ಕೊರೊನಾ ಲೆಕ್ಕಿಸದೇ ಹೂ, ಪೂಜಾ  ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನರು
ಮೈಸೂರು

ಕೊರೊನಾ ಲೆಕ್ಕಿಸದೇ ಹೂ, ಪೂಜಾ ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನರು

August 20, 2021

ಮೈಸೂರು, ಆ.19 (ಆರ್‍ಕೆ)- ವರಮಹಾಲಕ್ಷ್ಮಿ ಹಬ್ಬಕ್ಕೆ ಪೂಜಾ ಸಾಮಗ್ರಿ ಖರೀದಿಸುವ ಭರದಲ್ಲಿ ಕೊರೊನಾ ಸೋಂಕನ್ನೂ ಲೆಕ್ಕಿಸದೇ ಸಾವಿರಾರು ಸಂಖ್ಯೆಯಲ್ಲಿ ಜನರು ಮುಗಿ ಬೀಳುತ್ತಿದ್ದರು.

ದೇವರಾಜ ಮಾರುಕಟ್ಟೆಯಲ್ಲಿ ಹೆಚ್ಚು ಜನದಟ್ಟಣೆ ಉಂಟಾಗಿ ಕೊರೊನಾ ಸೋಂಕು ಹರಡಲಿದೆ ಎಂಬ ಕಾರಣಕ್ಕೆ ಅಲ್ಲಿನ ಹೂ ಮಾರಾಟವನ್ನು ವಿಶಾಲ ಪ್ರದೇಶ ಜೆಕೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆಯಾದರೂ, ಅಲ್ಲಿಯೂ ಸಾವಿರಾರು ಮಂದಿ ಜಮಾಯಿಸಿ ಹೂ, ಹಣ್ಣು, ಪೂಜಾ ಸಾಮಗ್ರಿ, ಬಾಳೆಕಂದು ಖರೀದಿ ಸುತ್ತಿದ್ದು, ಸಾಮಾಜಿಕ ಅಂತರ ಮಾಯವಾಗಿದೆ.

ಅಲ್ಲಿಯೂ ಯಾವುದೇ ಕೋವಿಡ್ ಮಾರ್ಗಸೂಚಿ ಯನ್ನೂ ಪಾಲಿಸದೇ ಗುಂಪಾಗಿ ಸೇರುತ್ತಿದ್ದು, ಮುಗಿ ಬಿದ್ದು ಪದಾರ್ಥಗಳ ಖರೀದಿಯಲ್ಲಿ ತೊಡಗಿರುವು ದರಿಂದ ಸೋಂಕು ಸಮುದಾಯಕ್ಕೆ ಹರಡುವ ಭೀತಿ ಎದುರಾಗಿದೆ. ಮಾಸ್ಕ್ ಧರಿಸುವುದಾಗಲೀ, ಸ್ಯಾನಿಟೈಸರ್ ನಿಂದ ಕೈಸ್ವಚ್ಛಗೊಳಿಸಿಕೊಳ್ಳುವುದಾಗಲಿ, ಅಂತರ ಕಾಪಾಡುವುದನ್ನು ವರ್ತಕರಾಗಲೀ, ಗ್ರಾಹಕರಾಗಲೀ ಅಥವಾ ಸಾರ್ವಜನಿಕರಾಗಲೀ ಪಾಲಿಸುತ್ತಿಲ್ಲ.
ಕೇವಲ ಜೆಕೆ ಮೈದಾನವಷ್ಟೇ ಅಲ್ಲದೆ, ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ, ಶಿವರಾಂಪೇಟೆ, ಸಂತೆ ಪೇಟೆ, ಮಕ್ಕಾಜಿ ಚೌಕ, ಗಾಂಧಿಸ್ಕ್ವೇರ್, ಅರಸು ರಸ್ತೆ ಯಲ್ಲೂ ಜನದಟ್ಟಣೆ ಇದ್ದು, ಯಾರೂ ಕೋವಿಡ್ ಕಾರ್ಯಸೂಚಿಯನ್ನು ಪಾಲಿಸದೇ ವರಮಹಾಲಕ್ಷ್ಮಿ ಹಬ್ಬಕ್ಕೆ ಸಾಮಗ್ರಿ ಖರೀದಿಸಲು ಮುಗಿಬೀಳುತ್ತಿದ್ದಾರೆ.

ಈ ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾದ್ದರಿಂದ ಜಿಲ್ಲಾಧಿ ಕಾರಿ ಡಾ|| ಬಗಾದಿ ಗೌತಮ್ ಅಗತ್ಯ ಸುರಕ್ಷತಾ ಕ್ರಮ ಗಳನ್ನು ಕೈಗೊಳ್ಳುವಂತೆ ಪಾಲಿಕೆ ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸರಿಗೆ ಸೂಚನೆ ನೀಡಿರುವ ಹಿನ್ನೆಲೆ ಯಲ್ಲಿ ದೇವರಾಜ ಠಾಣೆ ಇನ್‍ಸ್ಪೆಕ್ಟರ್ ದಿವಾಕರ್, ಸಬ್ ಇನ್‍ಸ್ಪೆಕ್ಟರ್ ರಾಜು ತಮ್ಮ ವ್ಯಾಪ್ತಿಯ ಹೂವಿನ ವ್ಯಾಪಾರ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡುತ್ತಿದ್ದರೂ, ಜನರು ಅದನ್ನು ಲೆಕ್ಕಿಸುತ್ತಿಲ್ಲ

ಹಬ್ಬದ ಮುನ್ನಾ ದಿನವಾದ ಗುರುವಾರ ಖರೀದಿ ಜೋರಾಗಿದ್ದು, ನಾಳೆ (ಆ.20) ಜನರು ಇನ್ನೂ ಹೆಚ್ಚಾಗಿ ಸೇರುವ ಸಾಧ್ಯತೆ ಇರುವುದರಿಂದ ಜನಜಂಗುಳಿ ನಿಯಂ ತ್ರಿಸಲು ಪೊಲೀಸರು ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ದ್ದಾರೆ. ನಗರ ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿ ಸಹ ಆಗಿಂದಾಗ್ಗೆ ಭೇಟಿ ನೀಡಿ ಕೋವಿಡ್ ಮಾರ್ಗ ಸೂಚಿ ಉಲ್ಲಂಘನೆಯಾಗದಂತೆ ಪ್ರಯತ್ನಿಸುತ್ತಿದ್ದರಾ ದರೂ ವರ್ತಕರು ಹಾಗೂ ಗ್ರಾಹಕರಿಗೆ ಅವರ ಬಗ್ಗೆ ಕಿಂಚಿತ್ತೂ ಆತಂಕವಿಲ್ಲದಿರುವುದು ಕಂಡುಬರುತ್ತಿದೆ.

Translate »