ಮೈಸೂರು ವಿವಿ ವಿವಿಧ ಕಟ್ಟಡ, ಯೋಜನೆಗಳ ಉದ್ಘಾಟನೆ
ಮೈಸೂರು

ಮೈಸೂರು ವಿವಿ ವಿವಿಧ ಕಟ್ಟಡ, ಯೋಜನೆಗಳ ಉದ್ಘಾಟನೆ

August 20, 2021

ಮೈಸೂರು,ಆ.19(ಆರ್‍ಕೆ)-ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್‍ನಾರಾಯಣ ಅವರು ಮೈಸೂರು ವಿಶ್ವವಿದ್ಯಾನಿಲಯ ನಿರ್ಮಿಸಿರುವ ವಿವಿಧ ಕಟ್ಟಡಗಳು ಹಾಗೂ ಜಾರಿಗೆ ತಂದಿ ರುವ ಹಲವು ಯೋಜನೆಗಳನ್ನು ನಾಳೆ(ಆ.20) ಉದ್ಘಾಟಿಸುವರು.

ಕ್ರಾಫರ್ಡ್ ಭವನದಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರು, ಶುಕ್ರವಾರ ಮಧ್ಯಾಹ್ನ 2.30 ಗಂಟೆಗೆ ಆಯೋಜಿಸಿರುವ ಸಮಾರಂಭದಲ್ಲಿ ಸಚಿವರು ಕೆರಿಯರ್ ಹಬ್, ನೂತನ ವಿದ್ಯಾರ್ಥಿನಿಲಯ, ಸೆಂಟರ್ ಆಫ್ ಎಕ್ಸ್‍ಲೆನ್ಸ್‍ನ ವಿಸ್ತರಣಾ ವಿಭಾಗ, ಹಾಸನ ಸ್ನಾತಕೋತ್ತರ ಕೇಂದ್ರದ ನೂತನ ಶೈಕ್ಷಣಿಕ ಭವನ ಸೇರಿದಂತೆ ವಿವಿಧ ಕಟ್ಟಡಗಳನ್ನು ಉದ್ಘಾಟಿಸುವರು ಎಂದರು.

ಕೇಂದ್ರ ಸರ್ಕಾರದ ರೂಸಾ ಯೋಜನೆಯಡಿ ನಿರ್ಮಿಸಿ ರುವ ಕೆರಿಯರ್ ಹಬ್‍ನಿಂದ ವಿಶ್ವವಿದ್ಯಾನಿಲಯ ಮತ್ತು ಅದರ ಅಂಗ ಕಾಲೇಜುಗಳ 1,28,000 ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ.

ವಿದ್ಯಾರ್ಥಿನಿಲಯ: ಸಂಶೋಧನಾ ವಿದ್ಯಾರ್ಥಿಗಳಿಗಾಗಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಿದ್ಯಾರ್ಥಿನಿಲಯ ಕಟ್ಟಡದಲ್ಲಿ 72 ಕೊಠಡಿಗಳಿದ್ದು, ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸೆಂಟರ್ ಆಫ್ ಎಕ್ಸ್‍ಲೆನ್ಸ್ : ಗಣಕ ವಿಜ್ಞಾನ ಅಧ್ಯಯನ ವಿಭಾಗದಲ್ಲಿ 2ನೇ ಮಹಡಿ ನಿರ್ಮಿಸಿದ್ದು, ಸೆಂಟರ್ ಆಫ್ ಎಕ್ಸ್ ಲೆನ್ಸ್ ಸ್ಥಾಪಿಸಲಾಗಿದೆ. 100 ವಿದ್ಯಾರ್ಥಿಗಳು ಗೂಗಲ್ ಕ್ಲೌಡ್ ಕಂಪ್ಯೂಟಿಂಗ್ ಫೌಂಡೇಷನ್ಸ್‍ನಲ್ಲಿ ತರಬೇತಿ ಪಡೆಯುವರು.

ನೂತನ ಶೈಕ್ಷಣಿಕ ಭವನ : ಹಾಸನದಲ್ಲಿರುವ ಮೈಸೂರು ವಿವಿ ಪಿಜಿ ಸೆಂಟರ್‍ನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನೂತನ ಶೈಕ್ಷಣಿಕ ಭವನ ನಿರ್ಮಿಸಲಾಗಿದೆ. ಆಡಳಿತ ಕಚೇರಿ, ತರಗತಿ ಕೊಠಡಿಗಳನ್ನು ಕಟ್ಟಡ ಹೊಂದಿದೆ. ಕುವೆಂಪು ಅಧ್ಯಯನ ಸಂಸ್ಥೆಯಲ್ಲಿ ಮೊದಲನೇ ಮಹಡಿ, ಯುವರಾಜ ಕಾಲೇಜಿನಲ್ಲಿ 4 ಕೊಠಡಿಗಳನ್ನು ಸಚಿವರು ಉದ್ಘಾಟಿಸುವರು ಎಂದರು.

ಮಾನಸ ರೇಡಿಯೋ : ವಿಶ್ವವಿದ್ಯಾನಿಲಯದ ಸಂವಹನ ಮತ್ತು ಅಧ್ಯಯನ ವಿಭಾಗದ ವತಿಯಿಂದ ಕಮ್ಯೂನಿಟಿ ರೇಡಿಯೋ ಸ್ಟೇಷನ್ ಸ್ಥಾಪಿಸಲಾಗಿದ್ದು, ಅದಕ್ಕೆ `ಮಾನಸ ರೇಡಿಯೋ’ ಎಂಬ ಶೀರ್ಷಿಕೆ ಇರಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಆರ್.ಶಿವಪ್ಪ ಉಪಸ್ಥಿತರಿದ್ದರು.

Translate »