- ಎರಡು ತಾಲೂಕಿನೊಳಕ್ಕೆ ಯಾರೂ ಬರುವಂಗಿಲ್ಲ, ಹೊರ ಹೋಗೋಕೂ ಬಿಡ್ತಿಲ್ಲ
- ಜಿಲ್ಲಾ ಕೇಂದ್ರ ಸಂಪೂರ್ಣ ಸ್ತಬ್ಧ, ಎಲ್ಲೆಡೆ ಪೊಲೀಸರ ನಾಕಾಬಂದಿ
ಮಂಡ್ಯ, ಏ.5(ನಾಗಯ್ಯ)- ನಾಗ ಮಂಗಲ ಮತ್ತು ಮಳವಳ್ಳಿಗೆ ಭೇಟಿ ನೀಡಿ ಮೈಸೂರಿಗೆ ತೆರಳಿದ್ದ ದೆಹಲಿಯ ನಿಜಾ ಮುದ್ದೀನ್ ಜಮಾತ್ ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಐವರು ಮೌಲ್ವಿ ಗಳಿಗೆ ಕೊರೊನಾ ಸೋಂಕು ತಗುಲಿರು ವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎರಡು ತಾಲೂಕುಗಳನ್ನು ಕಂಟೋನ್ಮೆಂಟ್ ಝೋನ್ (ರೆಡ್ ಏರಿಯಾ) ಎಂದು ಮಂಡ್ಯ ಜಿಲ್ಲಾಡಳಿತ ಘೋಷಿಸಿದೆ.
ಮೌಲ್ವಿಗಳು ನಾಗಮಂಗಲ, ಮಳವಳ್ಳಿ ಯಲ್ಲಿ ಸಂಚರಿಸಿ ಧರ್ಮಪ್ರಚಾರ ನಡೆಸಿ ದ್ದರು. ಇವರ ಜೊತೆ ಸಂಪರ್ಕದಲ್ಲಿದ್ದ ನಾಗಮಂಗಲದ 24 ಮಂದಿಯನ್ನು ಐಸೋ ಲೇಷನ್‍ನಲ್ಲಿ ಇರಿಸಲಾಗಿದೆ. ಅದೇ ರೀತಿ ಜಮಾತ್ ಸಭೆಯಲ್ಲಿದ್ದ ಮಳವಳ್ಳಿಯ 7 ಮಂದಿ ಹಾಗೂ ಅವರ ಕುಟುಂಬದ 18 ಜನರನ್ನು ಐಸೋಲೇಷನ್‍ನಲ್ಲಿ ಇರಿಸಲಾಗಿದೆ.
ಜಿಲ್ಲೆಯಲ್ಲಿ ಲಾಕ್‍ಡೌನ್ ಮತ್ತಷ್ಟು ಬಿಗಿ: ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಸೋಂಕಿಲ್ಲದೇ ನೆಮ್ಮದಿಯಿಂದ ಇದ್ದ ಮಂಡ್ಯ ಜಿಲ್ಲಾಡಳಿತ ದೆಹಲಿಯ ಜಮಾತ್ ನಂಟಿದೆ ಎಂಬ ಸುಳಿವು ಹೊರ ಬೀಳುತ್ತಿದ್ದಂತೆಯೇ ಶನಿವಾರದಿಂದ ಈಚೆಗೆ ಲಾಕ್‍ಡೌನ್ ಅನ್ನು ಮತ್ತಷ್ಟು ಬಿಗಿಗೊಳಿಸಿದೆ.
ನಾಗಮಂಗಲ, ಮಳವಳ್ಳಿ ಮತ್ತು ಕೆ.ಆರ್.ಪೇಟೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸ ಲಾಗಿದೆ. ಮಾಂಸ, ಮೀನು ಮಾರಾಟವನ್ನೂ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದರಿಂದ ಜಿಲ್ಲಾದ್ಯಂತ ಭಾನುವಾರ ಸಂಪೂರ್ಣವಾಗಿ ಮಾಂಸ ಮತ್ತು ಮೀನು ಮಾರಾಟ ಬಂದ್ ಆಗಿತ್ತು.
ಬೆಳಿಗ್ಗೆ ನಗರದಲ್ಲಿ ಮಾರುಕಟ್ಟೆ ವ್ಯವಹಾರ ಮುಗಿಯುತ್ತಿದ್ದಂತೆಯೇ ಪೊಲೀಸರು ನಾಕಾಬಂದಿಯನ್ನು ಹಾಕುವ ಮೂಲಕ ಸಂಚಾರವನ್ನು ನಿರ್ಬಂಧಿಸಿದ್ದರು. ಜಿಲ್ಲಾ ಕೇಂದ್ರದ ಪ್ರಮುಖ ಬೀದಿಗಳಾದ ಪೇಟೆಬೀದಿ, ಗುತ್ತಲು ರಸ್ತೆ, ವಿ.ವಿ.ರಸ್ತೆ, ಆರ್.ಪಿ, 100ಅಡಿ ರಸ್ತೆ ಸೇರಿದಂತೆ ಇತರೆಡೆಗಳಲ್ಲಿ ಬೇಕರಿ, ಮಾಂಸದ ಅಂಗಡಿ, ಟೈಲರ್ ಅಂಗಡಿ, ಸೆಲೂನ್ ಶಾಪ್‍ಗಳು ಸೇರಿದಂತೆ ಇತರೆಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಲಾಗಿತ್ತು. ಇದರ ಜೊತೆಗೆ, ರಸ್ತೆ ಬದಿಯ ಸೊಪ್ಪು ತರಕಾರಿ, ಹಣ್ಣು ಮಾರಾಟ ಮಾಡುತ್ತಿದ್ದ ಕೈ ಗಾಡಿಗಳನ್ನೂ ತೆರವುಗೊಳಿಸಲಾಗಿತ್ತು. ಮುಖ್ಯ ಕೆಲಸ ಕಾರ್ಯಗಳಿಗೆ ತೆರಳುವ ವಾಹನಗಳಿಗಷ್ಟೇ ಸಂಚಾರಕ್ಕೆ ಅವಕಾಶ ಮಾಡಿಕೊಡಲಾ ಗಿತ್ತು. ಒಟ್ಟಾರೆ ಮಂಡ್ಯ ನಗರ ಲಾಕ್‍ಡೌನ್ ತೀವ್ರತೆಯಿಂದ ಮತ್ತಷ್ಟು ಸ್ತಬ್ಧಗೊಂಡಿದೆ.
ನಾಗಮಂಗಲ ರೆಡ್ ಝೋನ್: 24 ಮಂದಿ ಕೊರೊನಾ ಶಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ನಾಗಮಂಗಲ ತಾಲೂಕು ಅನ್ನು ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ನಾಗಮಂಗಲ ಪಟ್ಟಣ, ಬೆಳ್ಳೂರು ಸಂಪೂರ್ಣ ಬಂದ್ ಆಗಿತ್ತು. ಬೆಳಿಗ್ಗೆ 6ರಿಂದ 10ರವರೆಗೆ ದಿನಸಿ ಮತ್ತು ತರಕಾರಿ ಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
ಮಲ್ಲೇನಹಳ್ಳಿ, ಪಾಲಗ್ರಹಾರ, ಬಳಪಮನ ಮಂಟಿಕೊಪ್ಪಲು, ಸಾರೇಮೇಗಲಕೊಪ್ಪಲು ಹಾಗೂ ಪಟ್ಟಣದ ಮಾರುತಿ ನಗರದ ಹಾಲಿನ ಕೇಂದ್ರಗಳಲ್ಲಿ ಹಾಲು ವಿತರಣೆ ಸಂಪೂರ್ಣ ಬಂದ್ ಮಾಡಲಾಗಿತ್ತು.
ಪೆಟ್ರೋಲ್ ಬಂಕ್‍ಗಳಲ್ಲಿ ಸರ್ಕಾರಿ ವಾಹನ, ಪೊಲೀಸ್, ಆರೋಗ್ಯ ಇಲಾಖೆ, ಪತ್ರಕರ್ತರನ್ನು ಹೊರತುಪಡಿಸಿ ಎಲ್ಲಾ ಸಾರ್ವಜನಿಕರ ವಾಹನಗಳಿಗೆ ಪೆಟ್ರೋಲ್ ನಿಷೇಧಿಸಲಾಗಿತ್ತು. ತರಕಾರಿ ದಿನಸಿ ಹಾಲಿನ ವಾಹನ ಹೊರತುಪಡಿಸಿ ಬೇರಾವುದೇ ವಾಹನವನ್ನು ಪಟ್ಟಣದೊಳಕ್ಕೆ ಅಥವಾ ಹೊರಕ್ಕೆ ಹೋಗಲು ಅವಕಾಶ ನಿಷೇಧಿಸಲಾಗಿತ್ತು.
ಪಟ್ಟಣದ ಮಂಡ್ಯ ರಸ್ತೆ, ಮೈಸೂರು ರಸ್ತೆ, ದಲಿತರ ಕಾಲೋನಿ, ಮೇಗಳಕೇರಿ, ಬ್ರಾಹ್ಮಣರ ಬೀದಿ, ಬಣಜಿಗರ ಬೀದಿ, ಕುಂಬಾರರ ಬೀದಿ ಸೇರಿದಂತೆ ಇತರೆ ಬಡಾ ವಣೆಗಳಲ್ಲಿ ಸ್ವಯಂಕೃತವಾಗಿ ಜನರು ನಾಕಾ ಬಂದಿ ನಿರ್ಮಿಸಿಕೊಂಡಿದ್ದು ಕಂಡು ಬಂತು.
ಬೆಳಿಗ್ಗೆ ಸರ್ಕಾರದಿಂದ ನೀಡುವ ಉಚಿತ ಹಾಲನ್ನು ಪಟ್ಟಣದ ಕೆಲವು ಬಡಾ ವಣೆ ಹಾಗೂ ಕೊಳಚೆ ಪ್ರದೇಶದಲ್ಲಿ ಮಾತ್ರ ವಿತರಿಸಲಾಯಿತು. ಬೆಳ್ಳೂರು ಕ್ರಾಸ್ ಮತ್ತು ನಾಗಮಂಗಲ ಪಟ್ಟಣದಲ್ಲಿ ತೀವ್ರ ನಿಗಾವಹಿಸಲಾಗಿದ್ದು ಒಟ್ಟಾರೆ ನಾಗ ಮಂಗಲ ಕಂಟೋನ್ಮೆಂಟ್ ಝೋನ್‍ಗೆ ಒಳಗಾಗಿತ್ತು.
ಮಳವಳ್ಳಿ ಸೆನ್ಸಿಟಿವ್ ಝೋನ್: ಮಳವಳ್ಳಿ ಯಲ್ಲಿಯೂ ಸಹ ಕೊರೊನಾ ಶಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ತಾಲೂಕಿ ನಾದ್ಯಂತ ಇಂದು ಲಾಕ್‍ಡೌನ್‍ನನ್ನು ತೀವ್ರಗೊಳಿಸಿ ಕಟ್ಟೆಚ್ಚರಗೊಳಿಸಲಾಗಿತ್ತು.
ಬೆಳಿಗ್ಗೆ 6ರಿಂದ 10ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿ ಬಳಿಕ ಇಡೀ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಲಾಯಿತು. ಕೊರೊನಾ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಮಂದಿಯನ್ನು ಈಗಾಗಲೇ ಐಸೋಲೇಷನ್‍ನಲ್ಲಿ ಇರಿಸ ಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿ ದಂತೆ ಭಾನುವಾರ ಮತ್ತೆ 35 ಮಂದಿ ಯನ್ನು ಬಾಚನಹಳ್ಳಿಯ ಮೊರಾರ್ಜಿದೇ ಸಾಯಿ ವಸತಿ ಶಾಲೆಯ ಕ್ವಾರೆಂಟೆನ್‍ನಲ್ಲಿ ಇಡಲಾಗಿದ್ದು ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ತಹಶೀ ಲ್ದಾರ್ ಚಂದ್ರಮೌಳಿ ಹಾಗೂ ಆರೋ ಗ್ಯಾಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಪ್ರಸ್ತುತ 35 ಮಂದಿಗೆ ಯಾವುದೇ ಸೋಂಕಿನ ಲಕ್ಷಣಗಳಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕ ಟೇಶ್ ತಿಳಿಸಿದರು. ಅದೇ ರಿತಿ ಕೆ.ಆರ್. ಪೇಟೆ ಪಟ್ಟಣದಲ್ಲಿಯೂ ಸಹ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಒಟ್ಟಾರೆ ಇಡೀ ಜಿಲ್ಲಾದ್ಯಂತ ಲಾಕ್‍ಡೌನ್ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.
ಏ. 14ರವರೆಗೆ ಅಂಗಡಿ ಮುಂಗಟ್ಟು ಬಂದ್
ಮಂಡ್ಯ, ಏ.5- ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸೂಕ್ಷ್ಮ ಪ್ರದೇಶಗಳಾದ ಮಳವಳ್ಳಿ ಮತ್ತು ನಾಗಮಂಗಲ ತಾಲೂಕಿನಾದ್ಯಂತ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಏ. 14ರವರೆಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
10 ಮಂದಿ ದೆಹಲಿಯ ಮೌಲ್ವಿಗಳು, ತಬ್ಲಿಘಿ ಜಮಾತ್‍ನಲ್ಲಿ ಭಾಗವಹಿಸಿದ್ದ ಮಳವಳ್ಳಿಯ 7 ಮಂದಿ, ಮಳವಳ್ಳಿ ಮತ್ತು ನಾಗಮಂಗಲದ ಹಲವು ಮಸೀದಿ ಮತ್ತು ಮನೆಗಳಿಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮಕೈಗೊಳ್ಳುವ ಅಗತ್ಯತೆಯಿರುವುದರಿಂದ ಈ ಆದೇಶ ಹೊರಡಿಸಲಾಗಿದೆ. ನಾಗಮಂಗಲ ಮತ್ತು ಮಳವಳ್ಳಿಯಲ್ಲಿ ಪ್ರಥಮ ಮತ್ತು ಎರಡನೇ ಸಂಪರ್ಕಕ್ಕೆ ಹಲವು ಜನರು ಇರುವ ಬಗ್ಗೆ ಶಂಕೆಯಿದ್ದು ಈ ಎರಡು ತಾಲೂಕಿನಲ್ಲಿ ಅತ್ಯಗತ್ಯ ಸರಕು ಸೇವೆ ಹೊರತುಪಡಿಸಿ ಎಲ್ಲಾ ರೀತಿಯ ಸಾರ್ವಜನಿಕ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
12 ಮಂದಿಯ ರಕ್ತ ಪರೀಕ್ಷೆಗೆ ರವಾನೆ
ಮಂಡ್ಯ, ಏ.5- ಇಂದಿನ ಕೊರೊನಾ ಹೆಲ್ತ್ ಬುಲೇಟಿನನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದ್ದು, ಕೊರೊನಾ ವೈರಸ್ ಶಂಕೆಯ ಹಿನ್ನೆಲೆಯಲ್ಲಿ ಭಾನುವಾರ 12 ಮಂದಿಯ ರಕ್ತವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಸೋಂಕು ದೃಢಪಟ್ಟಿಲ್ಲ. ಈ ಹಿಂದೆ 11 ಮಂದಿಯ ರಕ್ತಪರೀಕ್ಷೆ ಫಲಿತಾಂಶ ಬಂದಿದ್ದು ಅವರಲ್ಲಿಯೂ ಯಾವುದೇ ಸೋಂಕು ಇಲ್ಲ ಎಂದು ತಿಳಿಸಲಾಗಿದೆ. 107 ಮಂದಿಯನ್ನು ಕಡ್ಡಾಯವಾಗಿ ಗೃಹ ವಾಸ್ತವ್ಯಕ್ಕೆ ಒಳಪಡಿಸಲಾಗಿದ್ದು ನಾಗಮಂಗಲ ಮತ್ತು ಮಳವಳ್ಳಿಗೆ ಬಂದಿದ್ದಂತಹ ದೆಹಲಿಯ ಕೊರೊನಾ ಸೋಂಕು ದೃಢಪಟ್ಟಿರುವ ಮೌಲ್ವಿಗಳ ಸಂಪರ್ಕದಲ್ಲಿದ್ದ ಮಳವಳ್ಳಿಯ 41 ಮಂದಿ ಮತ್ತು ನಾಗಮಂಗಲದ 24 ಮಂದಿಯನ್ನು ತೀವ್ರ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು 12 ಮಂದಿ 14 ದಿನಗಳ ಗೃಹವಾಸ್ತವ್ಯ ಪೂರ್ಣಗೊಳಿಸಿದ್ದು ಕ್ವಾರೆಂಟೈನ್‍ನಲ್ಲಿ 12 ಮಂದಿಯನ್ನು ಇರಿಸಲಾಗಿದೆ. ಇನ್ನೂ ಇಬ್ಬರು ಕಡ್ಡಾಯ ಗೃಹವಾಸ್ತವ್ಯವನ್ನು ಪೂರೈಸಬೇಕಾಗಿದೆ ಎಂದು ತಿಳಿಸಲಾಗಿದೆ.