪಡೆದು `ಕೆ-ನಾಮಿಕ್ಸ್ ಟೆಕ್ನೊ ಸಲ್ಯೂಷನ್’ `http://www. karnatakadigitalpubliclibrary.org’ ವೆಬ್‍ಸೈಟ್ ವಿನ್ಯಾಸಗೊಳಿಸಿದೆ. ಇಲ್ಲಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳುವ ಮೂಲಕ ಡಿಜಿಟಲ್ ಗ್ರಂಥಾಲಯದ ಸೇವೆ ಪಡೆಯಬಹುದು.

ಜೊತೆಗೆ `ಇ-ಸಾರ್ವಜನಿಕ ಗ್ರಂಥಾಲಯ’ ಆ್ಯಪ್ ಡೌನ್‍ಲೋಡ್ ಮಾಡಿಕೊಂಡೂ ಸೇವೆ ಪಡೆಯಲು ಅವಕಾಶವಿದೆ. ಆದರೆ ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿಕೊಂಡಿದ್ದರೆ ಮಾತ್ರವೇ ಆ್ಯಪ್ ಸೇವೆ ಲಭ್ಯವಾಗ ಲಿದೆ. ವೆಬ್‍ಸೈಟ್‍ಗೆ ಭೇಟಿ ನೀಡಿ ನೋಂದಣಿ ಮಾಡಿದ ಅರ್ಧ ಗಂಟೆಯ ಬಳಿಕ ಸೇವೆ ಪಡೆಯಲು ಅನುಮೋ ದನೆ ದೊರೆಯಲಿದೆ. ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಸಾರ್ವಜನಿಕ ಗ್ರಂಥಾ ಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಎಸ್. ಹೊಸಮನಿ, `ಡಿಜಿಟಲ್ ಗ್ರಂಥಾಲಯ’ ಮತ್ತು `ಇ-ಸಾರ್ವಜನಿಕ ಗ್ರಂಥಾಲಯ ಆ್ಯಪ್’ ಸೇವೆಗೆ ಫೆ.26ರಂದೇ ಇಲಾಖಾ ಸಚಿವರೂ ಆದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಚಾಲನೆ ನೀಡಿದರು. ಲಾಕ್‍ಡೌನ್ ಅವಧಿಯಲ್ಲಿ ಈ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದೇವೆ. ಈವರೆಗೆ 8 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದು, ದಿನದಿಂದ ದಿನಕ್ಕೆ ನೋಂದಣಿ ಹೆಚ್ಚಾಗುವ ಮೂಲಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಇಲಾಖೆಯ ಮೈಸೂರು ಜಿಲ್ಲಾ ಉಪ ನಿರ್ದೇಶಕ ಬಿ.ಮಂಜುನಾಥ್, ವಿದ್ಯಾರ್ಥಿ ಸಮುದಾಯಕ್ಕೆ ಹಾಗೂ ಸ್ಪರ್ಧಾತ್ಮಕ ಪರೀ ಕ್ಷೆಗೆ ಸಿದ್ಧವಾಗುವವರಿಗೆ ಡಿಜಿಟಲ್ ಗ್ರಂಥಾಲಯ ಸೇವೆ ಅನುಕೂಲ. ಸದ್ಯಕ್ಕೆ ಉಚಿತ ಸೇವೆ ಲಭ್ಯವಿದೆ. ಲಾಕ್‍ಡೌನ್ ಮುಗಿದ ನಂತರ ಮೈಸೂರು ಜಿಲ್ಲೆಯ ಎಲ್ಲಾ 8 ತಾಲೂಕು ಗ್ರಂಥಾಲಯಗಳು ಸೇರಿದಂತೆ ಮೈಸೂರಿನ ಕುವೆಂಪುನಗರ ಗ್ರಂಥಾಲಯ, ಸಯ್ಯಾಜಿರಾವ್ ರಸ್ತೆಯ ಮುಖ್ಯ ಗ್ರಂಥಾಲಯ, ಸರಸ್ವತಿಪುರಂನ ಜಿಲ್ಲಾ ಕೇಂದ್ರ ಗ್ರಂಥಾಲಯಗಳಲ್ಲಿ ತಲಾ 2 ಕಂಪ್ಯೂಟರ್‍ಗಳ ಮೂಲಕ ಡಿಜಿಟಲ್ ಸೇವೆ ಕಲ್ಪಿಸಲಾಗುವುದು. ಅಂದರೆ, ಈಗ ವೆಬ್ ಸೈಟ್‍ನಲ್ಲಿರುವ ಎಲ್ಲಾ ಅಂಶಗಳು ಕಂಪ್ಯೂಟರ್‍ಗಳಲ್ಲಿ ಇನ್‍ಬಿಲ್ಟ್ ಆಗಿರಲಿವೆ. ಹೀಗಾಗಿ ಇಲ್ಲಿ ಅಂತರ್ಜಾಲ ಇಲ್ಲದಿದ್ದರೂ ಕಂಪ್ಯೂಟರ್‍ಗಳಲ್ಲಿ ಇ-ಪುಸ್ತಕಗಳನ್ನು ವಾಚನ ಮಾಡಬಹುದು ಎಂದು ವಿವರಿಸಿದರು.

ಡೌನ್‍ಲೋಡ್, ನಕಲು ಅವಕಾಶವಿಲ್ಲ
`ಲಾಕ್‍ಫ್ರೀ ಇ-ಬುಕ್ಸ್ ಡ್ಯುರಿಂಗ್ ಲಾಕ್‍ಡೌನ್’ ಶೀರ್ಷಿಕೆಯಡಿ ಲಾಕ್‍ಡೌನ್ ಅವಧಿಯಲ್ಲಿ ಡಿಜಿಟಲ್ ಗ್ರಂಥಾಲಯದ ಸೇವೆ ಉಚಿತವಾಗಿ ಕಲ್ಪಿಸಲಾಗಿದೆ. ವೆಬ್‍ಸೈಟ್‍ಗೆ `ಡಿಜಿಟಲ್ ರೈಟ್ಸ್ ಮ್ಯಾನೇಜ್‍ಮೆಂಟ್ ಸಾಫ್ಟ್‍ವೇರ್ (ಡಿಆರ್‍ಎಂಎಸ್)’ ಅಳವಡಿಸಿದ್ದು, ಹೀಗಾಗಿ ಪುಸ್ತಕದ ಪ್ರತಿ ಡೌನ್‍ಲೋಡ್ ಮತ್ತು ನಕಲು (ಕಾಪಿ) ಮಾಡಲಾಗುವುದಿಲ್ಲ. ಲಾಕ್‍ಡೌನ್ ನಂತರ ಮೊದಲ ಹಂತದಲ್ಲಿ ಎಲ್ಲಾ 30 ಜಿಲ್ಲಾ ಕೇಂದ್ರ ಗ್ರಂಥಾಲಯಗಳು, 26 ನಗರ ಕೇಂದ್ರ ಗ್ರಂಥಾಲಯಗಳು, 216 ತಾಲೂಕು ಕೇಂದ್ರ ಗ್ರಂಥಾಲಯಗಳಿಗೆ ಡಿಜಿಟಲ್ ಸ್ಪರ್ಶ ನೀಡಲಿದ್ದೇವೆ. ಅದಕ್ಕಾಗಿ ಈ ಎಲ್ಲಾ ಗ್ರಂಥಾಲಯಗಳಿಗೆ ತಲಾ 2 ಡೆಸ್ಕ್‍ಟಾಪ್ (ಕಂಪ್ಯೂಟರ್) ಹಾಗೂ 4 ಟ್ಯಾಬ್‍ಗಳ ವ್ಯವಸ್ಥೆ ಕಲ್ಪಿಸಲಾಗುವುದು. ಆ ಮೂಲಕ ಡಿಜಿಟಲ್ ಸೇವೆಯನ್ನು ಗ್ರಂಥಾಲಯಗಳಲ್ಲೂ ಪಡೆಯಬಹುದು.  -ಸತೀಶ್‍ಕುಮಾರ್ ಎಸ್.ಹೊಸಮನಿ, ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು

ಎಂ.ಬಿ.ಪವನ್ ಮೂರ್ತಿ

Translate »