ಕೊರೊನಾ ಭೀತಿ: ಶ್ರೀಕಂಠೇಶ್ವರನ ಮೊರೆ ಹೋದ ನಂಜನಗೂಡಿನ ಜನತೆ
ಮೈಸೂರು ಗ್ರಾಮಾಂತರ

ಕೊರೊನಾ ಭೀತಿ: ಶ್ರೀಕಂಠೇಶ್ವರನ ಮೊರೆ ಹೋದ ನಂಜನಗೂಡಿನ ಜನತೆ

May 8, 2020

ನಂಜನಗೂಡು, ಮೇ 7(ರವಿ)- ಕೊರೊನಾ ಹಾಟ್‍ಸ್ಪಾಟ್ ಎಂದೇ ಬಿಂಬಿತವಾಗಿ ರುವ ನಂಜನಗೂಡಿನಲ್ಲಿ ಕೊರೊನಾ ಭೀತಿ ಹೋಗಲಾಡಿಸಿ, ನಗರದ ಜನರ ಆತಂಕ ದೂರ ವಾಗಲೆಂದು ಗುರುವಾರ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಮೃತ್ಯುಂಜಯ ಹೋಮ ಹಾಗೂ ವಿಶೇಷ ಪೂಜಾ ಕೈಂಕರ್ಯ ನಡೆಸಲಾಯಿತು.

ದೇವಾಲಯದ ವಸಂತ ಮಂಟಪದಲ್ಲಿ ಶ್ರೀಕಂಠೇಶ್ವರಸ್ವಾಮಿ ಹಾಗೂ ಪಾರ್ವತಿದೇವಿ ಅಮ್ಮನವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಾಲಯದ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಅರ್ಚಕರು ಸತತ ಎರಡೂವರೆ ತಾಸು ರುದ್ರ ಹೋಮ ಹಾಗೂ ಮೃತ್ಯುಂಜಯ ಹೋಮ ನೆರವೇರಿಸಿದರು.

ಧಾರ್ಮಿಕ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಶಾಸಕ ಬಿ.ಹರ್ಷವರ್ಧನ್ ಮಾತ ನಾಡಿ, ಭವರೋಗ ಹರ ಖ್ಯಾತಿಯ ನಂಜುಂಡೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಕೊರೊನಾ ಎದುರಿಸಲು ಮಾನಸಿಕ ಸ್ಥೈರ್ಯಕ್ಕೆ ನೆರವಾಗುವಂತೆ ಭಕ್ತರು ಮನವಿ ಮಾಡಿದ್ದರು. ಜೊತೆಗೆ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರೂ ವಿಶೇಷ ಹೋಮ ಕೈಗೊಳ್ಳಲು ಸಲಹೆ ನೀಡಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೊರೊನಾ ಸಂಕಷ್ಟ ವನ್ನು ಸಮರ್ಥವಾಗಿ ನಿಭಾಯಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೆಚ್ಚಿನ ಶಕ್ತಿ ನೀಡುವಂತೆಯೂ, ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಭಾಗ್ಯ ನೀಡುವಂತೆಯೂ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ’ ಎಂದರು.

ಜುಬಿಲಂಟ್ ಕಾರ್ಖಾನೆಯ ಮೂಲಕ 59 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಶ್ರೀಕಂಠೇಶ್ವರಸ್ವಾಮಿ ಅನುಗ್ರಹದೊಂದಿಗೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಕೊರೊನಾವನ್ನು ಸಮರ್ಥವಾಗಿ ಮೆಟ್ಟಿ ನಿಲ್ಲಲು ಯಶಸ್ವಿಯಾಗಿದೆ. ಐದಾರು ದಿನಗಳಲ್ಲಿ ಸೋಂಕಿತರೆಲ್ಲರೂ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸಲು ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆರ್.ಇಂಧನ್ ಬಾಬು, ಸದಸ್ಯರಾದ ಎನ್.ಟಿ.ಗಿರೀಶ್, ಎಂ.ಶ್ರೀಧರ್, ಶಶಿರೇಖಾ, ಮಂಜುಳ ಮಧು, ಪುಟ್ಟಸಿದ್ದಶೆಟ್ಟಿ, ಶಿವನಂಜು, ಮಾದೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Translate »